ಹಂಪಿಯಲ್ಲಿ ಮನಬಂದಂತೆ ನೃತ್ಯ: ರೀಲ್ಸ್ ಸ್ಟಾರ್ ದೀಪಕ್ ಗೌಡಗಾಗಿ ಪೊಲೀಸರ ಹುಡುಕಾಟ
ಕಂಡ ಕಂಡ ದೇವಾಲಯಗಳ ಬಳಿ ಮನಸ್ಸು ಬಿಚ್ಚಿ ನೃತ್ಯ ಮಾಡುವ ದೀಪಕ್ ಗೌಡ ಈಗ ತಮ್ಮ ಡಾನ್ಸ್‌ನಿಂದಲೇ ಪೇಚೆಗೆ ಸಿಲುಕಿಕೊಂಡಿದ್ದಾನೆ. ದೇವಸ್ಥಾನದ ನಿಯಮಗಳನ್ನು ಉಲ್ಲಂಘಿಸಿದ ರೀಲ್ಸ್ ಸ್ಟಾರ್ ದೀಪಕ್ ಗೌಡಗಾಗಿ ಹಂಪಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಿಜಯನಗರ, ಫೆಬ್ರವರಿ 27: ಇನ್ಸ್ಟಾಗ್ರಾಮ್, ಟಿಕ್‌ಟಾಕ್ ಬ್ಯಾನ್ ಆದ ಬಳಿಕ ಸದ್ಯ ಬಹುತೇಕರು ಮನೋರಂಜನೆಗಾಗಿ ಬಳಸುತ್ತಿರುವ ಜನಪ್ರಿಯ ಆ್ಯಪ್. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಟಿಕ್‌ಟಾಕ್ ಮಾದರಿಯ ವಿಡಿಯೋಗಳನ್ನು ರಚಿಸಲು ಅನುವು ಮಾಡಿಕೊಟ್ಟಿದ್ದು, ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಕಾಲ ಕಳೆಯದವರೇ ಇಲ್ಲ ಎನ್ನುವ ಮಟ್ಟಿಗೆ ರೀಲ್ಸ್ ಜನಪ್ರಿಯತೆ ಪಡೆದಿದೆ.
ಈ ರೀಲ್ಸ್‌ಗಳಲ್ಲಿ ಹಲವರು ತಮ್ಮ ಪ್ರತಿಭೆಗಳನ್ನು ತೋರಿಸಿದರೆ, ಇನ್ನೂ ಬಹುತೇಕ ಮಂದಿ ಟ್ರೋಲ್ ಮಾಡುವ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದಾರೆ. ಇನ್ನು ಫುಡ್ ವ್ಲೋಗ್, ಟ್ರಾವೆಲ್ ವ್ಲೋಗ್ ಹೀಗೆ ಅನೇಕ ತರದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್‌ನ್ನು ಬಳಸಲಾಗುತ್ತಿದ್ದೆ.

ಇನ್ನು ಕೆಲವರು ತಮ್ಮ ಯೂಟ್ಯೂಬ್ ಚಾನೆಲ್‌ಗಳನ್ನು ಪ್ರಮೋಟ್ ಮಾಡಲು ಸಹ ಇನ್ಸ್ಟಾಗ್ರಾಮ್ ರೀಲ್ಸ್ ಬಳಸುತ್ತಿದ್ದಾರೆ. ಹೀಗಾಗಿ ಇತ್ತಿಚಿಗೆ ರೀಲ್ಸ್ ಜನರಿಗೆ ಮನೋರಂಜನೆ ನೀಡುವುದರ ಜೊತೆಗೆ ಹಣ ಗಳಿಸಲು ಸಹ ಸಹಕಾರಿಯುತ್ತಿದೆ.
ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಅನೇಕ ರೀತಿಯಲ್ಲಿ ತಮ್ಮ ಪ್ರತಿಭೆಗಳನ್ನು ಕಾಣಬಹುದು. ಯಾವುದೋ ಎಲೆ ಮರೆಯ ಕಾಯಿಗೆ ಈ ರೀಲ್ಸ್ ಉತ್ತಮ ಅವಕಾಶ ಸಿಗುವಂತೆ ಮಾಡಿದರೆ, ಇನ್ನೂ ಕೆಲವರು ರೀಲ್ಸ್‌ನಲ್ಲಿ ಏಕಾಏಕಿ ಫೇಮಸ್ ಆಗಿ ಮತ್ತೆ ಕಣ್ಮರೆಯಾಗುತ್ತಿದ್ದಾರೆ. ಉದಾಹರಣೆಗೆ ಕಾಫಿನಾಡು ಚಂದು. ತನ್ನ ವಿಶಿಷ್ಟ ಶೈಲಿಯಲ್ಲಿ ಹಾಡು ಹೇಳುವ ಮೂಲಕ ದಿನಬೆಳಗಾಗುವುದರೊಳಗೆ ಫೇಮಸ್ ಆಗಿದ್ದ ಕಾಫಿನಾಡು ಚಂದು, ಸದ್ಯ ರೀಲ್ಸ್‌ನಲ್ಲಿ ಅಷ್ಟಾಗಿ ಕಾಣ ಸಿಗುತ್ತಿಲ್ಲ.
ಇದೇ ರೀತಿ ತನ್ನ ವಿಶಿಷ್ಟ ಪ್ರತಿಭೆಯೊಂದಿಗೆ ರೀಲ್ಸ್‌ಗೆ ಮಾಡಲು ಆರಂಭಿಸಿದ್ದ ದೀಪಕ್ ಗೌಡ ಕೂಡ ಏಕಾಏಕಿ ಫೇಮಸ್ ಆಗಿದ್ದು, ಇದೀಗ ರೀಲ್ಸ್‌ನಲ್ಲಿ ಮಾಡಿದ ಅಚಾತುರ್ಯದಿಂದ ಪೊಲೀಸರು ಈತನಿಗಾಗಿ ಹುಡಕಾಟ ಆರಂಭಿಸಿದ್ದಾರೆ. ಸಮಾನ್ಯವಾಗಿ ರೀಲ್ಸ್ ನೋಡುವವರಿಗೆ ದೀಪಕ್ ಗೌಡ ಚಿರಪರಿತ.
"ಹಾಯ್ ಫ್ರೆಂಡ್ಸ್ ನಾನು ನಿಮ್ಮ ಸಕ್ಕರೆ ನಾಡು ದೀಪಕ್ ಗೌಡ" ಅಂತಾ ವಿಡಿಯೋ ಆರಂಭಿಸುವ ಈತ, ನಾನ್ ಸ್ಟಾಪ್ ಆಗಿ ಮಾತನಾಡುತ್ತಾನೆ. ಜೊತೆಗೆ ಒಂದಿಷ್ಟು ಜೋಕ್ ಹೇಳುವುದಲ್ಲದೇ, ಡಾನ್ಸ್ ಕೂಡ ಮಾಡುತ್ತಾನೆ. ಹೀಗಾಗಿ ಈತ ಟ್ರೋಲಿಗರಿಗೂ ಕೂಡ ಆಹಾರವಾಗಿದ್ದ.
ಈತನ ಬಹುತೇಕ ವಿಡಿಯೋಗಳು ಟ್ರೋಲ್ ಆಗಿಯೇ ಮತ್ತಷ್ಟು ಫೇಮಸ್ ಆಗಿವೆ. ಕಂಡ ಕಂಡ ದೇವಾಲಯಗಳ ಬಳಿ ಮನಸ್ಸು ಬಿಚ್ಚಿ ನೃತ್ಯ ಮಾಡುವ ದೀಪಕ್ ಗೌಡ ಈಗ ತಮ್ಮ ಡಾನ್ಸ್‌ನಿಂದಲೇ ಪೇಚೆಗೆ ಸಿಲುಕಿಕೊಂಡಿದ್ದಾನೆ.
ಇತ್ತೀಚಿಗೆ ದೀಪಕ್ ಗೌಡ ಹಂಪಿಯ ದೇವಾಲಯದಲ್ಲಿ ಕೇಳಿಸದೇ ಕಲ್ಲು, ಕಲ್ಲಿನಲಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ಈ ವಿಡಿಯೋದಿಂದಲೇ ದೀಪಕ್ ಗೌಡಗೆ ಸಂಕಷ್ಟ ಎದುರಾಗಿದೆ.
ಈ ವಿಡಿಯೋದಲ್ಲಿ ದೀಪಕ್ ಗೌಡ ದೇವಾಲಯದ ಮೇಲೆ ಹತ್ತಿ ಕೂಡ ನೃತ್ಯ ಮಾಡಿದ್ದು, ಇದು ದೇವಸ್ಥಾನದ ಹಾಗೂ ಪ್ರವಾಸಿ ತಾಣದ ನಿಯಮಗಳಿಗೆ ವಿರುದ್ಧವಾಗಿದೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಿಡಿಯೋದಲ್ಲಿರುವ ದೀಪಕ್ ಗೌಡಗಾಗಿ ಹಂಪಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ. ಇನ್ನು ಇಂತಹ ಪ್ರವಾಸಿ ತಾಣಗಳಲ್ಲಿ ಯುವಕರ ಹುಚ್ಚು ಸಾಹಸ ಹೆಚ್ಚಾಗುತ್ತಿದ್ದು, ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಹಂಪಿ ಪೊಲೀಸರು ರೀಲ್ಸ್ ವಿಡಿಯೋದಲ್ಲಿರುವ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದು. ವಿಚಾರಣೆ ಮುಂದುವರಿದಿದೆ.












Click it and Unblock the Notifications