Marriage: ಮದುವೆ ಸೀಸನ್: ನಮಗೂ ಇರಲಿ ಒಂದು ನೀತಿ ಸಂಹಿತೆ: ಅಮೃತ ಜೋಶಿ ಬರಹ
Marriage: ಮದುವೆ ಸೀಸನ್: ನಮಗೂ ಇರಲಿ ಒಂದು ನೀತಿ ಸಂಹಿತೆ: ಹಿರಿಯ ಪತ್ರಕರ್ತ ಅಮೃತ ಜೋಶಿ ಅವರ ಬರಹ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಮದುವೆಗಳಿಗೆ ಹೋದಾಗ ನಮ್ಮ ಒಟ್ಟು ಸಮಾಜದ ಅಸ್ತ್ಯವ್ಯಸ್ತ ಜೀವನಶೈಲಿಯ ದರ್ಶನವಾಗುತ್ತದೆ. ಅನೇಕ ಸಾರಿ ಕಿರಿಕಿರಿಯಾಗುವಷ್ಟು. ಒಂದಿಷ್ಟು ದೃಶ್ಯಗಳು ನಿಮಗಾಗಿ.

1. ಹೋದ ತಕ್ಷಣ ನಾವು ಅನೇಕರು ಮಾಡುವ ಮೊದಲ ಕೆಲಸವೆಂದರೆ ನೀಟಾಗಿ ಸಾಲಾಗಿ ಹಾಕಿರುವ ಖುರ್ಚಿಗಳನ್ನು ಸರಿಸಾಡುತ್ತ ಅಲ್ಲೆಲ್ಲೋ ದೂರದಲ್ಲಿ ಕುಳಿತಿರುವ ನಮ್ಮ ಪರಿಚಿತರ ಬಳಿ ಹೋಗುತ್ತೇವೆ. ತಕ್ಷಣವೇ ಖುರ್ಚಿಗಳನ್ನು ಹಿಂದೆ ಮುಂದೆ ಮಾಡಿ ಒಂದು ಸಣ್ಣ ರೌಂಡ ಟೇಬಲ್ ಕಾನ್ಫರೆನ್ಸನ್ನೇ ಪ್ರಾರಂಭಿಸುತ್ತೇವೆ. ನಿಮಗೆ ನೀಡಲಾದ ವೆಲಕಮ್ ಡ್ರಿಂಕ್ ಗ್ಲಾಸನ್ನು ಅಲ್ಲೇ ಖುರ್ಚಿಯ ಕೆಳಗೋ ಅಥವಾ ಪಕ್ಕದ ಖುರ್ಚಿಯ ಮೇಲೋ ಇಟ್ಟು ಸಂತೃಪ್ತರಾಗುತ್ತೇವೆ.
2. ಇನ್ನು ವಧುವರರಿಗೆ ಶುಭಾಶಯ ಕೋರಲು ಹೋಗಲು ಇರುವ ಕ್ಯೂ ನಿಯಂತ್ರಿಸಲು ಇನ್ನು ಬೌಂನ್ಸರ್ ನೇಮಿಸುವುದು ಒಂದು ಬಾಕಿ ಇದೆ ಅಷ್ಟೇ. ಹಿರಿಯರು ಕಿರಿಯರು ಎನ್ನದೇ ಎಲ್ಲರೂ ನುಗ್ಗುವವರೇ. ಕೆಲವರಂತೂ ವಿಐಪಿ ಕೋಟಾದಲ್ಲಿ ಇನ್ನೊಂದು ಕಡೆಯಿಂದಲೂ ನುಗ್ಗುತ್ತಾರೆ.
3. ಇನ್ನು ಫೋಟೋ ಕಥೆಯಂತೂ ಯಾರಿಗೂ ಬೇಡ. ಮೊದಲು ಶಾಲಾ ಮಕ್ಕಳ್ಳಂತೆ ನಮ್ಮನ್ನು ಪೋಟೋಗ್ರಾಫರ್ ಹೇಳಿ ನಿಲ್ಲಿಸಬೇಕು. ಇದಾದ ನಂತರ ನಮ್ಮ ನಮ್ಮ ಮೊಬೈಲ್, ನಂತರ ಸೆಲ್ಫಿ. ಇದಕ್ಕಿಂತ ಮೀರಿ ಇತ್ತೀಚಿಗೆ ಒಂದು ಮದುವೆಯಲ್ಲಿ ಫೋಟೋ ಸೆಲ್ಫಿ ಮೊಬೈಲ್ ಫೋಟೋ ಎಲ್ಲ ಮುಗಿದ ಮೇಲೆ ಒಬ್ಬ ಮಹಾಶಯರು ಅಲ್ಲಿಂದ ವಿಡಿಯೋ ಕಾಲ್ ಮೂಲಕ ವಿದೇಶದಲ್ಲಿನ ತಮ್ಮ ಮಗಳೊಂದಿಗೆ ವಧುವರರ ಪರಿಚಯ ಹಾಗೂ ಶುಭಾಶಯದ ಕಾರ್ಯಕ್ರಮ. ಹಿಂದೆ ಪಾಳಿಯಲ್ಲಿ ಕಾಯುತ್ತಿರುವವರ ಪರಿಸ್ಥಿತಿ ಯಾತಕ್ಕೂ ಬೇಡ.
4. ಇನ್ನು ಊಟದ ಹಾಲ್ ಕಥೆಯೂ ಹೀಗೆ. ಆಯೋಜಕರು ಎಷ್ಟು ವ್ಯವಸ್ಥೆಗಳನ್ನು ಮಾಡಿದರೂ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ಮಾನಸಿಕತೆ. ಎಲ್ಲ ಸೇರಿ ಊಟಕ್ಕೆ ಬೇಕಾಗೋದು ಹದಿನೈದು ನಿಮಿಷ ಅಷ್ಟೂ ವ್ಯವಧಾನ ಇಲ್ಲದವರು ನಾವು. ಬಫೆಯಲ್ಲಿ ತಮ್ಮ ಫ್ಲೇಟ್ ಇನ್ನೊಬ್ಬರಿಗೆ ತಾಕದಂತೆ ನೋಡಿಕೊಳ್ಳಬೇಕೆಂದು ಅನೇಕರಿಗೆ ಅನಿಸುವುದೇ ಇಲ್ಲ. ಬಫೆ ಇದ್ದಲ್ಲಿ ನಾವೊಂದು Apron ಹಾಕಿಕೊಳ್ಳೋದು ಒಳ್ಳೇಯದು. ಇಲ್ಲದಿದ್ದರೆ ಮುಂದಿನವರ ಹಿಂದಿನವರ ಫ್ಲೇಟಿನ ಆಹಾರದ ಕಲೆಗಳೆಲ್ಲವೂ ನಮ್ಮ ಬಟ್ಟೆಯ ಮೇಲಂತೂ ಪಕ್ಕಾ. ಎಲ್ಲವನ್ನು ಹಾಕಿಕೊಂಡು ನಂತರ ತಿನ್ನದೇ ಹಾಗೇ ಬಿಟ್ಟು ಊಟ ಮುಗಿಸುವುದು ನಮ್ಮಲ್ಲಿ ಬಹುತೇಕರು ಮಾಡುವ ಮಹಾಪಾಪ.
5. ಇತ್ತೀಚಿನ ಮದುವೆಗಳಲ್ಲಿ ಎರಡನೇಯ ಮುಹೂರ್ತ ಎಂಬ ದೊಡ್ದ ಪ್ರಹಸನ. ಅದಕ್ಕೆ ಸಮಯ ಅಂತ ಯಾಕೆ ನಿಗದಿ ಮಾಡುತ್ತಾರೋ ತಿಳಿಯದು. ಒಂದೇ ಮದುವೆಯ ಎರಡು ಮುಹೂರ್ತ, ಎರಡೆರಡು ಅಕ್ಕಿಕಾಳು. ಇದು ಶಾಸ್ತ್ರಸಮ್ಮತವೇ, ಮೊದಲನೇಯ ನಿಜ ಮುಹೂರ್ತ ಎಂದು ಆದ ಮೇಲೆ ಎರಡನೇಯದನ್ನು ಕೇವಲ ಆರತಕ್ಷತೆ ಹಾಗೂ ಶುಭಾಶಯ ಕಾರ್ಯಕ್ರಮ ಎಂದು ಹೇಳಿದರೇ ಒಳ್ಳೆಯದಲ್ಲವೇ.
ಹೀಗೆ ಪಟ್ಟಿ ಮಾಡುತ್ತ ಹೋದರೆ ಪಟ್ಟಿಗೆ ಅಂತ್ಯವಿಲ್ಲ. ಪಟ್ಟಿ ಮಾಡುವ ಉದ್ದೇಶವೂ ನನ್ನದಲ್ಲ. ಉದ್ದೇಶವಿಷ್ಟೇ.. ಮದುವೆ ಎಂಬ ಸಂಸ್ಕಾರದ ಕಾರ್ಯಕ್ರಮವನ್ನು ನಾವೆಲ್ಲರೂ ಅತಿಥಿಗಳಾಗಿಯೋ, ಆಯೋಜಕರಾಗಿಯೋ ಒಂದಿಷ್ಟು ಪರಿವರ್ತನೆ, ಒಂದಿಷ್ಟು ಸ್ವಯಂ ಸಂಹಿತೆಯನ್ನು ನಮ್ಮ ನಮ್ಮ ಮಟ್ಟದಲ್ಲಿಯೇ ಅಳವಡಿಸಿಕೊಂಡರೇ ಕಾರ್ಯಕ್ರಮಕ್ಕೆ ಒಂದಿಷ್ಟು ಮೆರಗು, ಸಾರ್ಥಕತೆಯನ್ನು ತರಬಹುದಲ್ಲವೇ. ಶುಭ ವಿವಾಹ ಎಂಬ ಷೋಡಶಸಂಸ್ಕಾರದ ಪ್ರಮುಖ ಸಂಸ್ಕಾರವನ್ನು ಕೇವಲ ಒಂದು Happiness Event ಆಗದಂತೆ ಮಾಡುವ ಜವಾಬ್ದಾರಿ ನಮ್ಮೆಲರದಲ್ಲವೇ.
Marriage Wedding Season Etiquette: Time for Code of Conduct Thought Provoking Piece by Amrita Joshiಬರಹ: ಅಮೃತ ಜೋಶಿ












Click it and Unblock the Notifications