• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೋರ್ ಬಾಬುಲಾಲ್ ಯಾರು? ಆತನ ದಂಧೆಯೇನು?

By ಜಿ.ಎಂ. ರೋಹಿಣಿ, ಬಳ್ಳಾರಿ
|

ಬಳ್ಳಾರಿ, ಏ. 14 : ಕೋಟ್ಯಾಂತರ ರುಪಾಯಿ ನಗದು, ಆಭರಣ, ಚೆಕ್, ಬಾಂಡ್ ಗಳನ್ನು ಮನೆಯಲ್ಲೇ ಪೇರಿಸಿಟ್ಟುಕೊಂಡು ಸಿಕ್ಕಿಬಿದ್ದಿರುವ 'ಚೋರ್‌' ಬಾಬುಲಾಲ್ ಯಾರು? ಆತನ ಹೆಸರ ಹಿಂದೆ 'ಚೋರ್' ಎಂಬ ಅನ್ವರ್ಥಕ ನಾಮ ಅಂಟಿದ್ದಾದರೂ ಹೇಗೆ? ಆತನ ಮೂಲ, ಹಿನ್ನಲೆ ಏನು? ಈತ ನಡೆಸುತ್ತಿದ್ದ ವ್ಯವಹಾರವಾದರೂ ಎಂಥದು? ಇಷ್ಟೆಲ್ಲಾ ಲಾಭ ಇರುವ ದಂಧೆ ಆದರೂ ಯಾವುದು? ಆತನ ಹಿಂದೆ ಯಾರ್ಯಾರಿದ್ದಾರೆ?

ಲೋಕಸಭೆ ಚುನಾವಣೆ ಇನ್ನು ಕೆಲವೇ ದಿನಗಳಿರುವಾಗ ಆತನಿಂದ ವಶಪಡಿಸಿಕೊಳ್ಳಲಾದ ಭಾರೀ ಹವಾಲಾ ಹಣ ಅನೇಕರ ಹುಬ್ಬೇರುವಂತೆ ಮಾಡಿದೆ. ಇಂಥ ಹಲವಾರು ಪ್ರಶ್ನೆಗಳು ಬಳ್ಳಾರಿಯಲ್ಲಿ ಓಡಾಡುತ್ತಿವೆ. ಆತನ ಬಳಿಯಿದ್ದ ಹಣ ಎಣಿಸಲು 8 ತಾಸು ತೆಗೆದುಕೊಂಡಿದ್ದಾರೆ ಎಂದರೆ ಆತ ಎಂಥವನಿರಬಹುದು? ರೆಡ್ಡಿ ಸಹೋದರರಿಗೇ ಸಾಲ ನೀಡಿದ್ದಾನೆಂದರೆ ಆತ ಎಂಥ ಕುಳನಿರಬಹುದು ಲೆಕ್ಕ ಹಾಕಿ!

ಚೋರ್‌ ಬಾಬುಲಾಲ್‌ನ ನೈಜ ಹೆಸರು ಬಾಬುಲಾಲ್ ಪರಶುರಾಂಪುರಿಯ (65). ಮೂಲ ರಾಜಸ್ಥಾನ. ಬಳ್ಳಾರಿಯ ವಿಭೂತಿಗುಡ್ಡ ಮೈನಿಂಗ್ ಕಂಪನಿಯಲ್ಲಿ ಕ್ಯಾಶಿಯರ್ ಕಂ ಮ್ಯಾನೇಜರ್ ಕೆಲಸಕ್ಕಾಗಿ 80ರ ದಶಕದಲ್ಲಿ ಬಳ್ಳಾರಿಗೆ ಆಗಮನ. ಬಳ್ಳಾರಿಗೆ ಬಂದಿದ್ದೇ ಈತನ ಹಣೆಬರಹ ಬದಲಾಯಿತು. ಆತನದು ಮಾತ್ರವಲ್ಲ ಹಲವರ ಹಣೆಬರಹವನ್ನು ಬಳ್ಳಾರಿ ಬದಲಾಯಿಸಿದೆ. ಯಾರ್ಯಾರ ಹಣೆಬರಹದಲ್ಲಿ ಏನೇನು ಬರೆದಿರುತ್ತದೋ?

ಸರಿ, ಇಲ್ಲೇ ಠಿಕಾಣಿ ಹೂಡಿದ ಚೋರ್, ಕಬ್ಬಿಣದ ಅದಿರು, ಮ್ಯಾಂಗನೀಸ್, ಕಲ್ಲಿದ್ದಲು ಟ್ರೇಡಿಂಗ್, ಟ್ರಾನ್ಸ್‌ಪೋರ್ಟೇಷನ್ ಅಲ್ಲದೇ ಕಬ್ಬಿಣದ ಅದಿರು ಉದ್ಯಮದ ಎಲ್ಲಾ ರೀತಿಯ ಉಪ ಉತ್ಪನ್ನಗಳ ಖರೀದಿ, ವಿಲೇವಾರಿ, ಮಾರಾಟ ಇನ್ನಿತರೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ವಿವಿಧ ಮೈನಿಂಗ್ ಕಂಪನಿಗಳ ಕಬ್ಬಿಣದ ಅದಿರನ್ನು ಕಳ್ಳತನದಿಂದ ಖರೀದಿ - ಮಾರಾಟ ಮಾಡಿ ಕೋಟ್ಯಂತರ ರುಪಾಯಿಗಳಿಂದ ಥೈಲಿ ತುಂಬಿಸಿಕೊಂಡ. [ದುಡ್ಡು ಎಣಿಸುವಷ್ಟರಲ್ಲಿ ಸುಸ್ತೋ ಸುಸ್ತು]

ಸರಕಾರಕ್ಕೆ ನಾಮ : ದಂಧೆ ಚಿಗುರಿ ಮರವಾಗುತ್ತಿದ್ದಂತೆ, ಕೆಲಸಕ್ಕೆ ರಾಜೀನಾಮೆ ಬಿಸಾಕಿ, ಎಲ್ಲಾ ವ್ಯವಹಾರಗಳಲ್ಲಿ ಸರ್ಕಾರಕ್ಕೆ ಪಾವತಿಸುವ ತೆರಿಗೆಯನ್ನು ವ್ಯವಸ್ಥಿತವಾಗಿ ವಂಚಿಸುವಲ್ಲಿ ಯಶಸ್ವಿಯಾದ. ಸ್ಪೋಟಕಗಳ ಅಧಿಕೃತ ಮಾರಾಟಗಾರರಾಗಿ ಪರವಾನಿಗೆ ಪಡೆದು ಜಿಲೆಟಿನ್ ಕಡ್ಡಿಗಳು, ಅಮೋನಿಯಂ ನೈಟ್ರೇಟ್ ಸೇರಿ ಇನ್ನಿತರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಕೋಟ್ಯಾಧಿಪತಿಯಾದ.

ಕಬ್ಬಿಣದ ಅದಿರು ಕಳ್ಳತನಕ್ಕೆ ಖ್ಯಾತನಾಮನಾದ ಕಾರಣ ಅದಿರು ಉದ್ಯಮದಲ್ಲಿ ಇವರನ್ನು ‘ಚೋರ್ ಬಾಬುಲಾಲ್' ಎಂದೇ ಎಲ್ಲರೂ ಕರೆಯಲು ಪ್ರಾರಂಭಿಸಿದರು. ಚೋರ್ ಎಂಬುದೇ ಆತನ ಹೆಗ್ಗುರುತಾಯಿತು. ಇವನು ಕೂಡ ‘ಚೋರ್' ಪದವಿಲ್ಲದೇ ತನ್ನ ಹೆಸರನ್ನು ಉಚ್ಛರಿಸದ ಸ್ಥಿತಿ ತಲುಪಿದ. ಇಷ್ಟೆಲ್ಲ ಉಚ್ಛ್ರಾಯ ಸ್ಥಿತಿ ತಲುಪಿದ ಮೇಲೆ ಇನ್ನಷ್ಟು ವ್ಯವಹಾರಕ್ಕೆ ಕೈಹಾಕಿದ.

ಈ ಹಣದಿಂದ ಲಾರಿಗಳ ಖರೀದಿ ಮಾಡಿ ಕಬ್ಬಿಣದ ಅದಿರು ಉದ್ಯಮಕ್ಕೆ ಸಾರಿಗೆ ಗುತ್ತಿಗೆದಾರರಾಗಿ ಪ್ರವೇಶಿಸಿದ. ಲಾರಿ ಖರೀದಿ ಮಾಡುವವರಿಗೆ ಸಾಲ ನೀಡಿ ಬಡ್ಡಿ, ಚಕ್ರಬಡ್ಡಿ ವಿಧಿಸಿ ಸಾಲ ಪಡೆದವರ ಆಸ್ತಿ, ಲಾರಿಗಳನ್ನೂ ಜಪ್ತಿ ಮಾಡಲು ಆರಂಭಿಸಿದ. ಸುತ್ತಲಿನ ಗ್ರಾಮಗಳ ಕೃಷಿಕರು, ರಾಜಕಾರಣಿಗಳು, ಅಧಿಕಾರಿಗಳು, ಗೃಹಿಣಿಯರು ತಮ್ಮಲ್ಲಿದ್ದ ಆಸ್ತಿ, ಒಡವೆಗಳನ್ನು ಕಡಿಮೆ ಬೆಲೆಗೆ ಒತ್ತೆ ಇಟ್ಟು ಹೆಚ್ಚಿನ ಬಡ್ಡಿಯನ್ನು ಪಾವತಿ ಮಾಡಿ ಅವಸರಕ್ಕೆ ಹಣ ಪಡೆಯುತ್ತಿದ್ದರು.

ಚೋರ್ ಮುಟ್ಟದ ಅಕ್ರಮವೇ ಇಲ್ಲ : ಹೆಂಗಿದೆ ನೋಡಿ ಕಥೆ! ಉದ್ಯೋಗ ಹುಡುಕಿಕೊಂಡು ಬಳ್ಳಾರಿಗೆ ಬಂದಿದ್ದ ಚೋರ್ ಬಾಬುಲಾಲ್ ತಾನೇ ಅನೇಕರಿಗೆ ಉದ್ಯೋಗದಾತನಾದ. ‘ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ಚೋರ್ ಬಾಬುಲಾಲ್ ಅದಿರು ಉದ್ಯಮದಲ್ಲಿ ಮಾಡವ ಅಕ್ರಮವೇ ಇಲ್ಲ. ಕಾನೂನು, ತೆರಿಗೆ ವಂಚನೆ ಕುರಿತು ಸಾಕಷ್ಟು ಜ್ಞಾನ ಹೊಂದಿರುವ ಇವನು ‘ಓರ್ವ ವ್ಯಕ್ತಿ 600 ಗ್ರಾಂ ಚಿನ್ನ ಹೊಂದಿರಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ' ಎಂದ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ, ಮನೆ ಪ್ರವೇಶಿಸಲು ಬಂದಾಗ ‘ಸರ್ಚ್ ವಾರೆಂಟ್ ಇದೆಯಾ?' ಎಂದು ಪ್ರಶ್ನಿಸುವ ಮಟ್ಟಿಗೆ ಬೆಳೆದು ನಿಂತಿದ್ದಾನೆ.

