ಬಳ್ಳಾರಿ: ಗಂಡುಮಗು ಹುಟ್ಟಿದ್ದಕ್ಕೆ ಪಾರ್ಟಿ ಕೊಟ್ಟ ಪಿಎಸ್ಐ, ಸೋಂಕು ಹಚ್ಚಿಕೊಂಡ ಸಿಪಿಐ
ಬಳ್ಳಾರಿ, ಜುಲೈ 3: ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣ ಪೊಲೀಸ್ ಠಾಣೆಯ 51 ವರ್ಷದ ಸಿಪಿಐ ಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದ್ದು, ಸೋಂಕಿತ ಸಿಪಿಐ ಅವರನ್ನು ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಳೆದ ಒಂದು ವಾರದ ಹಿಂದೆ ಕಂಪ್ಲಿ ಪೊಲೀಸ್ ಠಾಣೆ ಪಿಎಸ್ಐ ಅವರಿಗೆ ಗಂಡುಮಗು ಜನಸಿದ ಕಾರಣ ನಗರದ ಹೊರ ವಲಯದ ಸಮುದಾಯ ಭವನದಲ್ಲಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ಆದ ಕಾರಣ ಅದೇ ಪಾರ್ಟಿಯಲ್ಲಿ ಭಾಗಿಯಾದ ಕಂಪ್ಲಿ ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು.
ಇದರಿಂದಾಗಿ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಿದ್ದರು. ಅಲ್ಲದೇ ಅದೇ ಪಾರ್ಟಿಯಲ್ಲಿ ಕಂಪ್ಲಿ ಸಿಪಿಐ ಸಹ ಭಾಗಿಯಾಗಿದ್ದರು. ಹೀಗಾಗಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಹೋಮ್ ಗಾರ್ಡ್ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು.

ಆದರೆ ಪೊಲೀಸ್ ಸಿಬ್ಬಂದಿಯ ರ್ಯಾಂಡಮ್ ಟೆಸ್ಟ್ ಮಾಡಿದ್ದು, ನಿನ್ನೆ ೫೨ ಜನರಲ್ಲಿ ಕಂಡುಬಂದ ಪ್ರಕರಣಗಳಲ್ಲಿ ಸಿಪಿಐ ಅವರಿಗೂ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಉಳಿದ ಸಿಬ್ಬಂದಿಯಲ್ಲಿ ಸಹ ಕೊರೊನಾ ವೈರಸ್ ಭಯ ಉಂಟು ಮಾಡಿದೆ.
ಇನ್ನು ಕಂಪ್ಲಿ ಪೊಲೀಸ್ ಠಾಣೆ ಸಿಪಿಐ ವಾಹನದ ಚಾಲಕ ಸೇರಿ ಕಂಪ್ಲಿ ಹಾಗೂ ಕಮಲಾಪುರ ಠಾಣೆಯ ಮೂರು ಪಿಎಸ್ಐ ಗಳು ಹಾಗೂ ಪೊಲೀಸ್ ಪೇದೆಗಳು ಸಂಪರ್ಕದಲ್ಲಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಪಟ್ಟಣದ ಠಾಣೆಯ ಎಲ್ಲಾ ಸಿಬ್ಬಂದಿಗಳನ್ನು ಕ್ವಾರಂಟೈನಲ್ಲಿ ಇಡಲಾಗಿದೆ.
ಅಲ್ಲದೇ ಪೊಲೀಸ್ ಪೇದೆಯೊಂದಿಗೆ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಕಂಪ್ಲಿ ಪೊಲೀಸ್ ಠಾಣೆಯ ಸಿಪಿಐ ಅವರ ಮನೆಗೆ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ.












Click it and Unblock the Notifications