ದೆವ್ವ ಬಿಡಿಸಲು ಹೋಗಿ ಜೀವವನ್ನೇ ತೆಗೆದರು!: ಗುಜರಾತ್‌ನಲ್ಲಿ ದಾರುಣ ಘಟನೆ
ಅಹಮದಾಬಾದ್, ನವೆಂಬರ್ 16: ಗುಜರಾತ್‌ನಲ್ಲಿ 50 ವರ್ಷದ ವ್ಯಕ್ತಿಯಲ್ಲಿ ಹೊಕ್ಕಿರುವ 'ದೆವ್ವ'ವನ್ನು ಹೊರಗೆ ಓಡಿಸಲು ಕುಟುಂಬದ ಸದಸ್ಯರೇ ಅವರ ಎದೆಯ ಮೇಲೆ ಹಾರಿ ಅವರ ಜೀವ ತೆಗೆದಿದ್ದಾರೆ. ಆರು ಮಂದಿಯನ್ನು ಬಂಧಿಸಲಾಗಿದೆ.
ಮೃತ ವ್ಯಕ್ತಿಯನ್ನು ಸೂರತ್‌ನ ಕಟಾಗ್ರಾಮದ ನಿವಾಸಿ ಕಾಂಜಿ ಕುಂಭಾರ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಕಾಂಜಿ ಅವರ ಮೇಲೆ ವಾಮಾಚಾರ ಪ್ರಯೋಗಿಸುವ ವೇಳೆ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಅವರ ಅಪ್ರಾಪ್ತ ವಯಸ್ಸಿನ ಮಗ ಸೇರಿದಂತೆ ಮೂವರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಪತ್ನಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಂಜಿ ಕುಂಭಾರ್ ಅವರಿಗೆ ಕುಂಕುಮದ ನೀರನ್ನು ಕುಡಿಸಿದ್ದ ಕುಟುಂಬದ ಸದಸ್ಯರು, ಸರದಿಯಲ್ಲಿ ಅವರ ಎದೆಯ ಮೇಲೆ ಹಾರಿದ್ದರು. ವಜ್ರದ ಕೆಲಸಗಾರರಾದ ಕಾಂಜಿ ಕೂಡ ವಾಮಾಚಾರ ಮತ್ತು ತಂತ್ರಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಕಾಂಜಿ ಅವರನ್ನು ದೆವ್ವ ಆವರಿಸಿಕೊಂಡಿದ್ದು, ಅದನ್ನು ವಾಮಾಚಾರ ಪ್ರಯೋಗದ ಮೂಲಕ ಹೊರಕ್ಕೆ ಕಳುಹಿಸಲು ಅವರ ಕುಟುಂಬದ ಸದಸ್ಯರು ನಿರ್ಧರಿಸಿದ್ದರು.
ನವೆಂಬರ್ 11ರಂದೇ ಈ ಘಟನೆ ಸಂಭವಿಸಿತ್ತು. ಆದರೆ, ಮೃತ ಕಾಂಜಿ ಅವರ ದೇಹವನ್ನು ಮನೆಯಲ್ಲಿಯೇ ಬಿಟ್ಟಿದ್ದ ಕುಟುಂಬದ ಸದಸ್ಯರು, ಸೂರತ್ ತೊರೆದು ಬನಶ್ಕಾಂತಾ ಜಿಲ್ಲೆಯ ತಮ್ಮ ಊರಿಗೆ ಪಲಾಯನ ಮಾಡಿದ್ದರು.
ಆದರೆ, ನವೆಂಬರ್ 13ರಂದು ಕುಟುಂಬದ ಸದಸ್ಯರು ಮನೆಗೆ ಮರಳಿದ್ದರು. ಬಳಿಕ ಅವರ ಪತ್ನಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪತಿ ಮನೆಯಲ್ಲಿ ಮೃತಪಟ್ಟಿರುವುದಾಗಿ ದೂರು ನೀಡಿದ್ದರು.
ಇದನ್ನು ಆಕಸ್ಮಿಕ ಸಾವು ಎಂದೇ ಪೊಲೀಸರು ದೂರು ದಾಖಲಿಸಿದ್ದರು. ಆದರೆ, ಈ ಸಾವು ಆಘಾತದಿಂದ ಹಾಗೂ ಅವರ ಶ್ವಾಸಕೋಶ ಮತ್ತು ಗುಲ್ಮಕ್ಕೆ ಉಂಟಾದ ತೀವ್ರ ಗಾಯದಿಂದ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಯಿತು.
ಇದರಿಂದ ಅನುಮಾನಗೊಂಡ ಪೊಲೀಸರು ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದಾಗ ಅಳಲು ಪ್ರಾರಂಭಿಸಿದ ಅವರು, ಇಡೀ ಘಟನೆಯನ್ನು ಬಿಚ್ಚಿಟ್ಟರು.












Click it and Unblock the Notifications