ಮೋರಸಿಂಗ್ ನುಡಿಸುವ ಗಾರುಡಿಗ ಶಂಕ್ರಪ್ಪ ಬಾದಿಗಿ
ಬಳ್ಳಾರಿ, ನ. 29 : ಕರ್ನಾಟಕ ಹಲವಾರು ಸಂಗೀತ ಸಾಧಕರಿಗೆ ಆಶ್ರಯ ನೀಡಿದೆ, ಸರ್ವರೀತಿಯ ಪ್ರೋತ್ಸಾಹ ನೀಡಿ ಬೆಳೆಸಿದೆ. ಕರ್ನಾಟಕ ಸಂಗೀತದ ತವರೂರಿನಲ್ಲಿ ಎಲೆಮರೆಕಾಯಿಗಳಂತೆ ಇರುವ, ಅಪರೂಪದ ಸಂಗೀತ ಸಾಧನಗಳನ್ನು ಲಯಬದ್ಧವಾಗಿ ನುಡಿಸಿ ಸಂಗೀತ ಪ್ರೇಮಿಗಳನ್ನು ರಂಜಿಸುವ ಹಲವಾರು ಸಂಗೀತಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ.
ಇಂತಹ ಅಪರೂದ ಸಂಗೀತ ಸಾಧನವಾದ 'ಮೋರಸಿಂಗ್' ಎಂಬ ವಿಶಿಷ್ಟ ಬಗೆಯ ನುಡಿಸುವುದರಲ್ಲಿ ಸಿದ್ಧಹಸ್ತರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿ ಸುಡುಗಾಡು ಶಂಕ್ರಪ್ಪ ಬಾದಿಗಿ (62). ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳುವ ಚೈತನ್ಯವಿರುವ ಈ ನಾದವನ್ನು 'ಬಾಯಿಬಿಲ್ಲು ನಾದಸ್ವರ' ಅಂತಲೂ ಕರೆಯುತ್ತಾರೆ.
ಈ ಸಾಧನದ ಮೂಲವಿರುವುದು ಭಾರತದಲ್ಲಿ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ, ರಾಜಸ್ತಾನದಲ್ಲಿ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ, ನೇಪಾಳದಲ್ಲಿ ಕೂಡ ಈ ಸಾಧನ ನುಡಿಸುವ ಸಾಧಕರಿದ್ದಾರೆ. ಮೋರಸಿಂಗ್ ಸಾಧನವನ್ನು ರಾಜಸ್ತಾನಿ ಭಾಷೆಯಲ್ಲಿ ಮೋರಚಂಗ್, ಇಂಗ್ಲಿಷಿನಲ್ಲಿ ಜಾ ಹಾರ್ಪ್ ಎಂದು ಕರೆಯಲಾಗುವ ಈ ಸಾಧನವನ್ನು ಮೋರಚಿಂಗ್ ಅಂತಲೂ ಕರೆಯುವವರಿದ್ದಾರೆ.

ಮೋರಸಿಂಗ್ ಬಳಸಿ ಪುರಂದರ ದಾಸರ ಕೀರ್ತನೆಗಳನ್ನು ಸ್ವಯಂ ಸ್ವರ ಸಂಯೋಜನೆಯ ಮೂಲಕ ಸುಡುಗಾಡು ಸಿದ್ದ ಶಂಕ್ರಪ್ಪ ಬಾದಿಗಿ ಅವರು ಸುಮಾರು 30 ವರ್ಷಗಳಿಂದ ನುಡಿಸುತ್ತಿದ್ದಾರೆ. ಸತತ ಶ್ರಮ, ಕಲಿಯುವ ಛಲ, ಹೊಸತನದ ಗುರಿಯ ಬೆನ್ನತ್ತಿದ ಶಂಕ್ರಪ್ಪ ಬಾದಿಗಿ ಅವರು ಈ ಸಾಧನ ನುಡಿಸುವಲ್ಲಿ ಪಾಂಡಿತ್ಯ ಸಾಧಿಸಿದ್ದಾರೆ.
ಚಿತ್ರದುರ್ಗದ ಬಸವಕೇಂದ್ರ ಶ್ರೀಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಮತ್ತು ಉತ್ತರ ಕರ್ನಾಟಕದಲ್ಲಿ ನಡೆದ ಸಾಂಸ್ಕೃತಿಕ ಪರಂಪರೆಯಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿ ಜನರ ಮನ ಗೆದ್ದು ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡಿದ್ದಾರೆ. ಅನೇಕರು ಶಹಬ್ಬಾಷ್ ಎಂದು ಮುಕ್ತಕಂಠದಿಂದ ಮೆಚ್ಚಿದ್ದಾರೆ. ಇನ್ನು ರಾಜ್ಯ ಸರಕಾರ ಇವರನ್ನು ಮೆಚ್ಚಿ ಬೆನ್ನುತಟ್ಟಬೇಕಾಗಿದೆ.
ಹೊಸಪೇಟೆಯ ಜಂಬುನಾಥ ಹಳ್ಳಿಯ ಆಶ್ರಯ ಕಾಲೋನಿಯಲ್ಲಿ ಟೆಂಟ್‌ಹೌಸ್‌ನಲ್ಲಿರುವ ಶಂಕ್ರಪ್ಪ ಬಾದಿಗಿ, ಕೌಟುಂಬಿಕವಾಗಿ ಬಂದಿರುವ ಸುಡುಗಾಡು ಸಿದ್ದರ ವೃತ್ತಿಯ ಜೊತೆ ಜೊತೆಯಲ್ಲೇ, ಹಲ್ಲುಗಳ ಮಧ್ಯೆ ಈ ಸಾಧನವನ್ನು ಇಟ್ಟುಕೊಂಡು ತೋರು ಬೆರಳಿನಿಂದ 'ಬಾಯಿಬಿಲ್ಲು' ಸ್ವರ ನುಡಿಸುತ್ತಾರೆ. ಇವರ ತಂದೆ ಬಾದಿಗಿ ದುರುಗಪ್ಪನೇ ಮೊದಲ ಗುರು.
ಉಸಿರನ್ನು ಬಿಗಿ ಹಿಡಿದಿಟ್ಟುಕೊಂಡು ನಾದಸ್ವರವನ್ನು ನುಡಿಸುತ್ತಿದ್ದರೆ ಆಲಿಸುವವರು ಮಂತ್ರಮುಗ್ದರಾಗುತ್ತಾರೆ. 15 ರಿಂದ 30 ನಿಮಿಷದವರೆಗೆ ಸತತವಾಗಿ ಕೀರ್ತನೆ ಪದಗಳಿಗೆ ಮತ್ತು ದೇವರ ಶ್ಲೋಕಗಳಿಗೆ ಧ್ವನಿ ಮೂಡಿಸುವುದನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಮೋರಸಿಂಗ್ ನಾದಕಲೆ ಸಂಗೀತಕ್ಷೇತ್ರದಲ್ಲಿ ಉಳಿಸಬೇಕಾಗಿದೆ. ಈ ಸಂಗೀತವನ್ನು, ಸಂಗೀತದ ಪರಿಕರಗಳನ್ನು ಕಲಿಕಾಸಕ್ತರಿಗೆ ತಲುಪಿಸಬೇಕಿದೆ ಎನ್ನುತ್ತಾರೆ ಶಂಕ್ರಪ್ಪ.
ಹೊಟ್ಟೆಪಾಡಿಗಾಗಿ ಹಿರಿಯರಿಂದ ಬಳುವಳಿಯಾಗಿ ಬಂದ ಸುಡುಗಾಡು ಸಿದ್ದರ ವೇಷ ತೊಟ್ಟು, ಊರೂರಿಗೆ ತೆರಳಿ ಅಲೆಯುವ ಈತನಿಗೆ ವಿಶೇಷ ಸಂಗೀತ ಸಾಧನದ ನಂಟಿದ್ದರೂ, ಈತನ ಪ್ರತಿಭೆಯನ್ನು ಸಂಗೀತ ಕ್ಷೇತ್ರ ಗುರುತಿಸಿಲ್ಲ. ಈತನಿಗೆ ವೇದಿಕೆ ಕಲ್ಪಿಸಲಿಚ್ಚಿಸುವವರು ಮೊಬೈಲ್ 97416 18957 ಸಂಪರ್ಕಿಸಬಹುದು.
'ಮೋರಸಿಂಗ್' ಒಂದು ಅಪರೂಪದ ಸಂಗೀತ ಸಾಧನ. ತ್ರಿಶೂಲಾಕಾರದ ಚಿಮಟಿಗೆಯಂತೆ ಇರುವ, ಕಬ್ಬಿಣದಿಂದ ತಯಾರಿಸಲ್ಪಟ್ಟ ಈ ಸಾಧನ 10 ರಿಂದ 20 ಸೆಂ.ಮೀ ಉದ್ದ ಇರುತ್ತದೆ. ಏಕೈಕ ಸಾಧನದಿಂದ ಒಬ್ಬನೇ ಲಯಬದ್ದವಾಗಿ ಸಪ್ತಸ್ವರಗಳನ್ನು ನುಡಿಸುತ್ತಾರೆ. ಈ ಸಾಧನವನ್ನು ಭಾರತದಲ್ಲಿ ಹಲವಾರು ಸಂಗೀತಕಾರರು ಸಿದ್ಧಿಸಿಕೊಂಡಿದ್ದಾರೆ. ಅವರಲ್ಲೊಬ್ಬರು ಬೆಂಗಳೂರು ರಾಜಶೇಖರ್ ಅವರು ಕೂಡ.












Click it and Unblock the Notifications