ಬಿಎಸ್ ವೈ ಕಾಲು ಮುಗಿದಾದರೂ ಸೋಮಶೇಖರ್ ರೆಡ್ಡಿ ಮನೆ ಕಟ್ಟಿಸ್ತಾರಂತೆ
ಬಳ್ಳಾರಿ, ಮಾರ್ಚ್ 05 : ಕಾಂಗ್ರೆಸ್ ನ ಅನಿಲ್ ಲಾಡ್ ಈಗ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ಜನರಿಗೆ ಉಡಿ, ಊಟ ಮಾಡಿಸಿದರೆ ಆಯಿತಾ? ಇವೆಲ್ಲ ಚುನಾವಣೆ ಗಿಮಿಕ್ ಎಂದು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಆರೋಪ ಮಾಡಿದ್ದಾರೆ.
ಬಿಜೆಪಿ ಹಮ್ಮಿಕೊಂಡಿದ್ದ 'ಮನೆಮನೆಗೆ' ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಉಡಿ ತುಂಬುವ ನೆಪದಲ್ಲಿ ಶಾಸಕ ಅನಿಲ್ ಲಾಡ್ ಊಟ ಮಾಡಿಸಿದ್ದು ಕೂಡ ಅದನ್ನೇ ಸೂಚಿಸುತ್ತದೆ. ಜನರು ಬಿಜೆಪಿಗೆ ಬೆಂಬಲ ಕೊಡುತ್ತಾ ಇದ್ದಾರೆ. ಬಿಜೆಪಿ ಈ ಬಾರಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಂದ ಓಣಿ, ಕುಂಬಾರ ಓಣಿ, ಗೋಲ್ಡ್ ಸ್ಮಿಥ್ ಸ್ಟ್ರೀಟ್, ಸಣ್ಣ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ಮಾಡಿದ್ದ ರೆಡ್ಡಿಗೆ ಜನರು ಸಲ್ಲಿಸಿದ್ದು ಕೇವಲ ಸಮಸ್ಯೆಗಳ ಅಹವಾಲುಗಳು ಮಾತ್ರ. 20-25 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕರೆಂಟು ಇಲ್ಲ. ಬೀದಿ ದೀಪಗಳಿಲ್ಲ. ರಸ್ತೆಗಳು ಹಾಳಾಗಿವೆ. ಇಲ್ಲಿ ಅನೇಕರಿಗೆ ಇಂದಿಗೂ ಮನೆಗಳೇ ಇಲ್ಲ. ಬಾಡಿಗೆ ಮನೆಯಲ್ಲಿ ಜನರು ವಾಸಿಸುತ್ತಿದ್ದಾರೆ ಇಂಥವೇ ಸಮಸ್ಯೆಗಳು.

ಕಳೆದ ಬಾರಿ ನಮ್ಮ ಸರಕಾರ ಇದ್ದಾಗ 300 ಎಕರೆ ಭೂಮಿ ಖರೀದಿಸಿ, ಮನೆ ಕಟ್ಟಿಸಿಕೊಡಲು ನಿರ್ಧರಿಸಿದ್ದೆವು. ಶಾಸಕ ಅನಿಲ್ ಲಾಡ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಬಡವರಿಗೆ ಇಂದಿಗೂ ಮನೆಗಳನ್ನು ಕಟ್ಟಿಸಿಕೊಡಲಾಗಲಿಲ್ಲ. ನಮ್ಮ ಸರಕಾರ ಬಂದರೆ ಬಿಎಸ್ ವೈ ಅವರ ಕಾಲು ಮುಗಿದಾದರೂ ಜನರಿಗೆ ಮನೆ ಕಟ್ಟಿಸಿ, ಅವರಿಗೆ ಉಚಿತವಾಗಿ ಕೀಲಿ ಕೈ ಕೊಡುತ್ತೇವೆ ಎಂದರು ಸೋಮಶೇಖರ್ ರೆಡ್ಡಿ.

ಬಿಜೆಪಿ ಸರಕಾರದಲ್ಲಿ ರೂಪುಗೊಂಡಿದ್ದ ಯೋಜನೆಗಳು ಮತ್ತು ಅನುದಾನ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ನವರಿಂದ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಎಸ್.ಮಲ್ಲನಗೌಡ, ಮಾಜಿ ಸದಸ್ಯ ಸಿದ್ದನಗೌಡ, ಬಿಜೆಪಿ ಮುಖಂಡರಾದ ವೀರಶೇಖರರೆಡ್ಡಿ, ಕೃಷ್ಣಾ ರೆಡ್ಡಿ, ಪ್ರಸಾದ್ ರೆಡ್ಡಿ ಕೊಳಗಲ್, ವಸಂತ್ ಬೆಲ್ಲಂ, ಪದ್ಮಾವತಿ ರೆಡ್ಡಿ, ಸುಮಾ ರೆಡ್ಡಿ, ಶೈಲಜಾ ಇದ್ದರು.












Click it and Unblock the Notifications