• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಂಪಿ ಇತಿಹಾಸವೇ ಬೇರೆ...ವಿಜಯಗರದ ಇತಿಹಾಸವೇ ಬೇರೆ…

By ಪರುಶುರಾಮ ಕಲಾಲ್
|

ಅನೆಯನೇರಿಕೊಂಡು ಹೋದಿರೇ ನೀವು!

ಕುದುರೆಯನೇರಿಕೊಂಡು ಹೋದಿರೇ ನೀವು!

ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣ!

ಸತ್ಯದ ನಿಲವನರಿಯದೇ ಹೋದಿರಲ್ಲಾ!

ಸುದ್ಗುಣವೆಂಬ ಫಲವ ‘ಬಿತ್ತದೇ' ಬೆಳೆಯದೇ ಹೋದಿರಲ್ಲಾ

ಅಹಂಕಾರವೆಂಬ ‘ಸದ'ಮದಗಜವೇರಿ

ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!

ನಮ್ಮ ಕೂಡಲಸಂಗಮದೇವರನರಿಯದೆ

ನರಕಕ್ಕೆ ಭಾಜನವಾದಿರಲ್ಲಾ !

-ಬಸವಣ್ಣ

ಹಂಪಿ ಉತ್ಸವ ಎಂಬ ಪೌರಾಣಿಕ ನಾಟಕ

ನೆಲದ ಹೊಟ್ಟೆ ಬಗೆದು ರಕ್ತ ಹೀರುವ ರಾಕ್ಷಸ ಯಂತ್ರಗಳು. ನೆಲದ ರಕ್ತ ಮಾರಿ ಕೋಟಿ ಕೋಟಿ ಗಳಿಸುವ ದಂಧೆಗೆ ಗಣಿಗಾರಿಕೆ ಎಂಬ ಹೆಸರಿದೆ.

ಈ ರಾಕ್ಷಸರ ಉಪಟಳ ಹೆಚ್ಚಾದಾಗ ದೇವತೆಗಳು ಕೋಪಿಷ್ಠರಾದಂತೆ ಸಿಬಿಐನಿಂದ ಕೈ ಕಟ್ಟಿಸಿಕೊಂಡು ಕೆಲವರು ಜೈಲುಪಾಲಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನೂ ಕೆಲವರು ಸುಪ್ರೀಂಕೋರ್ಟಿನ ತೀರ್ಪಿನಿಂದ ಕಂಗಾಲಾಗಿ ಕಾದು ನೋಡುತ್ತಿದ್ದಾರೆ.ಜಾಗತೀಕರಣ ಎಂಬ ರಕ್ಕಸ ಲೋಕವೇ ಸೃಷ್ಠಿಯಾಗಿರುವಾಗ ಇದು ಪುನಃ ಆರಂಭವಾಗುವ ನಿರೀಕ್ಷೆ ಸಹಜವಾಗಿಯೇ ಇದೆ. [ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಹಂಪೆ ಉತ್ಸವ 2015]

ಈ ನೆಲದ ಗಣಿ ಉದ್ಯಮಿಗಳಿಗೆ ಸಾಥ್ ನೀಡಲು ಹಂಪಿಯ ಇತಿಹಾಸ ಬಗೆದು ಮುತ್ತು ರತ್ನಗಳನ್ನು ಬಳ್ಳದಿಂದ ಮಾರಾಟ ಮಾಡಿದ ಕಥನವನ್ನು ಹಂಪಿ ಉತ್ಸವದ ಮೂಲಕ ಉಣಬಡಿಸುವ ಕೆಲಸವನ್ನು ಲಾಗಾಯ್ತಿನಿಂದ ಮಾಡಲಾಗುತ್ತಿದೆ.

ಎಂಪಿ ಪ್ರಕಾಶ್ ಆರಂಭಿಸಿದ ಹಂಪಿ ಉತ್ಸವವು ಅದ್ದೂರಿ ತಾರಗಣವಿರುವ ಪೌರಾಣಿಕ ಚಿತ್ರವೇ ಹಂಪಿ ಉತ್ಸವದಲ್ಲಿ ಮೈದಾಳುತ್ತದೆ. ಇಲ್ಲಿ ಇತಿಹಾಸವೂ ಇಲ್ಲ, ಪರಂಪರೆಯೂ ಇಲ್ಲ. ಇರುವುದೆಲ್ಲಾ ಮಧ್ಯಮವರ್ಗವನ್ನು ರಂಜಿಸುವ ಅಪ್ನಾ ಉತ್ಸವ ಇದು.

