ಬಾಗಲಕೋಟೆಯಲ್ಲಿ ಭೂ ಪರಿಹಾರ ನೀಡದೆ ಅಲೆಡಾಡಿಸಿದ ಹಿನ್ನೆಲೆ ಅಧಿಕಾರಿಗೆ ರೈತನಿಂದ ಚಪ್ಪಲಿ ಏಟು
ಬಾಗಲಕೋಟೆ, ಜೂನ್ 14: ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ಕೊಡದೇ ಸತಾಯಿಸುತ್ತಿದ್ದ ಸರ್ಕಾರಿ ಅಧಿಕಾರಿ ವಿರುದ್ಧ ಸಿಟ್ಟಿಗೆದ್ದ ರೈತರೊಬ್ಬರು ಚಪ್ಪಲಿಯಿಂದ ಏಟು ನೀಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
ಬಾಗಲಕೋಟೆಯ ದಾದೇನವರ್ ವೃತ್ತದ ಬಳಿ ಇದ್ದ ರೈತ ಬಸವರಾಜ ದೊಡ್ಡಮನಿ ಎಂಬುವವರ ಭೂಮಿಯನ್ನು ರಸ್ತೆ ಯೋಜನೆಗಾಗಿ 2004ರಲ್ಲೇ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಭೂಮಿ ಕಳೆದುಕೊಂಡು ಹಲವು ವರ್ಷಗಳೇ ಕಳೆದರೂ ಅಧಿಕಾರಿಗಳು ತಮಗೆ ಸೂಕ್ತ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತ ತೀವ್ರ ಅಸಮಾಧಾನಗೊಂಡಿದ್ದರು. ಪರಿಹಾರಕ್ಕಾಗಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ ಅವರು ಅಧಿಕಾರಿಗಳ ವರ್ತನೆಯಿಂದ ಆಕ್ರೋಶಗೊಂಡಿದ್ದರು.

ಅಧಿಕಾರಿಗೆ ಚಪ್ಪಲಿ ಏಟು
ಬಾಗಲಕೋಟೆಯ ಬಿಟಿಡಿಎ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಪ್ಲಾಟ್ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಕಚೇರಿಗೆ ಆಗಮಿಸಿದ ರೈತ ಬಸವರಾಜ ದೊಡ್ಡಮನಿ ಅವರು ಡಿಎಸ್‌ಎಸ್ ಮುಖಂಡರ ಎದುರೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಂತರ ತೀವ್ರ ಆವೇಶಕ್ಕೊಳಗಾದ ಅವರು, ಅಲ್ಲಿದ್ದ ಬಿಟಿಡಿಎ ಕೇಸ್ ವರ್ಕರ್ ನೀಲಕಂಠ ಅಂಕದ್ ಅವರ ಕಚೇರಿಗೆ ನುಗ್ಗಿ ಚಪ್ಪಲಿಯಿಂದ ಥಳಿಸಿದ್ದಾರೆ. ಈ ಘಟನೆಯಿಂದಾಗಿ ಕಚೇರಿ ಆವರಣದಲ್ಲಿ ಕೆಲಕಾಲ ಭಾರಿ ಗದ್ದಲ ಉಂಟಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಅಧಿಕಾರಿಯ ಸ್ಪಷ್ಟನೆ ಮತ್ತು ಆಕ್ರೋಶ
ಹಲ್ಲೆಗೊಳಗಾದ ಬಿಟಿಡಿಎ ಕೇಸ್ ವರ್ಕರ್ ನೀಲಕಂಠ ಅಂಕದ್ ಅವರು ಘಟನೆಯಿಂದ ಮಾನಸಿಕವಾಗಿ ನೊಂದಿದ್ದು, ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 'ನಾನು ಬಿಟಿಡಿಎ ಅಧ್ಯಕ್ಷರ ಪಿಎ ಆಗಿ ಕೆಲಸ ಮಾಡುತ್ತಿದ್ದೇನೆ. ಕಚೇರಿಯಲ್ಲಿ ಬೇರೆ ವಿಚಾರಕ್ಕೆ ಪ್ರತಿಭಟನೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ರೈತ ಬಸಪ್ಪ, ನನ್ನ ಫೈಲ್ ಏಕೆ ಮಾಡಿಕೊಟ್ಟಿಲ್ಲ ಎಂದು ಏಕಾಏಕಿ ಪ್ರಶ್ನಿಸಿದರು,' ಎಂದು ಹೇಳಿಕೊಂಡಿದ್ದಾರೆ.
'ಅವರ ಫೈಲ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ಅದಕ್ಕೆ ಸಂಬಂಧಪಟ್ಟಂತೆ ಆರ್‌ಒ, ಎಸ್‌ಎಲ್‌ಒ ಹಾಗೂ ಅಧ್ಯಕ್ಷರಿದ್ದಾರೆ, ಅವರನ್ನು ಭೇಟಿ ಮಾಡಿ ಎಂದು ಹೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಲಂಚ ತಿಂದಿದ್ದರೆ ಸಾಬೀತುಪಡಿಸಲಿ. ಇಲ್ಲದಿದ್ದರೆ ನನ್ನ ಮೇಲೆ ಸುಳ್ಳು ಅಪವಾದ ಹೊರಿಸಿ, ಕೆಟ್ಟ ಪದಗಳಿಂದ ನಿಂದಿಸಿ ಮಾನಹಾನಿ ಮಾಡಿದ ರೈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,' ಎಂದು ಅವರು ಒತ್ತಾಯಿಸಿದ್ದಾರೆ ಅಂತಾ ನ್ಯೂಸ್ 18 ವರದಿ ಮಾಡಿದೆ.
ರೈತನ ವಿರುದ್ಧ ಪ್ರಕರಣ ದಾಖಲು
ಸರ್ಕಾರಿ ಅಧಿಕಾರಿಯ ಮೇಲೆ ಕಚೇರಿಯಲ್ಲೇ ಚಪ್ಪಲಿಯಿಂದ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ರೈತ ಬಸಪ್ಪ ದೊಡ್ಡಮನಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಮತ್ತು ಜೀವ ಬೆದರಿಕೆ ಹಾಕಿದ ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications