ಸಿದ್ದರಾಮಯ್ಯಗೆ ಈ ಬಾರಿ ಟಿಕೆಟ್ ಸಿಗಲ್ಲ; ನಳಿನ್ ಕುಮಾರ್ ಕಟೀಲ್
ಬಾಗಲಕೋಟೆ, ಅಕ್ಟೋಬರ್31: "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಬಾರಿ ಟಿಕೆಟ್ ಖಂಡಿತವಾಗಿ ಕೊಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಸ್ವಾಭಿಮಾನಿ ನಾಯಕ ಅಂತಾದರೆ, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುತ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರಿಗೆ ಸಿದ್ದರಾಮಯ್ಯನವರ ಭಯ ಇಲ್ಲ. ಬದಲಿಗೆ ನಮಗೆ ಬಹಳ ಖುಷಿ ಇದೆ. ಬಿಜೆಪಿಗೆ ಹೆಚ್ಚು ಮತ ಸಿಗುವುದೇ ಸಿದ್ದರಾಮಯ್ಯ ಮಾತಿನಿಂದ ಹಾಗೂ ಎಲ್ಲಿಯವರೆಗೂ ರಾಹುಲ್ ಗಾಂಧಿ ಇರುತ್ತಾರೋ ಅಲ್ಲಿಯವರೆಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ. ಹಾಗೆ ಎಲ್ಲಿಯವರೆಗೂ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಇರುತ್ತಾರೋ ಅಲ್ಲಿಯವರೆಗೂ ಬಿಜೆಪಿ ಗೆಲ್ಲುತ್ತದೆ" ಎಂದು ವ್ಯಂಗ್ಯವಾಡಿದರು.
ಬಾಗಲಕೋಟೆ; ಕುಳಗೇರಿ ಬೀರಲಿಂಗೇಶ್ವರ ಜಾತ್ರೆಯ ವಿಶೇಷತೆ ಏನು?

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎನ್ನುವುದು ಡಿಕೆಶಿಗೆ ಗೊತ್ತಾಗಿದೆ
"ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಒಂದು ಬದಿಗೆ ಸರಿಯುತ್ತಿದ್ದಾರೆ. ಅವರೇ ಕಾಂಗ್ರೆಸ್‌ನಲ್ಲಿ ಅತಂತ್ರ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್‌ನಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಟಾರ್ಗೆಟ್ ಸಿದ್ದರಾಮಯ್ಯ ಅವರೇ ಆಗಬೇಕಲ್ಲವೇ?. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎನ್ನುವುದು ಡಿ. ಕೆ. ಶಿವಕುಮಾರ್ ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ರಾಜಕೀಯವಾಗಿ ಹಾಳಾಗುತ್ತಾರೆ ಹಾಳಾಗಲಿ ಎಂದು ಡಿ. ಕೆ. ಶಿವಕುಮಾರ್ ಬಿಟ್ಟು ಬಿಟ್ಟಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಸಿದ್ದರಾಮಯ್ಯ ಅದೇ ಸೋನಿಯಾ ಗಾಂಧಿ ಕಾಲು ಹಿಡಿದರು
"ಕಾಂಗ್ರೆಸ್‌ನಲ್ಲಿ ಗೊಂದಲಗಳಿವೆ, ಬಿಜೆಪಿಯಲ್ಲಿ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಬೇಕಾದರೆ ಅವರ ಗುರು ದೇವೇಗೌಡರನ್ನು ಬಿಟ್ಟರು. ದೇವೇಗೌಡರು ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳು. ಸಿಎಂ ಸ್ಥಾನಕ್ಕಾಗಿ ಜೆಡಿಎಸ್‌ನಿಂದ ಹೊರಬಂದರು. ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಗೆ ಅತೀ ಹೆಚ್ಚು ಕೆಟ್ಟ ಶಬ್ದ ಬಳಸಿದ್ದು ಸಿದ್ದರಾಮಯ್ಯ, ಅಷ್ಟು ಕೆಟ್ಟ ಶಬ್ದ ಮಾತನಾಡಿ ಅದೇ ಸೋನಿಯಾ ಗಾಂಧಿ ಕಾಲು ಹಿಡಿದರು.ಯೋಗ್ಯತೆ, ನೈತಿಕತೆ, ಸ್ವಾಭಿಮಾನ ಇದ್ದರೆ, ಕಾಲಿಗೆ ಬಿದ್ದು ಸಿಎಂ ಆಗುವ ಅವಶ್ಯಕತೆ ಸಿದ್ದರಾಮಯ್ಯ ಯಾಕಿತ್ತು?" ಎಂದು ಪ್ರಶ್ನಿಸಿದರು.