ಬಳ್ಳಾರಿ ನಗರದ ಪ್ರಮುಖ ಸ್ಥಳಗಳಲ್ಲಿ ಆಸ್ತಿ ಹೊಂದಿರುವ ಚೋರ್ ಬಾಬುಲಾಲ್, ರಾಜ್ಯ, ಹೊರ ರಾಜ್ಯಗಳಲ್ಲಿ ಕೋಟ್ಯಂತರ ರುಪಾಯಿ ಮೊತ್ತದ ಚಿರಾಸ್ತಿಗಳನ್ನು, ಷೇರು ಪತ್ರಗಳನ್ನು, ಲಾಡ್ಜ್‌ಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾನೆ. ಇವರ ಮೂವರು ಮಕ್ಕಳು ಮತ್ತು ಅವರ ಬಹುತೇಕ ಸಂಬಂಧಿಕರು ಇವರ ವ್ಯವಹಾರದ ಹಾದಿಯನ್ನೇ ಹಣ ಗಳಿಕೆಯ ರಾಜಮಾರ್ಗ ಮಾಡಿಕೊಂಡು ಉದ್ಧಾರವಾಗಿ ಹೋಗಿದ್ದಾರೆ. ಎಲ್ಲರನ್ನೂ ಹೆಡೆಮುರಿ ಕಟ್ಟಬೇಕಾಗಿದೆ.

ಚುನಾವಣಾ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದಾಗ ಇವನ ಕಚೇರಿಯಲ್ಲಿ 20 ಲಕ್ಷ ರುಪಾಯಿಗೂ ಹೆಚ್ಚಿನ ಹಣ ಸಿಕ್ಕಿದೆ. ಕಚೇರಿಯಲ್ಲೇ ಈ ಪ್ರಮಾಣದಲ್ಲಿ ಹಣ ಸಿಕ್ಕಿದ್ದರೆ, ಇವನ ಮನೆಯಲ್ಲಿ ಸಿಕ್ಕಿರುವ ಹಣ ತೀರ ಕಡಿಮೆ ಪ್ರಮಾಣದ್ದು. ಶಂಕರ ಕಾಲೊನಿಯಲ್ಲಿ ಒಂದೇ ಕಡೆ ಸಾಲಾಗಿ ಮೂರು ಮನೆಗಳನ್ನು ಕಟ್ಟಿಕೊಂಡಿರುವ ಇವನು ಮಗ, ಮಗಳಿಗಾಗಿ ಅಲ್ಲಿಯೇ ಪ್ರತ್ಯೇಕ ಮನೆ ನೀಡಿದ್ದಾನೆ.

ರೆಡ್ಡಿ ಬ್ರದರ್ಸ್‌ಗೇ ಸಾಲ! : ಹಣ ಗಳಿಕೆಯನ್ನೇ ಪ್ರಮುಖ ಗುರಿ ಮಾಡಿಕೊಂಡಿರುವ ಇವನು, ತೆರಿಗೆ ವಂಚನೆಯಲ್ಲಿ ಎತ್ತಿದ ಕೈ. ಜಿ. ಜನಾರ್ದನರೆಡ್ಡಿ, ಬಿ. ಶ್ರೀರಾಮುಲು, ಸಾರಾಯಿ ಲಿಂಗಣ್ಣ ಮಕ್ಕಳು, ಅನಿಲ್ ಎಚ್. ಲಾಡ್ ಸೇರಿ ಅನೇಕ ಹಿರಿ - ಕಿರಿಯ ಗಣ್ಯಾತಿ ಗಣ್ಯರಿಗೆ ಸಾಲ ನೀಡಿದ ಕೀರ್ತಿ ಹೊಂದಿದ್ದಾರೆ ಎಂದು ಅವರ ಆಪ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನಗರದ ವ್ಯಾಪಾರಿ ವಲಯದಲ್ಲಿ ಚೋರ್‌ ಬಾಬುಲಾಲ್ ಆಗಿರುವ ಇವನು, ನಕಲಿ ನೋಟುಗಳ ಚಲಾವಣೆಯಲ್ಲೂ ಸಿದ್ಧಹಸ್ತ. ಹವಾಲಾ ಮೂಲಕ ಹಣ ರವಾನೆ ಮಾಡುವ ವ್ಯವಸ್ಥಿತ ಜಾಲವನ್ನು ದೇಶಾದ್ಯಂತ ಹೊಂದಿದ್ದಾನೆ. ಸೂರ್ಯ ಹುಟ್ಟಿದಾಗಿನಿಂದ ಸೂರ್ಯ ಮುಳುಗುವವರೆಗೂ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡದೇ ಮಲಗುವುದೇ ಇಲ್ಲ ಎನ್ನುವುದು ಇವನ ಆಪ್ತರ ಅಭಿಪ್ರಾಯ. ಮನೆಯಲ್ಲಿ ಹಣ ಎಣಿಸುವ ಯಂತ್ರ ಇಟ್ಟಿದ್ದರೂ ಅಚ್ಚರಿಯಿಲ್ಲ.

ಇವನ ಮನೆಯಲ್ಲಿ ಕೆಳಮನೆ ಇದ್ದು, ಅಲ್ಲಿಯೂ ಕೋಟ್ಯಂತರ ರೂಪಾಯಿ ನಗದು, ಆಭರಣ, ಬಂಗಾರ, ಬೆಳ್ಳಿ, ದಾಖಲಾತಿಗಳನ್ನು ಬಚ್ಚಿಟ್ಟಿರಬಹುದೆಂದು ತನಿಖಾ ಅಧಿಕಾರಿಗಳು ಶಂಕೆ ಹೊಂದಿದ್ದಾರೆ. ಭಾನುವಾರ ಈ ಅನುಮಾನ ಪರಿಹಾರಕ್ಕಾಗಿ ಐಟಿ ಅಧಿಕಾರಿಗಳು ಸಹಾಯಕ ಆಯುಕ್ತ ಅನಿರುದ್ಧ್ ಶ್ರವಣ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಬಹುತೇಕ ವ್ಯವಹಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾದ ವಿವಿಧ ರೀತಿಯ ‘ತೆರಿಗೆ ವಂಚನೆ'ಯೇ ಪ್ರಮುಖ ಗುರಿ ಹೊಂದಿರುವ ಇವನು ಕಪ್ಪುಹಣಕ್ಕೆ ಕೃಷ್ಣ ಎಂದು, ಲೆಕ್ಕದ ಹಣಕ್ಕೆ ರಾಮನ ಲೆಕ್ಕ ಎಂದೂ ಕರೆಯುತ್ತಾನೆ. ಅಷ್ಟೇ ಅಲ್ಲದೇ ವ್ಯವಹಾರದಲ್ಲಿ ಸಾಕಷ್ಟು ಕೋಡ್‌ವರ್ಡ್‌ಗಳನ್ನು ಬಳಕೆ ಮಾಡುತ್ತಾರೆ ಎಂದು ಹೇಳಲಾಗಿದೆ. ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾನಾ ಎಂಬುದೂ ಪತ್ತೆಯಾಗಬೇಕಾಗಿದೆ.

ಮುಂದುವರೆದ ತನಿಖೆ : ಸಹಾಯಕ ಆಯುಕ್ತ ಅನಿರುದ್ಧ ಶ್ರವಣ್ ನೇತೃತ್ವದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ತಂಡ ಭಾನುವಾರ ಮಧ್ಯಾಹ್ನದಿಂದ ಇವರ ಮನೆಗೆ ತೆರಳಿ ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು, 35 ಕೋಟಿ ರುಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಉಳಿತಾಯ ಬಾಂಡ್‌ಗಳನ್ನು ಪತ್ತೆ ಮಾಡಿದ್ದಾರೆ. ಶೋಧ ಮುಂದುವರೆದಿದೆ. ಗೋಡೌನ್ ತೆರೆಯಬೇಕಾಗಿದೆ. ಅಲ್ಲಿ ಏನೇನಿದೆಯೋ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Who is Chor Babulal? What is his business? How did he earn so much in Bellary? How has he been hoodwinking state government? Who all have been benefitted by Babulal? A brief introduction about the man who has once lent loan to Reddy brothers too!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more