Accident: ಶಾಲಾ ಬಸ್ ಅಪಘಾತ, ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು
ಬಾಗಲಕೋಟೆ, ಜನವರಿ 29: ಶಾಲಾ ಬಸ್ ಹಾಗೂ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದಿದೆ.
ಸಾಗರ ಕಡಕೋಳ (17), ಶ್ವೇತಾ (13), ಗೋವಿಂದ (13), ಬಸವರಾಜ (17) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಗಳು ಕವಟಗಿ ಗ್ರಾಮದ ಮೂಲದವರಾಗಿದ್ದು, ಅಲಗೂರು ಗ್ರಾಮದ ಬಳಿ ಇರುವ ಶ್ರೀ ವರ್ಧಮಾನ ಮಾಹವೀರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಶ್ರೀ ವರ್ಧಮಾನ ಮಾಹವೀರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ನಿನ್ನೆ(ಜನವರಿ 28) ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಮೃತ ವಿದ್ಯಾರ್ಥಿಗಳು ಸೇರಿದಂತೆ ಇತರ ವಿದ್ಯಾರ್ಥಿಗಳು ವಾರ್ಷಿಕೋತ್ಸವ ಸಂಭ್ರಮ ಮುಗಿಸಿ ಮನೆಯತ್ತ ಮುಖ ಮಾಡಿದ್ದರು. ವಿದ್ಯಾರ್ಥಿಗಳಿಗೆ ಶಾಲಾ ಬಸ್‌ನಲ್ಲೇ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯರಾತ್ರಿ 12 ಗಂಟೆಗೆ ವೇಳೆಗೆ ಅಲಗೂರು ಗ್ರಾಮದ ಬಳಿ ಶಾಲಾ ಬಸ್ ಹಾಗೂ ಹಾಗೂ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಘಟನೆ ಭೀಕರತೆಗೆ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟಕ್ಕೂ ಅಧಿಕ ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತ ವಿದ್ಯಾರ್ಥಿಗಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ: ಐವರಿಗೆ ಗಂಭೀರ ಗಾಯ
ಬೆಳಗಾವಿ: ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ನಗರದ ಬಸವನ ಗಲ್ಲಿಯಲ್ಲಿ ನಡೆದಿದೆ.
ಲಲಿತಾ ಭಟ್ (48), ಮೋಹನ್ ಭಟ್(56), ಕಮಲಾಕ್ಷಿ ಭಟ್(80), ಹೇಮಂತ್ ಭಟ್(27), ಗೋಪಿಕೃಷ್ಣ ಭಟ್(84) ಗಂಭೀರವಾಗಿ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications