Hampi: ಹಂಪಿ ಸ್ಮಾರಕದ ಮೇಲೇರಿ ನೃತ್ಯ, ರೀಲ್ಸ್ ಸ್ಟಾರ್ ದೀಪಕ್ ಗೌಡ ಬಂಧನ
ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಸ್ಮಾರಕದ ಮೇಲೇರಿ ನೃತ್ಯ ಮಾಡಿದ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕ್ ಗೌಡ ಎಂಬ ಯುವಕನನ್ನು ಹಂಪಿ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ, ಮಾರ್ಚ್ 3: ವಿಶ್ವಪ್ರಸಿದ್ಧ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಸ್ಮಾರಕದ ಮೇಲೇರಿ ನೃತ್ಯ ಮಾಡಿ, ಅದರ ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಯುವಕನನ್ನು ಹಂಪಿ ಪ್ರವಾಸಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕ್ ಗೌಡ (25) ಬಂಧಿತ ಯುವಕ ಎಂದು ಗುರುತಿಸಲಾಗಿದೆ. ಇತ್ತೀಚಿಗೆ ಹಂಪಿಗೆ ಬಂದಿದ್ದ ದೀಪಕ್‌ಗೌಡ ಹಂಪಿ ಜೈನ್ ದೇವಾಲಯದ ಮೇಲೆ ಹಾಗೂ ಅದರ ಪರಿಸರದಲ್ಲಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋಗಳು ವೈರಲ್ ಆಗಿದ್ದು, ಜೈನ ದೇಗುಲದ ಸ್ಮಾರಕದ ಮೇಲೇರಿ ನೃತ್ಯ ಮಾಡಿದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಫೆಬ್ರವರಿ 28ರಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಸಿ. ಸುನೀಲ್‌ಕುಮಾರ್ ಹಂಪಿ ಪ್ರವಾಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ದೀಪಕ್ ಗೌಡನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.
ಸರ್ಕಾರ ಹಂಪಿಯ ಪ್ರಮುಖ ತಾಣಗಳಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಕ್ಯಾಮೆರಾ ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಸ್ಮಾರಕಗಳನ್ನು ಹಾನಿಗೊಳಿಸುವುದು, ವಿರೂಪಗೊಳಿಸಿದರೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಶ್ರೀಹರಿಬಾಬು ಬಿ.ಎಲ್ ತಿಳಿಸಿದ್ದಾರೆ.
ಇನ್ನು ವಿರೂಪಾಕ್ಷ ದೇವಾಲಯ ಮತ್ತು ಹಂಪಿಯ ಸಂರಕ್ಷಿತ ಸ್ಮಾರಕಗಳ ಮೇಲೆ ಹತ್ತಿ ಹುಚ್ಚಾಟ ಮಾಡುವುದು, ವಿಡಿಯೋ ಮಾಡುವುದನ್ನು ನಿರ್ಬಂಧಿಸಲಾಗಿದೆ. ಹೀಗಿದ್ದರೂ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದೀಪಕ್ ಗೌಡ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ದೀಪಕ್ ಗೌಡ ಯಾರು..?
ತನ್ನ ವಿಶಿಷ್ಟ ಪ್ರತಿಭೆಯೊಂದಿಗೆ ರೀಲ್ಸ್‌ಗೆ ಮಾಡಲು ಆರಂಭಿಸಿದ್ದ ದೀಪಕ್ ಗೌಡ ಕೂಡ ಏಕಾಏಕಿ ಫೇಮಸ್ ಆಗಿದ್ದು, ಸಮಾನ್ಯವಾಗಿ ರೀಲ್ಸ್ ನೋಡುವವರಿಗೆ ದೀಪಕ್ ಗೌಡ ಚಿರಪರಿತ.
"ಹಾಯ್ ಫ್ರೆಂಡ್ಸ್ ನಾನು ನಿಮ್ಮ ಸಕ್ಕರೆ ನಾಡು ದೀಪಕ್ ಗೌಡ" ಅಂತಾ ವಿಡಿಯೋ ಆರಂಭಿಸುವ ದೀಪಕ್ ಗೌಡ, ನಾನ್ ಸ್ಟಾಪ್ ಆಗಿ ಮಾತನಾಡುತ್ತಾನೆ. ಜೊತೆಗೆ ಒಂದಿಷ್ಟು ಜೋಕ್ ಹೇಳುವುದಲ್ಲದೇ, ಡಾನ್ಸ್ ಕೂಡ ಮಾಡುತ್ತಾನೆ. ಹೀಗಾಗಿ ಈತ ಟ್ರೋಲಿಗರಿಗೂ ಕೂಡ ಆಹಾರವಾಗಿದ್ದ. ಈತನ ಬಹುತೇಕ ವಿಡಿಯೋಗಳು ಟ್ರೋಲ್ ಆಗಿಯೇ ಮತ್ತಷ್ಟು ಫೇಮಸ್ ಆಗಿವೆ. ಕಂಡ ಕಂಡ ದೇವಾಲಯಗಳ ಬಳಿ ಮನಸ್ಸು ಬಿಚ್ಚಿ ನೃತ್ಯ ಮಾಡುವ ದೀಪಕ್ ಗೌಡ ಈಗ ತಮ್ಮ ಡಾನ್ಸ್‌ನಿಂದಲೇ ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications