ಸೆ.16 ರಿಂದ ಪೆಟ್ರೋಲ್, ಡೀಸೆಲ್ ದುಬಾರಿ?

ಶುಕ್ರವಾರ ನವದೆಹಲಿಯಲ್ಲಿ ಮಾತನಾಡಿದ ವಿದೇಶಾಂಗ ಖಾತೆ ಸಚಿವ ಸಲ್ಮಾನ್ ಖುರ್ಷಿದ್, ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಇಂಧನ ಬಳಕೆ ತಗ್ಗಿಸುವುದು ಅನಿವಾರ್ಯವಾಗಿದೆ. ಸರ್ಕಾರ ಈ ಕುರಿತು ಕೆಲವು ನೀತಿಗಳನ್ನು ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.
ತೈಲ ವೆಚ್ಚಗಳನ್ನು ಸುಮಾರು 2000 ಕೋಟಿ ಡಾಲರ್ ನಷ್ಟು ತಗ್ಗಿಸುವ ಗುರಿ ಕೇಂದ್ರ ಸರ್ಕಾರದ ಮುಂದಿದೆ. ಸೆ.16ರಂದು ಹೊಸ ನೀತಿಗಳನ್ನು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಪ್ರಕಟಿಸಲಿದ್ದಾರೆ ಎಂದು ಖುರ್ಷಿದ್ ತಿಳಿಸಿದರು.
ಹೊಸ ನೀತಿ ಪಕ್ರಟಗೊಂಡ ನಂತರ ಡೀಸೆಲ್, ಎಲ್ ಪಿಜಿ ಸೇರಿದಂತೆ ತೈಲ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದ ಸಚಿವರು, ತೈಲಬೆಲೆ ಏರಿಸುವ ಸುಳಿವು ನೀಡಿದರು. ಇಂಧನ ಬಳಕೆಯ ಪ್ರಮಾಣವನ್ನು ತಗ್ಗಿಸುವುದು ಅನಿವಾರ್ಯವಾಗಿದೆ ಎಂದು ಸಚಿವರು ಸಮರ್ಥನೆ ನೀಡಿದರು.
ಎಷ್ಟು ಹೆಚ್ಚಳ : ಸೆ.16ರ ನಂತರ ಡೀಸೆಲ್ ಬೆಲೆ 3 ರಿಂದ 5 ರೂ. ಸೀಮೆಎಣ್ಣೆ ದರ 2 ರೂ. ಮತ್ತು ಎಲ್‌ಪಿಜಿ ದರ 50 ರೂ. ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೈಲ ಬೆಲೆ ಹೆಚ್ಚಳದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದ್ದು, ಮುಂದಿನ ವಾರ ಭಾರತಕ್ಕೆ ಮರಳುವ ನಿರೀಕ್ಷೆ ಇದೆ. ಸೋನಿಯಾ ಆಗಮನದ ನಂತರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ದರ ಏರಿಕೆ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.












Click it and Unblock the Notifications