ಜನಾರ್ದನ್ ರೆಡ್ಡಿ ಹೊಸ ಪಕ್ಷ ಕಟ್ಟಬಾರದಿತ್ತು: ಸಹೋದರ ಸೋಮಶೇಖರ ರೆಡ್ಡಿ
ಬಳ್ಳಾರಿ, ಜನವರಿ, 15: ಬಳ್ಳಾರಿ ನಗರದಲ್ಲಿ ಜನಾರ್ದನ್ ರೆಡ್ಡಿ ಸ್ಪರ್ಧೆ ಮಾಡಿದರೂ ನಾನು ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ, ಹಿಂದೆ ಸರಿಯುವುದು ನನ್ನ ಚರಿತ್ರೆಯಲ್ಲಿಯೇ ಇಲ್ಲ ಎಂದು ಹೊಸ ಪಕ್ಷವನ್ನು ಕಟ್ಟಿರುವ ಜನಾರ್ಧನ್ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಬಳ್ಳಾರಿಯಲ್ಲಿ ತಿರುಗಿಬಿದ್ದಿದ್ದಾರೆ. ಹಾಗೆಯೇ ಜನಾರ್ಧನ್ ರೆಡ್ಡಿಯವರು ಬೇರೆ ಪಕ್ಷ ಸ್ಥಾಪಿಸಿ ತಪ್ಪು ಮಾಡಿದರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ್ ರೆಡ್ಡಿ ಪಕ್ಷ ಸ್ಥಾಪನೆ ವೇಳೆ ನನಗೂ ಕೇಳಿದರು. ಬೇರೆ ಪಕ್ಷ ಕಟ್ಟುವುದು ಬೇಡವೆಂದರೂ ಕೇಳಲಿಲ್ಲ. ಮಾತು ಕೇಳದೇ ಅವರು ಪಕ್ಷ ಸ್ಥಾಪನೆ ಮಾಡಿದ್ದಾರೆ. ರಾಜಕೀಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು. ಜನಾರ್ಧನ್ ರೆಡ್ಡಿ ಹೊಸ ಪಕ್ಷ ಕಟ್ಟಿ 100% ತಪ್ಪು ಮಾಡಿದ್ದಾರೆ. ರೆಡ್ಡಿ ಪಕ್ಷ ಸ್ಥಾಪನೆ ವಿಚಾರದಲ್ಲಿ ಮುನ್ನೆಡೆ, ಹಿನ್ನಡೆಯನ್ನು ಜನರು ನಿರ್ಧಾರ ಮಾಡುತ್ತಾರೆ ಎಂದರು.
ಜನಾರ್ದನ್ ರೆಡ್ಡಿ ಮನವೊಲಿಸಲು ಪ್ರಯತ್ನ
ಜನಾರ್ದನ್ ರೆಡ್ಡಿ ಮನವೊಲಿಸಲು ಈಗಲೂ ಶ್ರೀರಾಮುಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಚುನಾವಣೆಗೂ ಮುನ್ನ ಅವರನ್ನು ಬಿಜೆಪಿಗೆ ಕರೆತರಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಎನೂ ನಿರ್ಣಯ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

2013ರಲ್ಲಿ ಜನಾರ್ಧನ್ ರೆಡ್ಡಿ ಸಲುವಾಗಿ ನಾನು ತ್ಯಾಗ ಮಾಡಿದ ಸ್ಪರ್ಧೆ ಮಾಡಿಲ್ಲ. ಸಹೋದರ ಜೈಲಿನಲ್ಲಿದ್ದ ಕಾರಣ ನಾನು ನ್ಯಾಯಲಯಗಳಿಗೆ ಓಡಾಡಬೇಕೆಂದು ಸ್ಪರ್ಧಿಸಿರಲಿಲ್ಲ. ಇದೀಗ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತವಾಗಿದೆ. ಜನಾರ್ಧನ್ ರೆಡ್ಡಿ ಬಳ್ಳಾರಿಯಲ್ಲಿ ಬಂದು ನಿಂತರೂ, ನಾನು ಅಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ರೆಡ್ಡಿ ಮತ್ತೆ ಬಳ್ಳಾರಿಗೆ ಬರಬೇಕು
ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಯೋಜನೆಗಳು ಪೂರ್ಣಗೊಳ್ಳಬೇಕಾದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜಿ. ಜನಾರ್ದನ್ ರೆಡ್ಡಿ ಅವರು ಮತ್ತೆ ಬಳ್ಳಾರಿಗೆ ಬರಬೇಕೆಂದು ಜನಾರ್ದನ್ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರಾಜೀವ್ ರೆಡ್ಡಿ ಇತ್ತೀಚೆಗಷ್ಟೇ ಹೇಳಿದ್ದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ್ ರೆಡ್ಡಿಯವರ 56ನೇ ಜನ್ಮದಿನದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡ ಬೈಕ್ ರ್‍ಯಾಲಿ ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ನಗರದ ಪ್ರಮುಖ ಪ್ರದೇಶಗಳಲ್ಲಿ ವೃತ್ತಗಳು ಮತ್ತು ರಸ್ತೆಗಳು ಅಭಿವೃದ್ಧಿಯಾಗಲು ಜನಾರ್ದನ ರೆಡ್ಡಿ ಅವರೇ ಕಾರಣ. ವಾಲ್ಮೀಕಿ ವೃತ್ತ, ಎಸ್‍ಎನ್ ಪೇಟೆ ಮೇಲ್ಸೇತುವೆ, ರೇಡಿಯೋ ಪಾರ್ಕ್ ಮೇಲ್ಸೇತುವೆ ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ಹೇಳಿದ್ದರು.












Click it and Unblock the Notifications