ರಾಜಕೀಯ ಮುಖಂಡರ ಮಹಾ ಸರ್ಕಸ್: ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂರು ಪಕ್ಷಗಳು ಅಧಿಕಾರವಿದ್ದಾಗ ರಾಜಮಹಾರಾಜರಾಗಿ ರಂಗದಲ್ಲಿ ಅಭಿನಯಿಸಿದವರು ಅನೇಕ. ಈ ‘ಮಹಾ ಸರ್ಕಸ್'ನಲ್ಲಿ ಈ ಅತಿರಥ ಮಾಹಾರಥರು ಶ್ರೀಕೃಷ್ಣದೇವರಾಯರೇ ಆಗಿ ಬಿಡುತ್ತಾರೆ. ಹೀಗೆ ಪಾತ್ರವಹಿಸಲು ಸಹ ಪೈಪೋಟಿಯೇ ಇದೆ.

ಯಾರು ಅಧುನಿಕ ಶ್ರೀಕೃಷ್ಣದೇವರಾಯ ಎಂಬುವದರ ಬಗ್ಗೆ ಜ್ಯೋತಿಷ್ಯಗಳು, ಮಠದ ಸ್ವಾಮಿಗಳು, ನಾಡಿ, ತಾಳೆಗರಿ, ಕವಡೆ ಇಟ್ಟುಕೊಂಡು ಗಿಳಿಶಾಸ್ತ್ರ ಹೇಳಬೇಕಿದೆ. ಕಾಲಕ್ಕೆ ತಕ್ಕಂತೆ ಇವರು ಹೇಳುತ್ತಾರೆ. ಅವರು ಕೇಳುತ್ತಾರೆ. ಬಹುಶಃ ಇತಿಹಾಸದೂದ್ದಕ್ಕೂ ಹೀಗೆ ನಡೆಯುತ್ತಾ ಬಂದಿದೆ. [ಹಂಪಿ ಉತ್ಸವ ಮತ್ತು ವಿವಾದಗಳು!]

ಆತ್ಮ ಕಳೆದುಕೊಂಡ ಬಣ್ಣದ ಬಟ್ಟೆಯ ಜನರು ಕಣ್ಣಿಗೆ ರಾಚುತ್ತಾರೆ. ‘ಅಬ್ಬ ಏನೀ ಉತ್ಸವ' ‘ಏನೀ ವೈಭವ' ಎಂದು ಹೊಗಳುಭಟ್ಟರ ನಡುವೆ ಹಂಪಿ ಉತ್ಸವವು ಕಣ್ಣು ಕೊರೈಸಿ, ಹಂಪಿಯ ಇತಿಹಾಸ ಮತ್ತೊಮ್ಮೆ ನರಳುತ್ತದೇ ಗಣಿ ಕುಣಿಯಲ್ಲಿ ಕುಸಿದು ಸತ್ತ ಬಡ ಕೂಲಿಕಾರ್ಮಿಕರಂತೆ.

ಎಲ್ಲವನ್ನೂ ನೋಡುತ್ತಾ ನಿರಮ್ಮಳವಾಗಿ ಹರಿಯುತ್ತಿದ್ದಾಳೆ ತುಂಗಾಭದ್ರೆ. ಕಬ್ಬು, ಭತ್ತ, ಬಾಳೆಗೆ ನೀರುಣಿಸುತ್ತಾ ಬದುಕು ಕಟ್ಟುತ್ತಾ ಇತಿಹಾಸದ ಕೊಳೆಯನ್ನೆಲ್ಲಾ ತೊಳೆಯುತ್ತಾ ತನ್ನದೇ ಆದ ಇತಿಹಾಸ ನಿರ್ಮಿಸುತ್ತಿದ್ದಾಳೆ. ಅದನ್ನು ಮುಂದುವರೆಸುತ್ತಿರುವವರು ಇಲ್ಲಿಯ ದುಡಿಯುವ ಜನರೇ ಆಗಿದ್ದಾರೆ.

ನಡೆಯಲಾರದ ನಾಣ್ಯಕ್ಕೂ ಬಂತು ಚಲಾವಣೆ:

ಹಂಪಿಯಲ್ಲಿ ಒಮ್ಮೆ ಓಡಾಡಿ, ವಿರೂಪಾಕ್ಷ ಬೀದಿಯಲ್ಲಿ ನಡೆಯಲಾರದ ನಾಣ್ಯಗಳಿಗೆ ತುಂಬಾ ಬೆಲೆ ಇದೆ ಎಂದು ಗೊತ್ತಾಗುತ್ತದೆ. ಚಲಾವಣೆ ಇಲ್ಲದ ನಾಣ್ಯಗಳೇ ಇಲ್ಲಿ ಚಲಾವಣೆಗೊಳ್ಳುತ್ತಿವೆ.

ಯುನೆಸ್ಕೋ ಹಂಪಿಯನ್ನು ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಿಕೊಂಡ ನಂತರ ವಿಶ್ವದ ಸ್ಮಾರಕಗಳ ಸಾಲಿನಲ್ಲಿ ಹಂಪಿ ನಿಂತು, ವಿದೇಶಿ ಪ್ರವಾಸಿಗರು ಹಂಪಿಗೆ ಬರುವವರ ಸಂಖ್ಯೆ ಹೆಚ್ಚಿತು. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು ಇಲ್ಲಿ ನೆಲೆಯೂರಿ ಉತ್ಥನನ ಕೈಗೊಂಡವು.

ಹಂಪಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಯಾವಾಗ ರಸ್ತೆ, ಸೇತುವೆ, ಹೊಟೇಲ್ ಎಂದು ಅಭಿವೃದ್ಧಿಯ ಹೆಸರಲ್ಲಿ ಕಾಂಕ್ರಿಟ್ ಕಾಡು ಮಾಡಲು ಮುಂದಾಯಿತೋ ಆಗ ಯುನೆಸ್ಕೋ ಅದನ್ನು ವಿರೋಧಿಸಿ, ವಿಶ್ವ ಪರಂಪರೆ ಪಟ್ಟಿಯಿಂದ ಕೈ ಬಿಡುವ ಬೆದರಿಕೆ ಹಾಕಿತ್ತು. ಇದನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಹಂಪಿಯ ರಕ್ಷಣೆಗೆ ಬದ್ಧವಾಗಿದ್ದೇವೆಂದು ಕೆಲವು ಕೆಲಸಗಳ ಮೂಲಕ ಪಾರು ಮಾಡಿದವು.

ಯುನೆಸ್ಕೋದ ಭಾರತದ ಪ್ರತಿನಿದಿಯಾಗಿದ್ದ ಪ್ರೆಂಚ್‍ನ ಜಂಕು ತಾನಿಗುಚ್ಚಿ ಅವರಿಗೆ ನಾನು ವಿಜಯನಗರ ಸಾಮ್ರಾಜ್ಯದ ಕಥೆ ಹೇಳುತ್ತಿದ್ದಂತೆ ಆಕೆ ಮಧ್ಯೆದಲ್ಲಿ ನನ್ನ ಮಾತನ್ನು ತುಂಡರಿಸಿ, ‘ಹಂಪಿ ಒಂದು ಮಾನವ ಇತಿಹಾಸಗಳ ಸ್ಮಾರಕಗಳ ಗುಚ್ಛ, ವಿಜಯನಗರ ಸಾಮ್ರಾಜ್ಯ, ಮತ್ತೊಂದು ಸಾಮ್ರಾಜ್ಯ ನನಗೆ ಮುಖ್ಯವಲ್ಲ' ಎಂದೇ ಹೇಳಿ ಬಿಟ್ಟರು.

ಅಂದರೆ ವಿಜಯನಗರ ಸಾಮ್ರಾಜ್ಯದ ಕಥೆ ಯುನೆಸ್ಕೋಗೆ ಬೇಡವಾಗಿದೆ. ಹಂಪಿಯನ್ನು ತಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರ ಮಾಡಿಕೊಂಡಿರುವ ಜನಪದರಿಗೂ ಬೇಡವಾಗಿದೆ.

