ಜಮಖಂಡಿ ಎಪಿಎಂಸಿಯಲ್ಲಿ ಅಕ್ರಮ ಕಟ್ಟಡಗಳದ್ದೇ ದರ್ಬಾರ್
ಬಾಗಲಕೋಟೆ, ಜು. 14: ಅದು ಆ ತಾಲ್ಲೂಕಿನ ರೈತರಿಗಾಗಿ ಮೀಸಲಿಟ್ಟ ಜಾಗ. ರೈತರ ವ್ಯಾಪಾರ- ವಹಿವಾಟು ನಡೆಯಬೇಕಿದ್ದ ಆ ಜಾಗ ಇದೀಗ ಭೂಗಳ್ಳರ ಪಾಲಾಗುತ್ತಿದೆ. ಪ್ರಭಾವಿಗಳು ಹೊಂಚು ಹಾಕಿ ರೈತರಿಗೆ ಸೇರಿದ್ದ ಜಾಗ ಲಪಟಾಯಿಸುತ್ತಿದ್ದಾರೆ. ಹೌದು ಆ ತಾಲ್ಲೂಕಿನ ಎಪಿಎಂಸಿ ಜಾಗದಲ್ಲಿ ಅಕ್ರಮ ಮನೆಗಳು ತಲೆ ಎತ್ತುತ್ತಿವೆ. ಆ ಬಗ್ಗೆ ಕಣ್ಣಿದ್ದು ಕುರುಡರಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ವರ್ತಿಸ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮಕ್ಕೆ ಕಡಿವಾಟಕ್ಕೆ ಸಾರ್ವಜನಿಕರ ಆಗ್ರಹ
ಅಚ್ಚುಕಟ್ಟಾಗಿ ವಾಸ್ತು ಪ್ರಕಾರ ಕಟ್ತಿರೋ ಮನೆಗಳು, ನಿಯಮ ಬಾಹಿರವಾಗಿ ನಡೆಸುತ್ತಿರೋ ಸೂಪರ್ ಮಾರ್ಕೆಟ್, ಕೋಚಿಂಗ್ ಸೆಂಟರ್ & ಅಬಕಾರಿ ಇಲಾಖೆ ಕಚೇರಿ ಈ ಕಟ್ಟಡಗಳು ರೈತರಿಗಾಗಿ ರೈತರಿಗೋಸ್ಕರ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಈ ಕಟ್ಟಡಗಳು ತಲೆ ಎತ್ತಿವೆ. ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 27 ಎಕರೆ ಜಾಗದಲ್ಲಿ ಕೆಲವೊಂದಿಷ್ಟು ಪ್ರಭಾವಿ ಜನ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಅರೋಪ. ಈ 27 ಎಕರೆ ಜಾಗದಲ್ಲಿ ಕಾನೂನು ಗಾಳಿಗೆ ತೂರಿ ಅಕ್ರಮ ಮನೆಗಳು, ಕೋಚಿಂಗ್ ಕ್ಲಾಸ್‌ಗಳು, ಸೂಪರ್ ಮಾರ್ಕೆಟ್, ಜಿಮ್‌ಗಳು ತೆರೆಯಲಾಗಿದೆ. ಅದರಲ್ಲೂ ಸರ್ಕಾರಿ ಸ್ವಾಮ್ಯದ ಅಬಕಾರಿ ಇಲಾಖೆಯ ಕಚೇರಿಯೂ ಎಪಿಎಂಸಿ ಜಾಗದಲ್ಲಿರೋದು ನಿಜಕ್ಕೂ ದುರಂತ. ಇನ್ನು ಇಲ್ಲಿ ಹಾಲಿ ಶಾಸಕ ಆನಂದ ನ್ಯಾಮಗೌಡ ಸೇರಿ ಹಲವು ಮಾಜಿ ಜನಪ್ರತಿನಿಧಿಗಳ ಮನೆಗಳು ಇಲ್ಲಿವೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಹಲವು ದಶಕಗಳಿಂದ ಇಲ್ಲಿ ಅಕ್ರಮ ನಡೆದುಕೊಂಡು ಬರ್ತಾಯಿದೆ. ಇದನ್ನು ನೋಡಿದಂತಹ ಸಾರ್ವಜನಿಕರು ಈ ಅಕ್ರಮಕ್ಕೆ ಫುಲ್ ಸ್ಟಾಪ್ ಇಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 10-15 ನೋಟಿಸ್
ಇನ್ನು ಜಮಖಂಡಿ ಎಪಿಎಂಸಿಯಲ್ಲಿನ ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ಕಳೆದ 13 ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 10-15 ನೋಟಿಸ್ ಗಳನ್ನು ನೀಡಿದೆ. ಆದರೆ ಎಪಿಎಂಸಿ ಅಧಿಕಾರಿಗಳು ಕೇವಲ ನೋಟಿಸ್ ನೀಡಿದ್ದೇ ಬಂತು, ಆದ್ರೆ ಇದರಿಂದ ಯಾವುದೇ ಪ್ರಯೋಜ ಆಗಿಲ್ಲ. ಇನ್ನು ಎಪಿಎಂಸಿಯಲ್ಲಿ ಕೃಷಿ ಚಟುವಟಿಕೆಗೆ ಜಾಗೆ ಪಡೆದ ರೈತರೇ ಅವುಗಳನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿವೆ. ಇನ್ನು ಈ ಬಗ್ಗೆ ಹಲವು ಪ್ರತಿಭಟನೆಗಳು ನಡೆದಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳಿಂದ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗ್ತಿಲ್ಲ. ಇನ್ನು ಈ ಅಕ್ರಮದ ಬಗ್ಗೆ ಎಪಿಎಂಸಿ ಅಧಿಕಾರಿಗಳನ್ನು ಕೇಳಿದ್ರೆ ಅವರ ಬಳಿ ಉತ್ತರವೇ ಇಲ್ಲ.

