ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ- ವಿಜಯನಗರ ಬೇರೆ ಬೇರೆ ಹೇಗೆ?

By ಪರುಶುರಾಮ ಕಲಾಲ್
|
Google Oneindia Kannada News

ಹಂಪಿಯನ್ನು ವಿಜಯನಗರ ಇತಿಹಾಸದೊಂದಿಗೆ ಕಟ್ಟಿ ಹಾಕಿ ಮಾತನಾಡಬಾರದು. ವಿಜಯನಗರ ಸಾಮ್ರಾಜ್ಯದಾಚೆಗೂ ಹಂಪಿ ಇತ್ತು. ಹಂಪಿಯ ಇತಿಹಾಸ ಆದಿ ಮಾನವ ಇಲ್ಲಿ ನೆಲೆ ಮಾಡಿಕೊಂಡಾಗಿನಿಂದ ಪ್ರಾರಂಭವಾಗುತ್ತದೆ. ಹಂಪಿಯ ಗುಹೆಗಳಲ್ಲಿ ಹಲವಾರು ಆದಿಮ ಕಾಲದ ಚಿತ್ರಗಳು, ಆದಿಮ ಸಂಸ್ಕøತಿಯ ಜನವಸತಿ ನೆಲೆಗಳು ಬೆಳಕಿಗೆ ಬಂದಿವೆ.

ಹಂಪಿ ಎಂಬ ಹೆಸರೇ ಅಲ್ಲಿಯ ಪಂಪಾಪತಿ, ಹಂಪಮ್ಮನಿಂದ ಬಂದಿದ್ದಾಗಿದೆ. ಹಂಪಿಯ ಆದಿ ದೈವ ವಿರೂಪಾಕ್ಷನೇ ಈ ಪಂಪಾಪತಿ. ಭೈರವನ ಮತ್ತೊಂದು ಹೆಸರು. ಶೈವ ಪರಂಪರೆಯ ಕಾಳಾಮುಖ, ಕಾಪಾಲಿಕ, ಲಕುಲೀಶ, ಕೌಳ, ಪಾಶುಪಥ, ಮಹಾವ್ರತ ಸೇರಿದಂತೆ, ಲೋಕಾಯುತ, ಅವಧೂತ, ಆರೂಢ, ಶಾಕ್ತ, ಆದಿ ಜಾಂಬವ, ಮಾತಂಗ, ಕಪಿಲ ಹಾಗೂ ಸೂಫಿ ಎಲ್ಲಾ ಅವೈದಿಕ ಪರಂಪರೆಗಳ ಸಮ್ಮೀಲನದ ಕೇಂದ್ರ ಹಂಪಿಯಾಗಿತ್ತು.

ಲಕ್ಕಣ ದಂಡೇಶ ತನ್ನ ಕಾವ್ಯದ ಆರಂಭದಲ್ಲಿ ಒಂದು ಮಾತು ಹೇಳುತ್ತಾನೆ. 'ಶಿವತಾಂತ್ರಿಕರ ಚರಣಾಂಬುಜಕ್ಕೆ ಶರಣು'. ಇದು ಹೇಳುವುದು ಇದನ್ನೇ.ಕಂಪಿಲರಾಯ, ಕುಮಾರ ರಾಮ, ಹೊಯ್ಸಳರು, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರು ಎಲ್ಲರೂ ಹಂಪಿಯಲ್ಲಿ ರಾಜ್ಯಾಭಾರ ಮಾಡಿದವರೇ ಆಗಿದ್ದಾರೆ.