ಈ ಕಥೆ ಬೇಕಿರುವುದು ಸರ್ಕಾರಕ್ಕೆ. ಜೀವಂತ ಪರಂಪರೆಯ ಹಂಪಿಯನ್ನು ಸ್ಮಶಾನ ಮಾಡುವ ಮೂಲಕ (ರೋಮ್ ಸಾಮ್ರಾಜ್ಯದ ಕಲ್ಪನೆಯಲ್ಲಿ) ಅಲ್ಲಿಯ ಜನರನ್ನು ಒಕ್ಕೆಲೆಬ್ಬಿಸುವುದು, ಅಲ್ಲಿಯ ಫಲವತ್ತಾದ ಬಾಳೆ ತೋಟ, ಕಬ್ಬಿನ ಗದ್ದೆಗಳನ್ನು ವಶ ಪಡಿಸಿಕೊಂಡು ಹಂಪಿಯನ್ನು ಇನ್ನಿಷ್ಟು ಬೋಳಾಗಿಸಿ ನಿರ್ವಸತಿ ಪ್ರದೇಶವನ್ನಾಗಿ ಮಾಡುವ ಯತ್ನ ನಡೆಸಿದೆ. ಕೇಂದ್ರ ಪುರಾತತ್ವ ಇಲಾಖೆಯು 250 ಎಕರೆ ಫಲವತ್ತಾದ ಭೂಮಿಯನ್ನು ಈಗಾಗಲೇ ವಶ ಪಡಿಸಿಕೊಂಡಿದೆ.

ಎಲ್ಲವೂ ಪ್ರವಾಸೋದ್ಯಮದಿಂದ ಬರುವ ಲಾಭಕ್ಕಾಗಿ :ರಾಜ್ಯ ಸರ್ಕಾರ ಈಗ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಹೋತ್ಸವ ನಡೆಸಿ, ಹೆಲಿ ಟೂರಿಸಂ. ವಿಮಾನ ನಿಲ್ದಾಣ, ಫೈವ್ ಸ್ಟಾರ್ ಹೊಟೇಲ್ ಗಳು, ರೇಸಾರ್ಟ್‍ಗಳ ಮೂಲಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸೋದ್ಯಮದಿಂದ ಲಾಭ ಮಾಡಿಕೊಳ್ಳಲು ಯೋಚಿಸಿದೆ.

ಹಂಪಿಯನ್ನು ಮತೀಯ ವಿವಾದ ಕೇಂದ್ರ ಮಾಡಲು ಸತತವಾಗಿ ಪ್ರಯತ್ನಿಸುತ್ತಾ ಬಂದಿರುವ ಮತೀಯ ಶಕ್ತಿಗಳು ದಕ್ಷಿಣ ಭಾರತದಲ್ಲಿ ಹಂಪಿಯನ್ನು ‘ನಾಗಪುರ' ಕೇಂದ್ರ ಮಾಡಿಕೊಳ್ಳಲು ಹವಣಿಸಿವೆ. ಇದರ ಫಲವಾಗಿಯೇ ಈಗ ‘ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್)' ಹುಟ್ಟಿಕೊಂಡಿದೆ.

ನಿನ್ನೆ ಮೊನ್ನೆಯಷ್ಟೇ ಬೆಳಕು ಕಂಡ ಈ ಟ್ರಸ್ಟ್ ಗೆ ಸರ್ಕಾರ ಬಜೆಟ್ ನಲ್ಲಿ 50 ಕೋಟಿ ಹಣ ತೆಗೆದಿರಿಸಿದೆ. ಈಗಾಗಲೇ 3ಕೋಟಿ ಹಣ ಬಿಡುಗಡೆ ಮಾಡಿದ್ದು, ಸಪ್ಪಳವಿಲ್ಲದೇ ಕೆಲಸ ಕಾರ್ಯ ಆರಂಭಗೊಂಡಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಎಕರೆ ಭೂಮಿಯನ್ನು ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್)ಗೆ ಪರಭಾರೆ ಮಾಡುವ ನಿರ್ಧಾರವನ್ನು ನಾಡಿನ ಬುದ್ಧಿಜೀವಿಗಳು, ಸಾಹಿತಿಗಳು, ಸಂಘಟನೆಗಳು ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಹಿಂತೆಗೆದುಕೊಂಡಿದೆ. [ಹಂಪಿ ಉತ್ಸವ ಇತಿಹಾಸ]

ಆದರೆ ಟ್ರಸ್ಟ್ ಇನ್ನೂ ಇದೆ. ಯಾವ ಕಾರಣಕ್ಕೆ ಟ್ರಸ್ಟ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾಲಿಡಬಾರದು ಎಂಬ ತಾತ್ವಿಕ ಹೋರಾಟ ನಡೆಸಲಾಗಿತ್ತೋ ಅದು ಇನ್ನೂ ಜೀವಂತವಾಗಿದೆ. ಅದು ಕನ್ನಡ ವಿವಿ ಆವರಣದಲ್ಲಿ ಇರಲಿಕ್ಕಿಲ್ಲ. ಅದರ ಪಕ್ಕದಲ್ಲಿಯೇ ತಲೆ ಎತ್ತಬಹುದು. ಟ್ರಸ್ಟ್‍ನಲ್ಲಿ 18 ಸದಸ್ಯರಿದ್ದಾರೆ. ಇವರಲ್ಲಿ ಇತಿಹಾಸ, ಪುರಾತತ್ವ ಸಂಶೋಧಕರಾಗಲಿ ಯಾರು ಇಲ್ಲ.

ಇರುವವರು ಒಂದು ಪಕ್ಷಕ್ಕೆ ಸೇರಿದ ರಾಜಕಾರಣಿಗಳು, ಹೊಟೇಲ್ ಉದ್ಯಮಿಗಳು ಹಾಗೂ ಒಂದು ಸಿದ್ಧಾಂತಕ್ಕೆ ಬದ್ಧರಾದ ಜನ ಇದ್ದಾರೆ. ಟ್ರಸ್ಟ್ ಹೇಳುವಂತೆ ‘ಶ್ರೀಕೃಷ್ಣದೇವರಾಯನ ಪ್ರತಿಮೆ ಸ್ಥಾಪನೆ, ದೆಹಲಿ ಅಕ್ಷರಧಾಮ ಮತ್ತು ಕುರುಕ್ಷೇತ್ರದ ಮಹಾಭಾರತ ಥೀಮ್ ಪಾರ್ಕ್ ನಿರ್ಮಾಣ, ವಿಜಯನಗರ ಕಾಲದ ವಸ್ತು ಸಂಗ್ರಹಾಲಯ, ವಿಜಯನಗರ ವೈಭವ ನಿರೂಪಿಸುವ ಮಲ್ಟಿಮಿಡೀಯಾ ಪ್ರದರ್ಶನ' ಸೇರಿದಂತೆ ಪ್ರತಿóóಷ್ಠಾನ ಧ್ಯೇಯಕ್ಕೆ ಅನುಗುಣವಾಗುವಂತಹ ಇತರ ಚಟುವಟಿಕೆಗಳು' ನಡೆಸಲಾಗುತ್ತಿದೆ ಎಂದು ತಿಳಿಸಿದೆ.

‘ಕಾಲಿದ್ದವರು ಹಂಪಿ ನೋಡಬೇಕು' ಎನ್ನುವ ಗಾದೆಯೊಂದು ಇದೆ. ಕಾಲುಸೋತು ಹೋಗುವವರೆಗೆ ಹಂಪಿ ನೋಡಿದಷ್ಟು ಇನ್ನೂ ನೋಡಬೇಕು ಎನ್ನುವ ನಿಗೂಢತೆಯನ್ನು ಉಳಿಸಿಕೊಂಡಿದೆ. ಇಡೀ ಹಂಪಿಯೇ ಒಂದು ಥೀಮ್ ಪಾರ್ಕು ಆಗಿರುವಾಗ ಮತ್ತೊಂದು ಕೃತಕ ಥೀಮ್ ಪಾರ್ಕು ಯಾಕೇ ಎನ್ನುವುದು ಈಗ ಪ್ರಶ್ನೆಯಾಗಿದೆ.

