ಟೊಮೆಟೊ ಮತ್ತು ಈರುಳ್ಳಿಯನ್ನು ರಸ್ತೆಗೆ ಸುರಿದ ರೈತರು
ವಿಜಯನಗರ, ಏಪ್ರಿಲ್ 08: ಟೊಮೆಟೊ, ಈರುಳ್ಳಿ ದರದಲ್ಲಿ ಭಾರೀ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಲು ಒಪ್ಪದ ರೈತರು ರಸ್ತೆಗೆ ಟೊಮೆಟೊ, ಈರುಳ್ಳಿ ಸುರಿದು ಪ್ರತಿಭಟನೆ ಮಾಡಿದರು. ಸರ್ಕಾರ ಮಧ್ಯ ಪ್ರವೇಶ ಮಾಡಿ ರೈತರಿಗೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ರೈತರು ಟೊಮೆಟೊ ಮತ್ತು ಈರುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದರು. ಉತ್ತಮ ಬೆಲೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಟೊಮೆಟೊ, ಈರುಳ್ಳಿಯನ್ನು ತಂದಿದ್ದರು.

ಮಾರುಕಟ್ಟೆಯಲ್ಲಿ 20 ಕೆಜಿ ಟೊಮೆಟೊ ಟ್ರೇ ದರ ರೂ. 20 ಮತ್ತು 30ಕ್ಕೆ ಕುಸಿತಗೊಂಡಿದೆ. ಅಲ್ಲದೇ ಸಂತೆಯಲ್ಲಿ 3 ಕೆಜಿ ಟೊಮೆಟೊ 10 ರೂ.ಗೆ ಮಾರಾಟವಾಗುತ್ತಿದೆ. 2 ಎಕರೆಯಲ್ಲಿ ಟೊಮೆಟೊ ಬೆಳೆಯಲು 60 ಸಾವಿರ ರೂ. ಖರ್ಚು ಮಾಡಿದ್ದೇವೆ. ನಮಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದರು.
ಟೊಮೆಟೊ ಮತ್ತು ಈರುಳ್ಳಿಯನ್ನು ಈಗಿನ ದರದಲ್ಲಿ ಮಾರಾಟ ಮಾಡಿದರೆ ಕೂಲಿ ವೆಚ್ಚವೂ ಸಹ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ಮಾರುವುದಕ್ಕಿಂತ ರಸ್ತೆಗೆ ಸುರಿಯುವುದು ಉತ್ತಮ ಎಂದು ರೈತ ಕುರುಬರ ಶಿವಪುತ್ರಪ್ಪ ಹೇಳಿದರು.
ತಾಲೂಕು ಕೇಂದ್ರಗಳಲ್ಲಿ ಟೊಮೆಟೊ ಮತ್ತು ಈರುಳ್ಳಿಯನ್ನು ಖರೀದಿ ಮಾಡಲು ಸರ್ಕಾರ ಮುಂದಾಗಬೇಕು. ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಅದನ್ನು ಖರೀದಿ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್‌ಗೆ ರೈತರ ನಿಯೋಗ ಮನವಿಯನ್ನು ಸಲ್ಲಿಕೆ ಮಾಡಿದೆ. ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ 4 ಸಾವಿರ ರೂ. ನಂತೆ ದರವನ್ನು ನಿಗದಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಟೊಮೆಟೊ ಮತ್ತು ಈರುಳ್ಳಿ ದರ ಏರಿಕೆ ಕುರಿತು ಮಾತನಾಡಿದ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್. ಎಂ. ಸಿದ್ದೇಶ, "ಉತ್ತರ ಕರ್ನಾಟಕ ಭಾಗದಲ್ಲಿ ಈರುಳ್ಳಿ ಇಳುವರಿ ಉತ್ತಮವಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ನಮ್ಮ ಭಾಗದ ಫಸಲಿಗೆ ಉತ್ತಮ ಬೆಲೆ ಸಿಗುತ್ತಿಲ್ಲ" ಎಂದರು.
"ಪ್ರತಿ ಕ್ವಿಂಟಾಲ್ ಈರುಳ್ಳಿ ಉತ್ಪಾದನಾ ವೆಚ್ಚ 2 ರಿಂದ 2,500 ರೂ. ಇದೆ. ಆದರೆ ಈರುಳ್ಳಿ ಮಾರುಕಟ್ಟೆಯಲ್ಲಿ 1 ರಿಂದ 1,200 ರೂ.ಗಳಿಗೆ ಮಾರಾಟವಾಗುತ್ತಿದೆ. ಆದ್ದರಿಂದ ಸರ್ಕಾರ ತಾಲೂಕು ಕೇಂದ್ರಗಳಲ್ಲಿ ಈರುಳ್ಳಿ, ಟೊಮೆಟೊ ಕೊಳ್ಳಲು ಖರೀದಿ ಕೇಂದ್ರವನ್ನು ತೆರೆಯಬೇಕು" ಎಂದು ಆಗ್ರಹಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೊಮೆಟೊ ಮತ್ತು ಈರುಳ್ಳಿ ದರದಲ್ಲಿ ಸ್ವಲ್ಪ ವ್ಯತ್ಯಾಸವಿದೆ. 7/4/2025ರ ಮಂಗಳವಾರ ಚಿಂತಾಮಣಿಯಲ್ಲಿ ಈರುಳ್ಳಿ ಬೆಲೆ ಕನಿಷ್ಠ 1,500 ರೂ., ಗರಿಷ್ಠ 2,000 ರೂ. ಇತ್ತು. ಶಿವಮೊಗ್ಗದಲ್ಲಿ ಕನಿಷ್ಠ 1,600, ಗರಿಷ್ಠ 2,800 ರೂ. ಇತ್ತು.
ಮಾರ್ಚ್ ತಿಂಗಳ 20ರ ಬಳಿಕ ಈರುಳ್ಳಿ, ಟೊಮೆಟೊ ದರದಲ್ಲಿ ಕುಸಿತವಾಗುತ್ತಲೇ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಾರ್ಚ್ ಅಂತ್ಯದಲ್ಲಿ 10 ಕೆಜಿಯ ಒಂದು ಬಾಕ್ಸ್ (ಸಿಹಿ) ಟೊಮೆಟೊ ಬೆಲೆ 50-60 ಆದರೆ, ಹುಳಿ ಟೊಮೆಟೊ 55 ರಿಂದ 65ರ ತನಕ ಬೆಲೆ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 10 ರಿಂದ 15ಕ್ಕೆ ಟೊಮೆಟೊ ದೊರೆಯುತ್ತಿತ್ತು. ಏಪ್ರಿಲ್ ಮೊದಲ ವಾರದಲ್ಲಿ ಬೆಲೆ ಇನ್ನಷ್ಟು ಕಡಿಮೆಯಾಗಿದೆ.












Click it and Unblock the Notifications