ಬಳ್ಳಾರಿ; ಮಗುವಿಗೆ ಜಿಲ್ಲಾಧಿಕಾರಿ ನಕುಲ್ ಹೆಸರಿಟ್ಟ ದಂಪತಿ
ಬಳ್ಳಾರಿ, ಸೆಪ್ಟೆಂಬರ್ 26: ಹುಟ್ಟಿದ ಮಗುವಿಗೆ ಭಿನ್ನವಾಗಿ ಹೆಸರಿಡಬೇಕಂತಲೋ, ತಮ್ಮ ಪ್ರೀತಿ ಪಾತ್ರರ ಅಥವಾ ಹಿರಿಯರ ಹೆಸರನ್ನು ಇಡಬೇಕೆಂತಲೋ ಬಯಸುವುದನ್ನು ನೋಡಿರುತ್ತೇವೆ. ಆದರೆ ಈ ದಂಪತಿ ತಮ್ಮ ಮಗುವಿಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಹೆಸರನ್ನು ಇಟ್ಟಿದ್ದಾರೆ.
ದಾವಣಗೆರೆಯಲ್ಲಿ ನೆಲೆಸಿರುವ ಈ ದಂಪತಿ ತಮ್ಮ ಮಗುವಿಗೆ ಡಿಸಿ ಎಸ್.ಎಸ್.ನಕುಲ್ ಹೆಸರಿಟ್ಟಿದ್ದಾರೆ. ದೀಪಕ್ ಎಂಬುವವರ ಪತ್ನಿಯ ತವರು ಮನೆ ಬಳ್ಳಾರಿಯಾಗಿದ್ದು, 2 ತಿಂಗಳ ಹಿಂದೆ ಹೆರಿಗೆಗೆ ಬಳ್ಳಾರಿಗೆ ಬಂದಿದ್ದರು. ಈ ವೇಳೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಆಗ ಹೆರಿಗೆಯನ್ನು ಯಶಸ್ವಿಯಾಗಿ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿಯೇ ಮಾಡಿಸಲಾಗಿತ್ತು. ತಾಯಿಗೆ ಸೋಂಕಿದ್ದರೂ ಅದೃಷ್ಟವಶಾತ್ ಮಗುವಿಗೆ ಸೋಂಕು ತಗುಲಿರಲಿಲ್ಲ.
ಅಂದು ಹೆರಿಗೆಯಾದ ಬಳಿಕ ಜಿಲ್ಲಾಸ್ಪತ್ರೆಗೆ ಡಿಸಿ ಎಸ್.ಎಸ್.ನಕುಲ್ ಭೇಟಿ ನೀಡಿ ಎಲ್ಲಾ ತಾಯಂದಿರನ್ನು ವಿಚಾರಿಸಿಕೊಂಡಿದ್ದಾರೆ. ಚಿಕಿತ್ಸೆಯ ಕುರಿತು, ತಾಯಂದಿರ ಆರೋಗ್ಯದ ಕುರಿತು ಮಾತನಾಡಿಸಿದ್ದಾರೆ. ಜಿಲ್ಲಾಧಿಕಾರಿಯವರ ಈ ಕಾಳಜಿಗೆ ಮನಸೋತ ಈ ದಂಪತಿ ಇದೀಗ ತಮ್ಮ ಗಂಡು ಮಗುವಿಗೆ ನಕುಲ್ ಎಂದೇ ನಾಮಕರಣ ಮಾಡಿದ್ದಾರೆ.

ಈ ವಿಷಯವನ್ನು ಜಿಲ್ಲಾಧಿಕಾರಿ ನಕುಲ್ ಅವರ ಗಮನಕ್ಕೆ ತಂದಾಗ, ಅವರು ಆಶ್ಚರ್ಯಪಟ್ಟರು, ಜೊತೆಗೆ ಅತೀವ ಸಂತೋಷವನ್ನೂ ವ್ಯಕ್ತಪಡಿಸಿದರು. "ಇದೊಂದು ಅವಿಸ್ಮರಣೀಯ ಘಟನೆ. ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿಗೆ ಮತ್ತು ಮಗುವಿಗೆ ಶುಭವಾಗಲಿ" ಎಂದು ಹಾರೈಸಿದರು.












Click it and Unblock the Notifications