ಬಾಲನ್ಯಾಯ ತಿದ್ದುಪಡಿ; ಮಕ್ಕಳ ಮಾಹಿತಿ, ಭಾವಚಿತ್ರ ಬಹಿರಂಗ, ಶಿಕ್ಷಾರ್ಹ ಅಪರಾಧ
ಬಾಗಲಕೋಟೆ, ಅಕ್ಟೋಬರ್, 17: ಮಕ್ಕಳ ಪಾಲನೆ ಮತ್ತು ರಕ್ಷಣೆ ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ, ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಲಾಗಿತ್ತು. ಈ ಬಗ್ಗೆ ತಿಳಿಸಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಇದೀಗ ಮತ್ತೆ ಬಾಲನ್ಯಾಯ ತಿದ್ದುಪಡಿ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಕುರಿತು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಪ್ರಾಪ್ತ ಬಾಲಕೀಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ವರದಿಯನ್ನು ಮಾಧ್ಯಮಗಳಲ್ಲಿ ಭಿತ್ತರಿಸಲಾಗಿತ್ತು. ವರದಿಗಳಲ್ಲಿ ಮಗುವಿನ ಭಾವಚಿತ್ರ ಹಾಗೂ ಹೆಸರು ಪ್ರಕಟಿಸಿರುವುದರ ಬಗ್ಗೆ ನಿರ್ದೇಶನಾಲಯ ಕಳವಳ ವ್ಯಕ್ತಪಡಿಸಿದ್ದಾರೆ.
ಈ ತಿದ್ದುಪಡಿ ಕಾಯ್ದೆಯ ಪ್ರಕಾರ ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧ ಆಗಿರುತ್ತದೆ. ಅಲ್ಲದೇ ತಿದ್ದುಪಡಿ ಕಾಯ್ದೆ ಕಲಂ 75ರಲ್ಲಿ ಮಕ್ಕಳ ಮಾಹಿತಿಯನ್ನು ಬಹಿರಂಗಪಡಿಸಿದಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012 ಕಲಂ 23(2)ರಲ್ಲಿಯೂ ಸಹ ಮಕ್ಕಳ ಗುರುತನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಲೈಂಗಿಕ ಅಪರಾಧ ಎಂಬ ಪದದ ಉಲ್ಲೇಖ
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012ರ ಪ್ರಕಾರ ಅತ್ಯಾಚಾರ ಎಂಬ ಶಬ್ದದ ಬಳಕೆ ಇರುವುದಿಲ್ಲ. ಅದರ ಬದಲಿಗೆ ಅಧಿನಿಯಮದಲ್ಲಿಯೇ ಲೈಂಗಿಕ ಅಪರಾಧ ಎಂಬ ಪದವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭಗಳಲ್ಲಿ ಕೆಟ್ಟ ಶಬ್ದಗಳನ್ನು ಬಳಸದಂತೆ ಹಾಗೂ ಮಕ್ಕಳ ಹೆಸರು, ಭಾವಚಿತ್ರವನ್ನು ಪ್ರಕಟಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಮಕ್ಕಳ ಗುರುತುಗಳನ್ನು ತಿಳಿಸುವ ಯಾವುದೇ ವಿವರಗಳನ್ನು ಪ್ರಕಟಿಸಬಾರದು ಎಂದು ವಿವಿರಿಸಿದ್ದರು.

ಉಲ್ಲಂಘನೆ ವಿರುದ್ಧ ಶಿಕ್ಷೆ ಅವದಿ ಎಷ್ಟು?
ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ-2015ರ ಪ್ರಕಾರ ಬಾಲಪರಾಧಿ ಶಬ್ದ ಬಳಕೆ ಇಲ್ಲ. ಬದಲಾಗಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು ಎಂದು ಬಳಸಬೇಕು. ರಿಮ್ಯಾಂಡ್ ಹೋಂ ಶಬ್ದ ಬಳಕೆಗೆ ಬದಲಾಗಿ ವೀಕ್ಷಣಾಲಯ ಎಂದು ಬಳಸಬೇಕು ಎಂದು ತಿಳಿಸಿದ್ದಾರೆ. ಕಾಯ್ದೆಯ 2015 ಕಲಂ 74ರ ಪ್ರಕಾರ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಹಾಗೂ ರಕ್ಷಣೆಯ ಅಗತ್ಯವಿರುವಂತಹ ಪ್ರಕರಣವನ್ನು ಎದುರಿಸುತ್ತಿರುವ ಮಗುವಿನ ವಿವರಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ 6 ತಿಂಗಳವರೆಗೆ ಶಿಕ್ಷೆ ಮತ್ತು 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಸೆಕ್ಷನ್ ಉಲ್ಲಂಘನೆ, ಯಾವೆಲ್ಲ ಶಿಕ್ಷೆ ಅನ್ವಯ?
ಯಾವುದೇ ದಿನಪತ್ರಿಕೆ, ನಿಯತಕಾಲಿಕೆಗಳು ಅಥವಾ ದೃಶ್ಯ ಮಾಧ್ಯಮದಲ್ಲಿ ಕಾನೂನು ಕಟ್ಟಳೆಯನ್ನು ಎದುರಿಸುತ್ತಿರುವ ಮಗುವಿನ ಯಾವುದೇ ಗುರುತು ಬಹಿರಂಗಪಡಿಸುವಂತಿಲ್ಲ. ಹಾಗೂ ಮಗುವಿನ ಭಾವಚಿತ್ರಗಳನ್ನು ಪ್ರಕಟಿಸುವಂತಿಲ್ಲ. ಈ ಸೆಕ್ಷನ್ ಅನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ 6 ತಿಂಗಳವರೆಗೆ ಶಿಕ್ಷೆ ಮತ್ತು 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಗುವಿನ ಹಿತಾಸಕ್ತಿ ಇರುವ ನಿಯಮಗಳು
ಮಗುವಿನ ಹಿತಾಸಕ್ತಿಗಾಗಿ ಮಾತ್ರ ವಿಶೇಷ ನ್ಯಾಯಾಲಯಗಳು ಕೆಲವೊಮ್ಮ ಇಂತಹ ವಿಚಾರಗಳನ್ನು ಬಹಿರಂಗಪಡಿಸಲು ಅನುಮತಿ ನೀಡುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಐಪಿಸಿ ಸೆಕ್ಷನ್ 228 (ಎ) ಅನುಸಾರ ಅತ್ಯಾಚಾರಕ್ಕೊಳಗಾದ ಮಹಿಳೆಯ ಗುರುತನ್ನು ಮುದ್ರಿಸುವ ಅಥವಾ ಪಕಟಿಸುವ ಯಾವುದೇ ವ್ಯಕ್ತಿಗೆ, ಮಾಧ್ಯಮ ಸಂಸ್ಥೆಗೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದ್ದಾರೆ. ಈ ಹಿನ್ನೆಲೆ ಮಕ್ಕಳ ಪಾಲನೆ ಮತ್ತು ರಕ್ಷಣೆ ತಿದ್ದುಪಡಿ ಕಾಯ್ದೆ 2021 ಅನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.












Click it and Unblock the Notifications