ಬೆಂಗಳೂರಿನಲ್ಲಿ 2 ಅತ್ಯಾಚಾರ ಹತ್ಯೆ ಪ್ರಕರಣಗಳು

ಕೋರಮಂಗಲ ಸಿದ್ದಗುಂಟೆ ಪಾಳ್ಯದಲ್ಲಿ ಬುಧವಾರ ಈ ದುರ್ಘಟನೆ ನಡೆದಿದ್ದು, ಸಿದ್ದಗುಂಟೆ ಪಾಳ್ಯದ ಮಣಿಯಮ್ಮ ಎಂಬ 40 ವರ್ಷದ ಮಹಿಳೆಯ ಮೇಲೆ ಪೈಶಾಚಿಕವಾಗಿ ಎರಗಿದ ಕಾಮಾಂಧರು ಅತ್ಯಾಚಾರವೆಸಗಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ.
ಮಣಿಯಮ್ಮ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹೋಗಿ ರಾತ್ರಿ 9 ಗಂಟೆಗೆ ವಾಪಾಸಾಗುತ್ತಿದ್ದರು. ಆದರೆ, ರಾತ್ರಿ ಮಣಿಯಮ್ಮ ಮನೆಗೆ ಬಂದಿಲ್ಲ. ಇಂದು ಬೆಳಗ್ಗೆ ಮಣಿಯಮ್ಮನ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೈಮೇಲೆ ಗಾಯದ ಗುರುತಿದೆ.
ಮತ್ತೊಂದು ಪ್ರಕರಣದಲ್ಲಿ ಖಾಲಿ ನಿವೇಶನವೊಂದರಲ್ಲಿ ಅಪರಿಚಿತ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋರಮಂಗಲ 3ನೇ ಬ್ಲಾಕ್ ಬಿಡಿಎ ಕಾಂಪ್ಲೆಕ್ಸ್ ಸಮೀಪದ ಖಾಲಿ ನಿವೇಶನದಲ್ಲಿ ಸುಮಾರು 40 ವರ್ಷದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಹತ್ಯೆ ಮಾಡಿದ್ದು, ಹತ್ಯೆಗೂ ಮುನ್ನ ಅತ್ಯಾಚಾರ ವೆಸಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಇದೇ ಮಾರ್ಗವಾಗಿ ಹೋಗುತ್ತಿದ್ದ ಸ್ಥಳೀಯರೊಬ್ಬರು ಮಹಿಳೆ ಶವ ಕಂಡು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತ ಮಹಿಳೆಯ ಮೈಮೇಲೆ ಸೀರೆ, ರವಿಕೆಯಿದೆ. ಮೃತ ಮಹಿಳೆಯ ಹೆಸರು, ವಿಳಾಸ ತಿಳಿದು ಬಂದಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಅತ್ಯಾಚಾರವೆಸಗಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಧಾರವಾಡದಲ್ಲಿಯೂ ಒಂದು ರೇಪ್ ಮರ್ಡರ್ ಪ್ರಕರಣ ವರದಿಯಾಗಿದೆ. ಮಹಿಳೆಯೊಬ್ಬರ ಶವವೊಂದು ಕೆರೆಯಲ್ಲಿ ಪತ್ತೆಯಾಗಿದೆ.












Click it and Unblock the Notifications