ಬಾದಾಮಿ ಬಿ ಫಾರ್ಮ್ ಹೈಡ್ರಾಮಾ, ದೇವರಾಜ್ ನಾಯಕ್ ಬೆಂಬಲಿಗರ ಸಿಟ್ಟು
ಬಾದಾಮಿ (ಬಾಗಲಕೋಟೆ), ಏಪ್ರಿಲ್ 18 : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಕೂತಹಲ ಕೆರಳಿಸಿರುವಂಥ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಕುರುಬ ಸಮಾಜದ ಡಾ.ದೇವರಾಜ್ ಪಾಟೀಲರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ ಇದುವರೆಗೆ ಅವರಿಗೆ ಬಿ ಫಾರ್ಮ್ ದೊರೆತಿಲ್ಲ.
ಕೊನೆ ಕ್ಷಣದಲ್ಲಿ ಎಲ್ಲಿ ಮತ್ತೊಮ್ಮೆ ಟಿಕೆಟ್ ಕೈ ಬಿಟ್ಟು ಹೋಗುತ್ತದೆ ಎಂಬ ಆತಂಕ ದೇವರಾಜ್ ಪಾಟೀಲ ಮತ್ತು ಬೆಂಬಲಿಗರನ್ನು ಕಾಡುತ್ತಿದೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ದುಂಬಾಲು ಬಿದ್ದು, ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬಿ.ಬಿ.ಚಿಮ್ಮನಕಟ್ಟಿ ಅವರು ಬಿ ಫಾರ್ಮ್ ಪಡೆದು, ಚುನಾವಣೆಯಲ್ಲಿ ಗೆದ್ದು ಬಂದಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಈ ಬಾರಿ ಬಾದಾಮಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಟಿಕೆಟ್ ಬಿಟ್ಟುಕೊಡುವುದಾಗಿ ಬಿ.ಬಿ.ಚಿಮ್ಮನಕಟ್ಟಿ ಒಪ್ಪಿಕೊಂಡಿದ್ದರು. ಈಗ ಮುಖ್ಯಮಂತ್ರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡುತ್ತೇನೆ ಬಾದಾಮಿಗೆ ಬರಲ್ಲ ಎಂದರು.

ಇತ್ತೀಚೆಗೆ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದಾಗ ದೇವರಾಜ್ ಪಾಟೀಲರಿಗೆ ಟಿಕೆಟ್ ಸಿಕ್ಕಿರುವುದಕ್ಕೆ ಚಿಮ್ಮನಕಟ್ಟಿ ಆಕ್ರೋಶ ಹೊರಹಾಕಿದ್ದರು. ಬಾದಾಮಿ ಕ್ಷೇತ್ರದಲ್ಲಿ ನನ್ನ ಬಿಟ್ಟರೆ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕು. ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೆ ಸುಮ್ಮನಿರಲ್ಲ. ಎಲ್ಲಿ ಟಿಕೆಟ್ ತರಬೇಕು ಎಂಬುದು ಗೊತ್ತಿದೆ ಎಂದು ಸವಾಲು ಹಾಕಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಡಾ.ದೇವರಾಜ ಪಾಟೀಲರಿಗೆ ಬಿ ಫಾರ್ಮ್ ತಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಪಾಟೀಲರ ಬೆಂಬಲಿಗರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಬಾದಾಮಿ ಪಟ್ಟಣದಲ್ಲಿ ಮಹಿಳೆಯರು ಸೇರಿದಂತೆ ಅಪಾರ ಬೆಂಬಲಿಗರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೇವರಾಜ ಪಾಟೀಲರಿಗೆ ಬಿ ಫಾರ್ಮ್ ಕೊಡಬೇಕು. ಯಾರೋ ನಾಲ್ಕಾರು ಜನರ ಒತ್ತಡಕ್ಕೆ ಮಣಿಯದೆ ದೇವರಾಜ ಪಾಟೀಲ ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಒತ್ತಾಯಿಸಿದರು. 2013 ರಲ್ಲೂ ಟಿಕೆಟ್ ಘೋಷಣೆ ಮಾಡಿ ಬಳಿಕ ಹಿಂಪಡೆಯಲಾಗಿತ್ತು. ಈಗ ಮತ್ತೆ ಅವರಿಗೆ ಅನ್ಯಾಯ ಮಾಡಬಾರದು ಎಂದು ಬೆಂಬಲಿಗರು ಆಗ್ರಹಿಸಿದರು.












Click it and Unblock the Notifications