ಕನ್ನಡದ ನೆಲವೊಂದು ಹೀಗೆ ಪ್ರವಾಸೋದ್ಯಮದ ಅಭಿವೃದ್ಧಿ ಎನ್ನುವ ಹೆಸರಲ್ಲಿ ದುರ್ಬಳಕೆಯಾಗುತ್ತಿದ್ದು, ಕಣ್ಮರೆಯಾಗುತ್ತಿದೆ. ಫಲವತ್ತಾದ ಕೃಷಿ ಭೂಮಿಯು ‘ನಿರ್ವಸತಿಗರ ಪ್ರದೇಶವಾಗಿ' ಮಾರ್ಪಾಡಾಗುತ್ತದೆ ಹಾಗೂ ಈ ಭೂಮಿಯು ಜಾಗತಿಕ ಭೂಮಿಯಾಗಿ ಪರಿವರ್ತನೆಯಾಗುತ್ತದೆ. ಕನ್ನಡಿಗರನ್ನು ತಬ್ಬಲಿ ಮಾಡಿ, ಇದರ ಪಕ್ಕದಲ್ಲಿಯೇ ವಿದೇಶಿ ಪ್ರವಾಸಿಗರ ಬೇಕು, ಬೇಡಿಕೆ ಪೂರೈಸುವ ಪಿಂಪ್‍ಗಳನ್ನಾಗಿ, ಕೊಳಚೆ ಪ್ರದೇಶದಲ್ಲಿ ವಾಸಿಸುವವರನ್ನಾಗಿ ಮಾಡಿ ಹಾಕಲಾಗುತ್ತಿದೆ.

ಈಗಾಗಲೇ ಅಭಿವೃದ್ಧಿಯ ಹೆಸರಲ್ಲಿ ಬಳ್ಳಾರಿ ಜಿಲ್ಲೆಯ ಕಾಶ್ಮೀರ ಎಂದು ಕರೆಸಿಕೊಳ್ಳುವ ಜೀವವೈವಧ್ಯತೆಯಿಂದ ತುಂಬಿದ್ದ ಸಂಡೂರು ಕಾಡು ಈಗ ಗಣಿಗಾರಿಕೆಯಿಂದ ಬರಡಾಗಿದೆ. ಚಿರತೆ, ಜಿಂಕೆ, ನವಿಲುಗಳು ಕಣ್ಮರೆಯಾಗಿವೆ. ಓಬಳಾಪುರಂ ಗಣಿಗಾರಿಕೆಯು ಕರ್ನಾಟಕದ ನೆಲವನ್ನೇ ಆಂಧ್ರ ಪ್ರದೇಶಕ್ಕೆ ಸೇರಿಸಿಬಿಟ್ಟಿದೆ. ಅಭಿವೃದ್ಧಿ ಎಂದರೆ ಅದೊಂದು ಭಯಾನಕ ಎನ್ನುವ ಆತಂಕವೊಂದು ಸೃಷ್ಟಿಯಾಗಿ ಬಿಟ್ಟಿದೆ..

ಈ ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು. ಹಂಪಿಯನ್ನು ಉಳಿಸಿಕೊಳ್ಳುವುದು, ಇಲ್ಲಿಯ ಕೃಷಿಕ ಕನ್ನಡಿಗರನ್ನು ಬದುಕುವುದಕ್ಕೆ ತಮ್ಮ ನೆಲ ಉಳಿಸಿಕೊಳ್ಳುವುದಕ್ಕೂ ಸಂಬಂಧಿಸಿದೆ. ಭೂತ ಎನ್ನುವುದು ವರ್ತಮಾನದ ನಡುಗೆಯೊಂದಿಗೆ ಬೆಸೆದುಕೊಂಡಿದೆ. ಅದು ಭವಿಷ್ಯದ ದಾರಿ ಆಗಿದೆ. ಹಂಪಿ- ವಿಜಯನಗರ ಬೇರೆ ಬೇರೆ ಹೇಗೆ? ಮುಂದೆ ಓದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka history and culture will be unfolded at three days Hampi utsav (festival) in Hampi, Bellary district. Exhibition is showcasing the century old Karnataka history, which is attracting local and foreign people alike. But, History of Vijayanagar Kingdom and Hampi are different says article by Parushuram Kulal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more