ಬಾಣಂತಿಯರ ಸಾವಿಗೆ ಮತ್ತೊಂದು ಶಾಕಿಂಗ್ ಕಾರಣ ಪತ್ತೆ ಹಚ್ಚಿದ ಮಹಿಳಾ ಆಯೋಗ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಇದೀಗ ಎಲ್ಲೆಡೆ ಚರ್ಚೆಯಲ್ಲಿದೆ. ಈ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತವಾಗಿದ್ದು, ತನಿಖೆಗೆ ಸರ್ಕಾರ ಆದೇಶಿಸಿದೆ. ಈ ಪ್ರಕರಣಕ್ಕೆ ರಾಜ್ಯ ಮಹಿಳಾ ಆಯೋಗ ಕೂಡ ಎಂಟ್ರಿ ನೀಡಿದ್ದು, ಬಾಣಂತಿಯರ ಸಾವಿಗೆ ಮತ್ತೊಂದು ಶಾಕಿಂಗ್ ಕಾರಣ ಪತ್ತೆ ಹಚ್ಚಿದೆ ಎನ್ನಲಾಗಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಈಗಾಗಲೇ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ಮಹಿಳೆಯರ ಸಾವಿಗೆ ಸಂಬಂಧಿಸಿದಂತೆ ಪರಿಶೀಲನೆಯೂ ನಡೆಸಿದ್ದಾರೆ. ಇನ್ನು ಮೇಲ್ನೋಟಕ್ಕೆ ಮೊದಲಿಗೆ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ಈಗಾಗಲೇ ಬಹಿರಂಗವಾಗಿದೆ. ಇದರ ಜೊತೆಗೆ ಆಪರೇಷನ್ ಕೊಠಡಿಗಳಲ್ಲಿನ ಅಸ್ವಚ್ಛತೆ ಕೂಡ ಈ ಸಾವುಗಳಿಗೆ ಕಾರಣ ಆಗಿರಬಹುದು ಎಂದು ನಾಗಲಕ್ಷ್ಮಿ ಚೌಧರಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೌದು, ಇತ್ತೀಚೆಗೆ ಸಂಭವಿಸಿದ ಸಾವುಗಳಿಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾತ್ರವಲ್ಲದೆ, ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿನ ಅಸ್ವಚ್ಛತೆ ಕೂಡ ಕಾರಣವಾಗಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ವಾರ್ಡ್ ಹಾಗೂ ಅಲ್ಲಿಗೆ ಬರುವ ನೀರಿನ ಟ್ಯಾಂಕರ್‌ಗಳ ಸ್ವಚ್ಛತೆಯನ್ನು ಸಹ ಪರಿಶೀಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು ಬಾಣಂತಿಯರ ಸಾವಾಗಿದ್ದ ಹಿನ್ನೆಲೆ, ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಘಟನೆ ಸಂಬಂಧಿಸಿದ ವರದಿ ಕಲೆಹಾಕಿದ್ದೇವೆ. ಆಪರೇಷನ್ ಥಿಯೇಟರ್‌ನ ಸ್ವಚ್ಚತೆ, ಶೌಚಾಲಯ, ಕುಡಿಯುವ ನೀರಿನ ಪೂರೈಕೆ ಹಾಗೂ ಶುಚಿತ್ವದ ಕುರಿತು ಪರಿಶೀಲನೆ ನಡೆಸಿದ್ದೇವೆ. ಈ ಸಂಪೂರ್ಣ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡಿಮೆ ವೆಚ್ಚದ ಟೆಂಡರ್‌ಗಳನ್ನ ಕರೆಯಬಾರದು, ಜೀವಹಾನಿಗಳ ಜತೆಗೆ ಯಾವುದೇ ರಾಜಿ ಮಾತಿಲ್ಲ. ಬಾಣಂತಿಯರಿಗೆ ಸೂಕ್ತ ಪರಿಹಾರ, ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಸರ್ಕಾರ ಜವಾಬ್ದಾರಿವಹಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಬಾಣಂತಿಯರ ಸರಣಿ ಸಾವು ಸಂಭವಿಸಿತ್ತು. ಐದು ಮಂದಿ ಬಾಣಂತಿಯರು ಮೃತಪಟ್ಟ ಘಟನೆಯು ಸಂಚಲನ ಮೂಡಿಸಿತ್ತು. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಮೊದಲಿಗೆ ಪರಿಹಾರ ಮೊತ್ತವನ್ನು 2 ಲಕ್ಷ ರೂಪಾಯಿ ಎಂದು ಸರ್ಕಾರ ಘೋಷಿಸಿತ್ತು.
ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಎಂಬುವವರನ್ನು ಸಸ್ಪೆಂಡ್ ಮಾಡಿದ್ದು, ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾಳದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅದರ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗಿದೆ. ಈ ಸಂಬಂಧ ಈಗ ಮಹಿಳಾ ಆಯೋಗ ಕೂಡ ವರದಿ ಸಲ್ಲಿಸಲು ಮುಂದಾಗಿದೆ.












Click it and Unblock the Notifications