ವಿಜಯನಗರ ಪೂರ್ವದ ಶೈಲಿಯ ಕಟ್ಟಡಗಳು ಸಾಕಷ್ಟು ಸಂಖ್ಯೆಯಲ್ಲಿ ಹಂಪಿಯಲ್ಲಿ ಸಿಗುತ್ತವೆ. ಬೌದ್ಧ, ಜೈನರ ದೇಗಲುಗಳು, ಮೂರ್ತಿಗಳು ಸಹ ಸಿಗುತ್ತವೆ. ಅಧಿಕಾರರೂಢ ಎಲ್ಲಾ ರಾಜಕೀಯ ಏಳುಬೀಳುಗಳನ್ನು ಹಂಪಿ ಕಂಡಿದೆ. ಹಂಪಿ ಹೊಳೆ ಎಲ್ಲಾ ಅಧಿಕಾರರೂಢ ರಾಜಕೀಯ ಇತಿಹಾಸವನ್ನು ತೊಳೆದು ಹಾಕಿದೆ. ಅದರಂತೆ ಇಲ್ಲಿಯ ಜನರ ನೆನಪಿನಾಳದಲ್ಲಿ ಉಳಿದಿರುವುದು ಹಂಪಿ ಮಾತ್ರ.

Hampi Utsava 2015

'ಹಾವಿನ್ಹಾಂಗ ಹರಿದಾಡಿ ಬಂದಾಳ ಗಂಗಮ್ಮ
ಇಂಬಿಲ್ಲವೆಂದು ಮೊರೆದಾಳ: ಹಂಪಿಯಾಗ
ತೆಂಗುಬಾಳೆಯಲಾಡಿ ಹರಿದಾಳ'
ಎಂದು ಜನಪದರು ಹಂಪಿ ಹೊಳೆಯನ್ನು ನಂಬಿ ಹಾಡಿದ್ದಾರೆ.


ಆಕೆಯನ್ನು ಬದುಕಿಗೆ ತಂದು ಕೊಂಡು ಬದುಕುತ್ತಿದ್ದಾರೆ. 'ತೇಲಿಸೋ ಇಲ್ಲಾ...ಮುಳುಗಿಸೋ... ರಂಗಾ' ಎಂದು ಪುರಂದರ ದಾಸರ ಹಾಡು ಕೂಡಾ ಹಂಪಿ ಹೊಳೆಯನ್ನೇ ರೂಪಕವನ್ನಾಗಿ ಮಾಡಿಕೊಂಡಿದೆ. ಬಳ್ಳಾರಿ ಜಿಲ್ಲೆಯ ಜನಪದ ಸಾಹಿತ್ಯದ ಎಲ್ಲಾ ಪ್ರಕಾರಗಳ ಸಂಗ್ರಹ ನಡೆದಿದೆ. ಅದರಲ್ಲಿ ಎಲ್ಲಿಯೂ ವಿಜಯನಗರದ ಸುಳಿವೇ ಇಲ್ಲ. ಇರುವುದು ಕಂಪಿಲ ಕುಮಾರರಾಮನ ಕಥೆಗಳು ಮಾತ್ರ. ಇದು ಕೂಡಾ ಇದನ್ನೇ ಹೇಳುತ್ತಿದೆ.

ಇಲ್ಲಿಯ ಜನಪದರು ಹಂಪಿಯನ್ನು ರಾಮಾಯಣ, ಮಹಾಭಾರತದ ಕಾವ್ಯದ ಜೊತೆ ಹೋಲಿಸುತ್ತಾರೆ. ಸೀತೆ ಸೆರಗು, ವಾಲಿ ಗವಿ, ಕಿಷ್ಕಂಧ, ರಾವಣನ ಉಚ್ಚೆ ಹೊಂಡ ಇವೆಲ್ಲಾ ಇದನ್ನೆ ಹೇಳುತ್ತಿವೆ. ಜನಪದನೊಬ್ಬ ನನಗೆ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿರುವ ಕಮಲ್ ಮಹಲ್ ಬಗ್ಗೆ ಅದನ್ನು ಚಿತ್ರಾಂಗಿ ಮಹಲ್ ಎಂದು ಹೆಸರಿಸಿ, ಕುಮಾರರಾಮನ ಕಥೆ ಹೇಳಿದ.

ಅವೈದಿಕ ಪರಂಪರೆಯ ತಾಣವಾದ ಹಂಪಿಯನ್ನು ಕುರುಬರು, ನಾಯಕರು ಸೇರಿದಂತೆ ಅಲೆಮಾರಿ, ಅರೆ ಅಲೆಮಾರಿಗಳು ತಮ್ಮ ಸ್ಥಳ ಎಂದು ಭಾವಿಸಿದ್ದಾರೆ. ಹಂಪಿ ಜಾತ್ರೆಯಲ್ಲಿ ಇವರೆಲ್ಲಾ ಸೇರಿ ತಮ್ಮ ಹಳೇಯ ವ್ಯಾಜ್ಯ ಬಗೆಹರಿಸಿಕೊಳ್ಳುತ್ತಾರೆ.

ಹೊಲೆಮಾದಿಗರು ಮಾತಂಗಿ ಪರ್ವತದ ಬಳಿ ಸೇರುತ್ತಾರೆ. ಹೀಗೆ ಹಂಪಿಯು ಜನ ಸಂಸ್ಕøತಿಯ ಭಾಗವಾಗಿದೆ. ಈ ಭಾಗದ ಆದಿ ದೈವವಾಗಿ ವಿರೂಪಾಕ್ಷನಿದ್ದಾನೆ. ಹಂಪಿ ಜಾತ್ರೆ, ಹಂಪಿ ಫಲಪೂಜೆಗೆ ಲಕ್ಷಾಂತರ ಜನರು ಸೇರುತ್ತಾರೆ. ಕಮಲ್ ಮಹಲ್ ಬಳಿ ಇರುವ ಪಟ್ಟಣದ ಎಲ್ಲಮ್ಮ, ಮಾತಂಗ ಪರ್ವತದ ಹಿಂದುಗಡೆ ಬರುವ ಹತ್ತುಕೈ ತಾಯಮ್ಮ ದೈವಗಳು ಕೆಳವರ್ಗದವರ ದೈವಗಳಾಗಿ ಇವತ್ತಿಗೂ ಪೂಜಿಸಲ್ಪಡುತ್ತವೆ.

ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವೆಂದರೆ, ಹಂಪಿಯನ್ನು ವಿಜಯನಗರ ಕಾಲಕ್ಕೆ ಕಟ್ಟಿ ಹಾಕುವ ಪ್ರಯತ್ನವೊಂದು 20ನೇ ಶತಮಾನದ ಮೊದಲ ದಶಕಗಳಲ್ಲಿ ಆರಂಭವಾಯಿತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

Hampi Utsav

ಹಂಪಿಯ ಪಳೆಯ ಮುಖಗಳು...
ಹಂಪಿಯ ಪುರಾತತ್ವ ಇಲಾಖೆಯ ದಿನಗೂಲಿಗಳಿಗೆ ಇತಿಹಾಸದ ಪಳೆಯ ಮುಖಗಳಾಗಿವೆ. ಇವರ ವರ್ತಮಾನ ಕಠೋರವಾಗಿದೆ. ಭವಿಷ್ಯ ಶೂನ್ಯವಾಗಿದೆ. ಇವರೇ ಈಗ ಇತಿಹಾಸದ ಜೀವಂತ ಸ್ಮಾರಕವಾಗಿ ಬಿಟ್ಟಿದ್ದಾರೆ. ಗತ ಇತಿಹಾಸದ ಪಳಿಯುಳಿಕೆಯ ಬಂಡೆಗಳನ್ನು ಹೊರ ತೆಗೆದು ಅವುಗಳನ್ನು ಮರುಜೋಡಿಸುವ ಇವರ ಬದುಕು ಮುಕ್ಕಾಗಿದೆ.

ಗತ ಇತಿಹಾಸಕ್ಕೆ ಸೇರಿದ ಪ್ರಾಚೀನ ಸ್ಮಾರಕಗಳ ಉತ್ಖನನ ಹಾಗೂ ಸಂರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ದಿನಗೂಲಿಗಳಾಗಿದ್ದಾರೆ ಇವರು.

80ರದಶಕದಲ್ಲಿಯೇ ಹಂಪಿಯಲ್ಲಿ ಉತ್ಖನನ ಕೆಲಸ ಆರಂಭಗೊಂಡಿತು. ಆಗ ಕಮಲಾಪುರ, ಎಚ್.ಪಿ.ಸಿ. ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ 224 ಜನರು ದಿನಗೂಲಿಗಳಾಗಿ ಕೆಲಸಕ್ಕೆ ಸೇರಿಕೊಂಡರು. ಅವರಲ್ಲಿ ಉಳಿದವರು ಈಗ 132ಜನರು. ಉಳಿದ 40ಕ್ಕೂ ಹೆಚ್ಚು ಜನರು ಇತಿಹಾಸವನ್ನು ಕೆದುಕುತ್ತಲೇ ಇತಿಹಾಸದ ಕಸದ ಬುಟ್ಟಿಯಲ್ಲಿ ಲೀನವಾಗಿ ಹೋಗಿದ್ದಾರೆ.

1988-89ರಲ್ಲಿ 36ಜನರನ್ನು ಕಾಯಂ ನೌಕರರೆಂದು ಪರಿಗಣಿಸಲಾಯಿತು. ಉಳಿದವರಲ್ಲಿ ಇದು ಆಸೆಯನ್ನು ಮೂಡಿಸಿತು. ಇವತ್ತಿಲ್ಲ ನಾಳೇ ನಮಗೂ ಭವಿಷ್ಯ ಇದೆ ಎಂದು ಭಾವಿಸಿ, ಇತಿಹಾಸವನ್ನು ಕೆದಕುತ್ತಾ, ಕಟ್ಟುತ್ತಾ ಹೋದರು. ಈ ದಿನಗೂಲಿಗಳಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ವರ್ತಮಾನ ಕಠೋರವಾಗುತ್ತಲೇ ಹೊಯಿತು.

'ಆರಂಭದಲ್ಲಿ 3ರೂ. 75 ಪೈಸೆಯಂತೆ ದಿನಗೂಲಿ ಮಾಡುತ್ತಲೇ ಬಂದಿದ್ದೇವೆ. 1988-89ರಲ್ಲಿ ಕ್ರೇನ್ ಬಂದಿತು. ದೊಡ್ಡ ಸ್ಮಾರಕಗಳನ್ನು, ಬಂಡೆಗಳನ್ನು ಇದರಿಂದ ಎತ್ತಲು ಸಾಧ್ಯವಾಯಿತು. ಇದು ಬರುವ ಮುಂಚೆ ದೊಡ್ಡ ಬಂಡೆಗಳನ್ನು, ಕಲ್ಲುಕಂಭಗಳನ್ನು ಹಗ್ಗ ಕಟ್ಟಿ ಭುಜದಿಂದಲೇ ದನಗಳಂತೆ ಎಳೆದಿದ್ದೇವೆ ನೋಡಿ' ದಿನಗೂಲಿಗಳು ತಮ್ಮ ಅಂಗಿ ಬಿಚ್ಚಿ ಭುಜ ತೋರಿಸುತ್ತಾರೆ.

ಭುಜದ ಮೇಲೆ ಇತಿಹಾಸ ಮೂಡಿಸಿದ ಕಪ್ಪು ಕಲೆ ಮುಖಕ್ಕೆ ರಾಚುತ್ತದೆ. ತೀರಾ ವಯಸ್ಸಾದ ಕಾರ್ಮಿಕರನ್ನು ಸ್ಮಾರಕಗಳ ಕಾವಲಿಗೆ ಹಾಕಲಾಗಿದೆ. ಮಹಿಳಾ ದಿನಗೂಲಿಗಳಿಗೆ ಈ ಭಾಗ್ಯವೂ ಇಲ್ಲ. ಕೆಲಸ ಮಾಡಿದರೆ ಅಂದಿನ ಊಟ, ಇಲ್ಲದಿದ್ದರೆ ಇಲ್ಲ ಎಂದೇ ಹೇಳಲಾಗುತ್ತಿದೆ. ಈಗ ದಿನಗೂಲಿಗಳಿಗೆ ಪುರುಷರಿಗೆ 142ರೂ. ಮಹಿಳೆಯರಿಗೆ 127ರೂ. ನೀಡಲಾಗುತ್ತಿದೆ. ಇದಕ್ಕೂ ಹಿಂದೆ 120ರೂ. ಪುರುಷರಿಗೆ, 92ರೂ. ಮಹಿಳೆಯರಿಗೆ ನೀಡಲಾಗುತ್ತಿತ್ತು.

ನವ ದೆಹಲಿಯ ಶ್ರೇಷ್ಠ ನ್ಯಾಯಾಲಯವು 2002 ಮಾರ್ಚ್ 11ರಂದು ದಿನಗೂಲಿಗಳ ಬಗ್ಗೆ ಮಹತ್ವದ ತೀರ್ಪು ನೀಡಿ, ದಿನಗೂಲಿಗಳ ಜೇಷ್ಠತೆ ಆಧಾರದ ಮೇಲೆ ಡಿ. ಗ್ರೂಪ್ ನೌಕರರೆಂದು ಬಗೆಯಬೇಕು. ವರ್ಷಕ್ಕೆ 224ದಿನ ಕೆಲಸ ನೀಡಬೇಕು ಎಂದು ತೀರ್ಪಿನಲ್ಲಿ ವಿವರಿಸಿದೆ. ಆದರೆ ಇಲ್ಲಿ ಇದ್ಯಾವದೂ ಅನುಷ್ಠಾನಕ್ಕೆ ಬರುತ್ತಿಲ್ಲ.

ಕೆಲಸ ಮಾಡಿದರೆ ವೇತನ. ಇಲ್ಲವಾದರೆ ಇಲ್ಲ ಎಂದೇ ಅಧಿಕಾರಿಗಳ ಕೈ ಚೆಲ್ಲುತ್ತಾರೆ. ಇದರಿಂದ ರೋಸಿ ಹೋಗಿರುವ ದಿನಗೂಲಿಗಳು ಸರಿಯಾದ ವೇತನ, ಬೋನಸ್, ತುಟ್ಟಿಭತ್ಯೆ, ದಿನಗೂಲಿ ವ್ಯತ್ಯಾಸದ ಹಣ ನೀಡುವಂತೆ ಒತ್ತಾಯಿಸಿ ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅವರಿತ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇತಿಹಾಸವನ್ನು ಕಟ್ಟುತ್ತಿರುವ ಇವರನ್ನು ಉಪಯೋಗಿಸಿಕೊಂಡು ಇತಿಹಾಸದ ವೈಭವವನ್ನು ಮೆರೆಸುತ್ತಿರುವವರು, ಗತ ಇತಿಹಾಸದ ಬಗ್ಗೆ, ಸಂಸ್ಕøತಿ, ಪರಂಪರೆ ಬಗ್ಗೆ ಮಾತನಾಡುವ ಜನರೂ ಇತಿಹಾಸವನ್ನು ಕಟ್ಟುತ್ತಿರುವ, ಸಂರಕ್ಷಿಸುತ್ತಿರುವ ವರ್ತಮಾನದ ಈ ಜನರನ್ನು ಸ್ವಲ್ಪ ಕಣ್ಣು ತೆಗೆದು ನೋಡಬೇಕಿದೆ.

ಗತ ಇತಿಹಾಸಕ್ಕೆ ಸೇರಿದ ಪ್ರಾಚೀನ ಸ್ಮಾರಕಗಳ ಉತ್ಖನನ ಹಾಗೂ ಸಂರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ದಿನಗೂಲಿಗಳಾಗಿ ಕಳೆದ 30ವರ್ಷಗಳಿಂದಲೂ ಜೀವ ತೇಯುತ್ತಿರುವ ನೂರಾರು ಜನರಿಗೆ ವರ್ತಮಾನ ಕಠೋರವಾಗಿದೆ. ಭವಿಷ್ಯ ಶೂನ್ಯವಾಗಿದೆ. ಇತಿಹಾಸದ ಪಳಿಯುಳಿಕೆಗಳಾಗಿ ಅವರೇ ಒಂದು ಜೀವಂತ ಸ್ಮಾರಕವಾಗಿ ಬಿಟ್ಟಿದ್ದಾರೆ.

English summary
Hampi is an ancient city that is both a religious as well as historical site.Karnataka history and culture will be unfolded at three days Hampi utsav (festival) in Hampi, Bellary district. But, History of Vijayanagar Kingdom and Hampi are different says article by Parushuram Kulal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X