Kodi Mutt Seer Prediction : ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಗ್ಗೆ ಕೋಡಿಮಠದ ಶ್ರೀಗಳ ಭವಿಷ್ಯವಾಣಿ
ವಿಜಯನಗರ, ಜನವರಿ, 13: ಕೋಡಿಮಠದ ಶ್ರೀಗಳು ಒಂದಲ್ಲ ಒಂದು ಭವಿಷ್ಯವನ್ನು ನುಡಿಯುತ್ತಲೇ ಬಂದಿದ್ದಾರೆ. ಇದುವರೆಗೂ ಶ್ರೀಗಳು ನುಡಿದಿರುವ ಭವಿಷ್ಯಗಳೆಲ್ಲವೂ ಭಯಾನಕವಾದವುಗಳೇ ಆಗಿವೆ. ಹಾಗೆಯೇ ಶ್ರೀಗಳಿಗೆ ಹೊಸಪೇಟೆಯಲ್ಲಿ ಭಕ್ತ ಕುಟುಂಬದವರು ಶುಕ್ರವಾರ (ಜನವರಿ 13) ಪಾದಪೂಜೆಯನ್ನು ನೆರವೇರಿಸಿದ್ದಾರೆ. ಪಾದಪೂಜೆ ನೆರವೇರಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದು ಭವಿಷ್ಯ ನುಡಿದಿದ್ದಾರೆ. ಇದೇ 2023ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಮಸ್ಯೆ ವಕ್ಕರಿಸಲಿವೆ. ಸಾಧು ಸಂತರಿಗೆ ಸಮಸ್ಯೆ ಆಗುವುದು ಬಾಕಿ ಇದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ ಎಂದು ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದ ಬಳಿಕ ಶ್ರೀಗಳು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ.
ರಾಜಕೀಯ ಕ್ಷೇತ್ರದ ಬಗ್ಗೆ ಶ್ರೀಗಳು ಹೇಳಿದ್ದೇನು?
ಹಾಗೆಯೇ ರಾಜಕೀಯ ಕ್ಷೇತ್ರದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರವನ್ನು ಅಲ್ಲಂಕರಿಸುತ್ತದೆ. ಸಮ್ಮಿಶ್ರ ಸರ್ಕಾರ ಅಧಿಕಾರ ಹಿಡಿಯಲ್ಲ ಎಂದು ಸ್ಪಷ್ಟವಾಗಿ ಹೇಲಿದರು. ಇನ್ನು ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ ಎಂದು ಮಾರ್ಮಿಕವಾಗಿ ಭವಿಷ್ಯ ನುಡಿದರು. ಕೊರೊನಾ ಬಂದರೂ ಕೂಡ ಅಂತಹ ತೊಂದರೆ ಆಗುವುದಿಲ್ಲ. ಸಂಕ್ರಾಂತಿ- ಯುಗಾದಿಯ ಬಳಿಕ ಮತ್ತೆ ಮಳೆ ಸುರಿಯಲಿದೆ. ಕಳೆದ ಬಾರಿ ಹೇಗೆ ಆಯಿತೋ ಹಾಗೆಯೇ ಆಗುತ್ತದೆ. ಸಂಕ್ರಾಂತಿಗೆ ಇನ್ನೂ ಎರಡು ದಿನಗಳಿವೆ, ಸಂಕ್ರಾಂತಿ ಭವಿಷ್ಯ, ಯುಗಾದಿ ಭವಿಷ್ಯ ಆ ಕಾಲಕ್ಕೆ ಹೇಳಬೇಕಿದೆ ಎಂದು ಶೀಘ್ರದಲ್ಲೇ ಮತ್ತೊಂದು ಭವಿಷ್ಯ ನುಡಿಯುವ ಮುನ್ಸೂಚನೆ ನೀಡಿದ್ದಾರೆ.

ಕೊರೊನಾ ನಾಲ್ಕನೇ ಅಲೆ ಬಗ್ಗೆ ಭವಿಷ್ಯ
ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡು ಭಾರತದಲ್ಲೂ ಕೊಂಚ ಆತಂಕಕ್ಕೆ ಕಾರಣವಾಗಿರುವ ಕೊರೊನಾ ನಾಲ್ಕನೇ ಅಲೆ ಬಗ್ಗೆ ಕೋಡಿಶ್ರೀಗಳು ಇತ್ತೀಚೆಗಷ್ಟೇ ಭವಿಷ್ಯ ನುಡಿದಿದ್ದರು. ಕೋವಿಡ್ ನಾಲ್ಕನೇ ಅಲೆಯಿಂದ ಯಾವುದೇ ಸಾವು- ನೋವುಗಳು ಸಂಭವಿಸುವುದಿಲ್ಲ. ಈ ಬಗ್ಗೆ ಯಾರು ಆತಂಕ ಪಡುವ ಆಗತ್ಯವಿಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದರು. ಭಾರತದಲ್ಲಿ ಕೋವಿಡ್ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ನಾಲ್ಕನೇ ಅಲೆ ಪರಿಣಾಮಕಾರಿ ಆಗಿರುವುದಿಲ್ಲ. ಕೊರೊನಾ ಸೋಂಕು ಬರುತ್ತದೆ, ಬಂದು ಹಾಗೆ ಹೋಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದರು.
ಇನ್ನು ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿ ಜನ್ಮದಿನದ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಬಂದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದರು. "ಒಲೆ ಹೊತ್ತಿ ಉರಿದರೆ ಅಡುಗೆ ಆಗುತ್ತೆ, ಭೂಮಿ ಹತ್ತಿ ಉರಿದರೆ ಏನಾಗುತ್ತೆ? ಅಂಥ ಪ್ರಸಂಗ ಮುಂದೆ ನಡೆಯುತ್ತೆ, ಮುಂದೆ ಅದರ ಬಗ್ಗೆ ಭವಿಷ್ಯ ನುಡಿಯುತ್ತೇನೆ. ಕೊರೊನಾ ನಾಲ್ಕನೆ ಅಲೆ ಜನರನ್ನು ಹೆಚ್ಚು ಬಾಧಿಸೋದಿಲ್ಲ, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಕೊರೊನಾ ಬರುತ್ತೆ ಹೋಗುತ್ತೆ, ಸಾವು ನೋವು ಸಂಭವಿಸುವುದಿಲ್ಲ" ಎಂದು ಹೇಳಿದ್ದರು.












Click it and Unblock the Notifications