ಗಣಿಜಿಲ್ಲೆಯಲ್ಲಿ ಒಂದೇ ದಿನ 7 ಕೇಸ್; ಒಂದೇ ಕುಟುಂಬದ 10 ಜನರಿಗೆ ಸೋಂಕು
ಬಳ್ಳಾರಿ, ಏಪ್ರಿಲ್ 17: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಏಳು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 13ಕ್ಕೆ ತಲುಪಿದೆ.
ಜಿಲ್ಲೆಯ ಹೊಸಪೇಟೆ ನಗರದಲ್ಲಿ ಈ ಹಿಂದೆ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಏಳು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಹೊಸಪೇಟೆ ನಗರದಲ್ಲಿಯೇ ಒಟ್ಟಾರೆ 11 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. ಹೊಸಪೇಟೆ ಎಸ್.ಆರ್.ನಗರದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅದೇ ಕುಟುಂಬದ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 25 ಮಂದಿಯನ್ನೂ ಸೇರಿದಂತೆ ಅಂದಾಜು 125 ಮಂದಿಯನ್ನು ಕಳೆದ ಹದಿನಾಲ್ಕು ದಿನಗಳ ಕಾಲ ಜಿಲ್ಲಾಡಳಿತ ಹೊಸಪೇಟೆ ಹೊಟೇಲ್ ವೊಂದರಲ್ಲಿ ಕ್ವಾರೈಂಟೀನ್ ಮಾಡಿತ್ತು. ಹನ್ನೆರಡನೇ ದಿನ ಪರೀಕ್ಷಿಸಿದಾಗ ಏಳು ಮಂದಿಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಅಲ್ಲದೇ, ಹೊಸಪೇಟೆ ಎಸ್.ಆರ್.ನಗರದ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೋಗಿಗಳನ್ನು ಜಿಲ್ಲಾಸ್ಪತ್ರೆಯ ಕೋವಿಡ್ - 19 ಐಸೊಲೇಷನ್ ವಾರ್ಡಿನಲ್ಲಿ ಇರಿಸಲಾಗಿದ್ದು, ಅವರೊಂದಿಗೆ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವ ಏಳು ಮಂದಿಯಲ್ಲಿ ಈಗ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಹತ್ತು ಜನರಲ್ಲಿ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಇವರೆಲ್ಲರಿಗೂ ಪರೀಕ್ಷೆ ವೇಳೆ ನೆಗೆಟಿವ್ ಬಂದಿದ್ದು, ಇದೀಗ ಪಾಸಿಟಿವ್ ಆಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.












Click it and Unblock the Notifications