ವೈರಿಯಾದ ಕುಮಾರಸ್ವಾಮಿ ಜೊತೆ ಸೇರಿ ಸರ್ಕಾರ ಮಾಡಿದರು
"ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು, ಪರಮೇಶ್ವರ ಅವರನ್ನು ಸೋಲಿಸಿದರು. ಇಬ್ಬರನ್ನು ಸೋಲಿಸಿ ಮತ್ತೆ ಸಿಎಂ ಆಗಬೇಕೆಂದರೆ ಜನ ಆಶೀರ್ವಾದ ಮಾಡಲಿಲ್ಲ. ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ತಮಗೆ ವೈರಿಯಾದ ಕುಮಾರಸ್ವಾಮಿ ಜೊತೆ ಸೇರಿ ಸರ್ಕಾರ ಮಾಡಿದರು. ಒಂದೇ ವರ್ಷದಲ್ಲಿ ಕುಮಾರಸ್ವಾಮಿಗೆ ದ್ರೋಹ ಮಾಡಿದರು. ಹಾಗಾಗಿ ಈ ರಾಜ್ಯದ ರಾಜಕೀಯ ಖಳನಾಯಕ ಯಾರು ಎಂದರೆ ಅದು ಸಿದ್ದರಾಮಯ್ಯ ಸಿದ್ದರಾಮಯ್ಯನವರು. ರಾಜಕೀಯದಲ್ಲಿ ಯಾರನ್ನೂ ಬದುಕಲು ಬಿಡಲ್ಲ. ಸಿನಿಮಾದಲ್ಲಿ ವಜ್ರಮುನಿಯೂ ಇಂತಹ ಪಾತ್ರ ಮಾಡುತ್ತಿರಲಿಲ್ಲ" ಎಂದು ಹೇಳಿದರು.

ಸಿದ್ದರಾಮಯ್ಯ ಈಗ ಕೋಲಾರ ಕಡೆ ನೋಡುತ್ತಿದ್ದಾರೆ
"ಸಿದ್ದರಾಮಯ್ಯ ಜೊತೆ ಜನರಿಲ್ಲ. ಬಾದಾಮಿಯಲ್ಲೂ ನಿಲ್ಲುವ ಪರಿಸ್ಥಿತಿ ಇಲ್ಲ. ಮಾಜಿ ಸಿಎಂ ಆಗಿ ಇಂದು ಕ್ಷೇತ್ರ ಹುಡುಕಾಡುತ್ತಿದ್ದಾರೆ. ಒಬ್ಬ ಮಾಜಿ ಸಿಎಂ ಕ್ಷೇತ್ರ ಹುಡುಕುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ. ಸಿದ್ದರಾಮಯ್ಯ, ಬದಾಮಿಯಿಂದ ಸ್ಫರ್ಧೆ ಮಾಡಲಿ. ಇಲ್ಲವೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ನೋಡಲಿ. ಚಾಮುಂಡೇಶ್ವರಿ, ಬಾದಾಮಿ ಆಯ್ತು ಈಗ ಕೋಲಾರ ಕಡೆ ನೋಡುತ್ತಿದ್ದಾರೆ. ಕ್ಷೇತ್ರ ಹುಡುಕುವ ನಾಯಕರಿಂದ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿ ಇದ್ದರೂ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮುಂದಾಗಿ ಪೈಪೋಟಿ ನಡೆಸಿರುವುದು ಹಾಸ್ಯಾಸ್ಪದ" ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.