ಹೂವಿನಹಡಗಲಿ 42,000 ಎಕರೆ ಪ್ರದೇಶಕ್ಕೆ ನೀರಾವರಿ:ಸಿಎಂ ಬೊಮ್ಮಾಯಿ
ವಿಜಯನಗರ, ಆಕ್ಟೋಬರ್ 13: ಹೂವಿನಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮೂಲಕ ಈ ಭಾಗದ ರೈತರ ನೀರಿನ ಬವಣೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿ, "ಹೂವಿನ ಹಡಗಲಿಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ನಾನು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವರ್ಷ ಈ ಭಾಗಕ್ಕೆ ಭೇಟಿ ನೀಡಿದ್ದೇವು. ಆಗ ಸಿಂಗಟಾಲೂರು ಏತ ನೀರಾವರಿ ಪೂರ್ಣ ಮಾಡಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಹೂವಿನ ಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿತ್ತು," ಎಂದು ಅವರು ವಿವರಿಸಿದರು.
"ಹೂವಿನಹಡಗಲಿಯಲ್ಲಿ ಅಂತರ್ಜಲ ಹೆಚ್ಚಿಸಲು ಕೆಲಸ ಮಾಡಲಾಗಿದೆ. ಈ ಭಾಗದ ರೈತರಿಗೆ ನೀರಿನ ಬರ ನಿವಾರಿಸಲು ಬಿಜೆಪಿ ಸರ್ಕಾರ ಮತ್ತು ಬಿಎಸ್ ಯಡಿಯೂರಪ್ಪ ಅವರು ಕಾರಣ. ಹುಲಿಗುಡ್ಡದ ಯೋಜನೆ ತಾವು ಮಾಡಿದ್ದೇವೆ ಅಂತ ಕೆಲವರು ಹೇಳಿಕೊಳ್ಳುತ್ತಿದ್ದರು. ಅದನ್ನು ರದ್ದು ಮಾಡಿ ಸಿಂಗಟಾಲೂರು ಯೋಜನೆಗೆ ಜೋಡಿಸಿ ರೂಪಿಸಲಾಯಿತು. ತಡಕಲ್ಲ ನೀರಾವರಿ ಯೊಜನೆಯನ್ನು ಪೂರ್ಣ ಮಾಡಿ ಲೋಕಾರ್ಪಣೆ ಮಾಡಲಾಗುವುದು," ಎಂದು ಹೇಳುವ ಮೂಲಕ ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.

ಬಿಜೆಪಿ 150ಸ್ಥಾನ ಗೆಲ್ಲಬೇಕು
ಹೂವಿನಹಡಗಲಿಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಸ್ಪಂದನ ಸಮಾವೇಶ ಏರ್ಪಡಿಸಲಾಗಿದೆ. ಈ ಮೂಲಕ ನಿಮ್ಮ ಮುಂದೆ ಸರ್ಕಾರದ ಯೋಜನೆಗಳ ರಿಪೋರ್ಟ್ ಕಾರ್ಡ್ ಇಟಿದ್ದೇವೆ. ಅಭಿವೃದ್ಧಿ ಪರ ಕಾರ್ಯಗಳಿಂದಲೇ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ಕನ್ನಡ ನಾಡಿನಲ್ಲಿ ಕಮಲ ಅರಳಬೇಕಿದೆ. ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತು ಹಾಕಬೇಕು. ನೆಚ್ಚಿನ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 150 ಸ್ಥಾನ ಗೆಲ್ಲಿಸಬೇಕು ಎಂದರು ಹೇಳಿದರು.

ಈ ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆನಂದಸಿಂಗ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications