ಆಂಧ್ರಪ್ರದೇಶದಲ್ಲಿ ಮಳೆ ಅನಾಹುತ: 24 ಮಂದಿ ಬಲಿ, 100 ಮಂದಿ ನಾಪತ್ತೆ
ಕಡಪ(ಆಂಧ್ರಪ್ರದೇಶ), ನವೆಂಬರ್ 21: ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಜನರು ಪ್ರವಾಹ ಮತ್ತು ಭೂಕುಸಿತದ ವಿರುದ್ಧ ಹೋರಾಡುತ್ತಿದ್ದಾರೆ. ಇಲ್ಲಿಯವರೆಗೆ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ರಾಯಲಸೀಮಾ ಪ್ರದೇಶವು ಮಳೆ ಮತ್ತು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿದೆ. ಏಕಕಾಲದಲ್ಲಿ ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲೂ ಹಾನಿಯಾಗಿದೆ. ಗುರುವಾರದಿಂದಲೂ ಈ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಚೆಯ್ಯೂರು ನದಿ ಉಕ್ಕಿ ಹರಿಯುತ್ತಿದೆ. ಅನ್ನಮಯ್ಯ ನೀರಾವರಿ ಯೋಜನೆಗೂ ಧಕ್ಕೆಯಾಗಿದೆ.
ನಿರಂತರ ಮಳೆಯಿಂದಾಗಿ ಪ್ರವಾಹದಲ್ಲಿ 100 ಕ್ಕೂ ಹೆಚ್ಚು ಜನರು ಕೊಚ್ಚಿಹೋಗಿದ್ದಾರೆ ಎಂದು ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ನಗರದ ತಿರುಪತಿ ದೇಗುಲದ ದೃಶ್ಯವೂ ಆತಂಕಕಾರಿಯಾಗಿದ್ದು, ನೂರಾರು ಯಾತ್ರಾರ್ಥಿಗಳು ತೀವ್ರ ಪ್ರವಾಹದಲ್ಲಿ ಸಿಲುಕಿದ್ದಾರೆ. ಸಮಸ್ಯೆ ಉಲ್ಬಣಗೊಳ್ಳುತ್ತಿದ್ದಂತೆ, ದೇವಾಲಯವನ್ನು ಹೊಂದಿರುವ ಘಾಟ್ ರಸ್ತೆ ಮತ್ತು ತಿರುಮಲ ಬೆಟ್ಟಗಳ ರಸ್ತೆಗಳನ್ನು ಮುಚ್ಚಲಾಗಿದೆ. ತಿರುಪತಿ ಹೊರವಲಯದಲ್ಲಿರುವ ಸ್ವರ್ಣಮುಖಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಜಲಮೂಲಗಳು ಜಲಾವೃತವಾಗಿವೆ ಎಂದು ಹೇಳಲಾಗುತ್ತಿದೆ. ಪ್ರವಾಹದಲ್ಲಿ ಹಲವರು ಸಿಲುಕಿರುವ ಬಗ್ಗೆ ವರದಿಯಾಗಿದೆ.
ಇದರಿಂದ ಮೂರು ರಾಜ್ಯ ಸಾರಿಗೆ ಬಸ್‌ಗಳು ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದು, 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗುತ್ತಿದೆ. ಪ್ರವಾಹದಿಂದಾಗಿ ಹಲವೆಡೆ ರಸ್ತೆಗಳು ಹಾಳಾಗಿದ್ದು, ರೈಲು, ರಸ್ತೆ ಮತ್ತು ವಿಮಾನ ಸಂಚಾರಕ್ಕೆ ತೊಂದರೆಯಾಗಿದೆ. ಈಗ ಕಡಪ ವಿಮಾನ ನಿಲ್ದಾಣವು ನವೆಂಬರ್ 25 ರವರೆಗೆ ಮುಚ್ಚಿರುತ್ತದೆ.
ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ನೂರಾರು ಯಾತ್ರಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ತಿರುಮಲ ಬೆಟ್ಟದ ಮುಖ್ಯ ದೇವಾಲಯಕ್ಕೆ ಹೊಂದಿಕೊಂಡಿರುವ ನಾಲ್ಕು ಬೀದಿಗಳು ಜಲಾವೃತಗೊಂಡಿವೆ. ಪ್ರವಾಹದ ನೀರು ರಸ್ತೆಗಳಲ್ಲಿ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಭಾರೀ ವೈರಲ್ ಆಗಿದೆ. ತಿರುಮಲ ಬೆಟ್ಟದ ಮೇಲೆ ಹಲವು ಮರಗಳು ನೆಲಕ್ಕುರುಳಿದ್ದು, ಪಾಪವಿನಾಶನಂ ಮತ್ತು ಶ್ರೀವಾರಿ ಪಾದಾಲು ಮುಂತಾದ ಸ್ಥಳಗಳಿಗೆ ಹೋಗುವ ರಸ್ತೆಯನ್ನು ಮುಚ್ಚಲಾಗಿದೆ.
ಕಾರ್ತಿಕ ಪೌರ್ಣಮಿಯಂದು ಶಿವನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಕ್ತರ ಗುಂಪೊಂದು ಹಠಾತ್ ಪ್ರವಾಹಕ್ಕೆ ಸಿಲುಕಿ ರಾಜಂಪೇಟೆ ಪ್ರದೇಶದಲ್ಲಿ ಕೊಚ್ಚಿಕೊಂಡು ಹೋಗಿದೆ. ಬಳಿಕ ನಂದಲೂರು ಬಳಿ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾದ ಭಾರೀ ಮಳೆಯಿಂದಾಗಿ ರಾಯಲಸೀಮಾ ಜಿಲ್ಲೆಗಳಾದ ಚಿತ್ತೂರು ಮತ್ತು ಕಡಪಾವು ಹಲವು ವರ್ಷಗಳಿಂದಲೂ ಭೀಕರವಾದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಇದು ಹಲವಾರು ನದಿಗಳನ್ನು ಉಕ್ಕಿ ಹರಿಯುವಂತೆ ಮಾಡಿದೆ.
NDRF ಮತ್ತು SDRF ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿವೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಹೆಚ್ಚಿಸುವಂತೆ ಅವರಿಗೆ ನಿರ್ದೇಶನ ನೀಡಿದರು.

ಅಧಿಕ ಮಳೆಗೆ ಚೆಯ್ಯೆರು ನದಿ ಅಣೆಕಟ್ಟು ಒಡೆದು ಉಕ್ಕಿ ಹರಿಯುವ ಮೂಲಕ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ನಂದಲೂರಿನ ಸ್ವಾಮಿ ಆನಂದ ದೇವಸ್ಥಾನವೂ ಮುಳುಗಡೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಶುಕ್ರವಾರ ಮುಂಜಾನೆ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಆಂಧ್ರಪ್ರದೇಶ ಮತ್ತು ರಾಯಲಸೀಮೆಯಾ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.