ಎಪಿಎಂಸಿ ಜಾಗ ರೈತರ ಬಳಕಗೆ ಸೀಮಿತವಾಗಲಿ
ಹೌದು, ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ಅವುಗಳಿಗೆ ನೋಟಿಸ್ ಕೊಟ್ಟಿದ್ದೀವಿ. ನಮ್ಮ ಬಳಿ ಜಾಗೆ ಖರೀದಿಸಿದ ಕೆಲವರು ಅವುಗಳನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಅಂತಾ ತಮ್ಮ ಅಸಹಾಯಕತೆ ತೋಡಿಕೊಳ್ತಾರೆ. ಆದ್ರೆ ಅಕ್ರಮ ಎಸಗಿದವ್ರ ವಿರುದ್ಧ ಕ್ರಮ ಕೈಗೊಳ್ಳುತ್ತಿರಾ ಅಂದರೆ ಅವರ ಬಳಿ ಸ್ಪಷ್ಟ ಉತ್ತರವೇ ಇಲ್ಲ. ಇನ್ನು ಬೇಡ ಚಿಕ್ಕ ಅಧಿಕಾರಿಗಳನ್ನು ಕೇಳಿದ್ರೆ ಪ್ರಯೋಜನ ಏನು ಇಲ್ಲ ಅಂತಾ ಜಿಲ್ಲಾಧಿಕಾರಿಗಳ ಬಳಿ ಈ ವಿಷಯ ತೆಗೆದುಕೊಂಡ ಹೋಗಲಾಯಿತು. ಈ ಬಗ್ಗೆ ಮಾಹಿತಿ ಪಡೆದ ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಯಾವ ರೀತಿ ಉಲ್ಲಂಘನೆ ಆಗಿದೆ ಎಂಬದರ ಕುರಿತು ಅಧಿಕಾರಿಗಳ ಜೊತೆಗೆ ಮೀಟಿಂಗ್ ಕರೆಯುತ್ತೇನೆ. ಕೂಲಂಕಷವಾಗಿ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸರ್ವೆ ಮಾಡಿಸಿ ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳುತ್ತೇವೆ ಅಂತಾ ಭರವಸೆ ನೀಡಿದರು.

ಒಟ್ಟಿನಲ್ಲಿ ಎಪಿಎಂಸಿ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳಿಗೆ ಕೇವಲ ನೋಟಿಸ್ ನೀಡುವುದೇ ಆಗಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಜಮಖಂಡಿ ಎಪಿಎಂಸಿಯಲ್ಲಿನ ಅಕ್ರಮ ಕಟ್ಟಡಗಳ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು, ಎಪಿಎಂಸಿ ಜಾಗಯನ್ನ ರೈತರ ಬಳಕಗೆ ಮೀಸಲಿಡಬೇಕಿದೆ.












Click it and Unblock the Notifications