ಬ್ಯಾನರ್‌, ಫ್ಲೆಕ್ಸ್‌ ನೋಡಿದ್ರೆ ಕೇಸ್‌ ಹಾಕಿಸ್ತೀನಿ ಎಂದಿದ್ದ ಡಿಕೆಶಿ, ಕ್ಯಾರೇ ಎನ್ನದೆ ಬೆಂಬಲಿಗರಿಂದ ಬೆಂಗಳೂರಿನೆಲ್ಲೆಡೆ ಅಬ್ಬರ

ಬೆಂಗಳೂರು: "ನಗರದಲ್ಲಿ ಯಾರಾದರೂ ಅನಧಿಕೃತ ಬ್ಯಾನರ್ ಅಥವಾ ಫ್ಲೆಕ್ಸ್ ಹಾಕಿದರೆ ನಾನೇ ಖುದ್ದಾಗಿ ಕೇಸ್ ಹಾಕಿಸುತ್ತೇನೆ..." ಇದು ಬೇರೆ ಯಾರದ್ದೋ ಮಾತಲ್ಲ, ಸ್ವತಃ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರದ್ದೇ ಹಳೇ ವಾರ್ನಿಂಗ್. ಆದರೆ, ತಮ್ಮ ನಾಯಕನ ಈ ಖಡಕ್ ಆದೇಶಕ್ಕೆ ಅವರ ಸ್ವಂತ ಬೆಂಬಲಿಗರು ಮತ್ತು ಕಾರ್ಯಕರ್ತರೇ ಕರಾರುವಕ್ಕಾಗಿ ಕ್ಯಾರೆ ಎಂದಿಲ್ಲ. ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಉತ್ಸುಕರಾಗಿರುವ ಅವರ ಅಭಿಮಾನಿ ಬಳಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಹೈಕಮಾಂಡ್ ಜಾರಿಗೆ ತಂದಿರುವ ಕಟ್ಟುನಿಟ್ಟಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಡಿಕೆಶಿ ಎಚ್ಚರಿಕೆಗೆ ಬೆಲೆಯಿಲ್ಲವೇ?

ಕಳೆದ ಬಾರಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಅಳವಡಿಸಬಾರದು ಎಂದು ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಮನವಿ ಮಾಡಿದ್ದರು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಈಗ ಬೃಹತ್ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಇಡೀ ಬೆಂಗಳೂರು ನಗರವೇ ಫ್ಲೆಕ್ಸ್‌ಮಯವಾಗಿ ಮಾರ್ಪಟ್ಟಿದೆ. ರಾಜಧಾನಿಯ ಪ್ರಮುಖ ರಸ್ತೆಗಳು, ಏರ್‌ಪೋರ್ಟ್‌ ರಸ್ತೆ, ಪ್ರಮುಖ ವೃತ್ತಗಳು, ಸಿಗ್ನಲ್‌ಗಳು ಮತ್ತು ರಾಜಭವನದ ಸುತ್ತಮುತ್ತಲಿನ ಪರಿಸರದಲ್ಲಿ ದೊಡ್ಡ ದೊಡ್ಡ ಕಟೌಟ್‌ಗಳು ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ.

DK Shivakumar

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ರಸ್ತೆ ಬದಿಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ನಿಲ್ಲಿಸಲಾಗಿರುವ ಈ ಬೃಹತ್ ಫ್ಲೆಕ್ಸ್‌ಗಳಿಂದಾಗಿ ಬೆಂಗಳೂರಿನ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಭಾರಿ ಕಿರಿಕಿರಿಯಾಗುತ್ತಿದೆ. ತಿರುವುಗಳಲ್ಲಿ ಬ್ಯಾನರ್‌ಗಳು ಅಡ್ಡಲಾಗಿ ಇರುವುದರಿಂದ ಸವಾರರ ಗಮನ ಬೇರೆಡೆ ಸೆಳೆದು ಅಪಘಾತಗಳಿಗೆ ಆಹ್ವಾನ ನೀಡುವಂತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಹೈಕಮಾಂಡ್‌ ಕೂಡ ಮಂತ್ರಿ ಮಾಡುವ ಭರವಸೆ ಕೊಟ್ಟಿದೆ, ಡಿಸಿಎಂ ಪ್ರಸ್ತಾವನೆ ಇಟ್ಟಿಲ್ಲ: ಯತೀಂದ್ರ
ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಹೈಕಮಾಂಡ್‌ ಕೂಡ ಮಂತ್ರಿ ಮಾಡುವ ಭರವಸೆ ಕೊಟ್ಟಿದೆ, ಡಿಸಿಎಂ ಪ್ರಸ್ತಾವನೆ ಇಟ್ಟಿಲ್ಲ: ಯತೀಂದ್ರ

ಇದೇ ಕಾರಣಕ್ಕೆ ಕೆರಳಿರುವ ನಗರದ ಜನತೆ, ಈ ಅನಧಿಕೃತ ಫ್ಲೆಕ್ಸ್‌ಗಳ ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. "ನಿಯಮಗಳೆಲ್ಲವೂ ಕೇವಲ ಸಾಮಾನ್ಯ ಜನರಿಗೆ ಮಾತ್ರವೇ? ರಾಜಕೀಯ ನಾಯಕರಿಗೆ ಮತ್ತು ಅವರ ಬೆಂಬಲಿಗರಿಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲವೇ?" ಎಂದು ನೆಟ್ಟಿಗರು ಖುದ್ದು ಡಿ.ಕೆ.ಶಿವಕುಮಾರ್ ಹಾಗೂ ಜಿಬಿಎ ಆಡಳಿತವನ್ನು ಟ್ಯಾಗ್ ಮಾಡಿ ನೇರವಾಗಿ ಪ್ರಶ್ನಿಸುತ್ತಿದ್ದಾರೆ. ಒಂದು ಕಡೆ ನೂತನ ಸರ್ಕಾರದ ಆಡಳಿತದ ಆರಂಭದ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಸಾರ್ವಜನಿಕ ನಿಯಮಗಳ ಉಲ್ಲಂಘನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದು ಚೇಲಾಗಳ ಕೆಲಸ

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಬರಹಗಾರ ರಾಜೀವ ಹೆಗಡೆ, "ಇದರಲ್ಲಿ ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಯಾವುದೇ ತಪ್ಪಿರುವುದಿಲ್ಲ. ಆದರೆ ಚೇಲಾಗಳು ಮಾಡುವ ಈ ಕೆಲಸವು ಸಾರ್ವಜನಿಕವಾಗಿ ತನ್ನ ನಾಯಕರ ವಿರುದ್ಧ ಟೀಕೆಗೆ ಆಹಾರವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಹಲವು ಬಾರಿ ಬ್ಯಾನರ್ ವಿರುದ್ಧ ಡಿಕೆಶಿ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ನಿಮ್ಮ ನಾಯಕರಿಗೆ ಮುಜುಗರ ಸೃಷ್ಟಿಸಲು ಈ ಬ್ಯಾನರ್ ಹಾಕಿ ಪ್ರಯೋಜನವಿಲ್ಲ. ಅಂದ್ಹಾಗೆ ಈ ಬ್ಯಾನರ್ ಸಂಸ್ಕೃತಿಯು ಪಕ್ಷಾತೀತವಾಗಿ ಬೆಳೆದುಕೊಂಡು ಬಂದಿದೆ ಹಾಗೂ ಪ್ರತಿನಿತ್ಯ ವಾಹನ‌‌ ಸವಾರರಿಗೆ ನರಕ ದರ್ಶನ ಆಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಎ.ಎನ್‌.ಸಚ್ಚಿದಾನಂದ ಎಂಬುವವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ, "ಥ್ರಿಲ್ ಬೇಕಾ? ಸಾಹಸ ಬೇಕಾ? ಹಾಗಾದ್ರೆ ಸೀದಾ ಬನ್ನಿ 'ಎಂ.ಜಿ. ರೋಡ್‌ʼಗೆ! ಬೆಂಗಳೂರು ನಗರದ ಹೃದಯಭಾಗದಲ್ಲಿ ಜಿಬಿಎ, ರಾಜಕಾರಣಿಗಳಿಂದ ವತಿಯಿಂದ ಆಯೋಜಿಸಲಾಗಿದೆ ಉಚಿತ 'ಸಮ್ಮರ್ ಅಡ್ವೆಂಚರ್ ಕ್ಯಾಂಪ್'! ಇಲ್ಲಿ ನಿಮಗೆ ಸಿಗಲಿವೆ, ಧುತ್ತೆಂದು ಎರಗುವ ಮಹಾನ್ ನಾಯಕರ ಫ್ಲೆಕ್ಸ್‌ಗಳು! ಕಣ್ಣಿಗೆ, ವಾಹನಕ್ಕೆ ಚುಚ್ಚಲು ಕಾಯುತ್ತಿರುವ ಫ್ಲೆಕ್ಸ್ ಕೋಲುಗಳ 'ಹರ್ಡಲ್ ರೇಸ್'. ಫುಟ್‌ಪಾತ್ ಮೇಲೆ ಫ್ಲೆಕ್ಸ್‌ಗಳಿಂದ ತಪ್ಪಿಸಿಕೊಂಡು ನಡೆಯುವ 'ಸರ್ವೈವಲ್ ಗೇಮ್'! ಹಾಗೂ ಇನ್ನಿತರ ಮನಮೋಹಕ ಅಡ್ವೆಂಚರ್‌ಗಳು. ಇಷ್ಟೆಲ್ಲ ಅಡ್ವೆಂಚರ್‌ಗಳು ಫ್ರೀಯಾಗಿ ಸಿಗುವಾಗ ವಂಡರ್‌ಲಾ ಯಾಕೆ? ಟಿಕೆಟ್ ಇಲ್ಲ, ಫ್ರೀ ಎಂಟ್ರಿ! ಆಫರ್ ಕೆಲವೇ ದಿನಗಳು ಮಾತ್ರ... (ಜಿಬಿಎ ಅಧಿಕಾರಿಗಳು ನಿದ್ರೆಯಿಂದ ಏಳುವವರೆಗೆ)" ಎಂದು ವ್ಯಂಗ್ಯ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+