ಬಾಪುಗೆ ನಿತ್ಯ ಲೇಡಿ ಡಾಕ್ಟರ್ಸ್ ಬೇಕಂತೆ
ಜೋಧ್ ಪುರ್, ಸೆ.6: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ 'ಟ್ರೀಟ್ ಮೆಂಟ್' ಮಾಡಲು ನಿತ್ಯ ಲೇಡಿ ಡಾಕ್ಟರುಗಳೇ ಬೇಕಂತೆ.
ಜೋಧಪುರದ ಜೈಲಿನಲ್ಲಿರುವ ಬಾಪುಗೆ ನಿತ್ಯ ಚೆಕ್ ಅಪ್ ಮಾಡಲು ಬರುವ ಡಾಕ್ಟರುಗಳು ಮಹಿಳೆಯರೇ ಆಗಿರಬೇಕು ಎಂದು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರಂತೆ. 72 ವರ್ಷದ ಅಸಾರಾಮ್ ಬಾಪುಗೆ ಅದರಲ್ಲೂ ಮಹಿಳಾ ಆಯುರ್ವೇದಿಕ್ ವೈದ್ಯರೇ ಬೇಕಂತೆ.
ಹೀಗೊಂದು ಮನವಿಯನ್ನು ಬಾಪು ನೀಡಿದ್ದಾರೆ ಎಂದು ಡಿಸಿಪಿ ಅಜಯ್ ಪಾಲ್ ಲಂಬಾ ಅವರು ಸುದ್ದಿಗಾರರಿಗೆ ತಿಳಿಸಿದರು. ಅಸಾರಾಮ್ ಬಾಪು ಅವರ ವಕೀಲರು ಕೂಡಾ ಈ ಬಗ್ಗೆ ಮನವಿಯನ್ನು ಜೋಧಪುರ ಕೋರ್ಟಿನಲ್ಲಿ ಸಲ್ಲಿಸಿದ್ದಾರೆ. ಪ್ರತಿನಿತ್ಯ 2 ಗಂಟೆಗಳ ಕಾಲ ಮಹಿಳಾ ಆಯುರ್ವೇದ ವೈದ್ಯರು ಬಾಪು ಅವರ ದೈಹಿಕ ತಪಾಸಣೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ.

ನನ್ನ ತಂದೆಗೆ ಅಲೋಪತಿ ವೈದ್ಯದಲ್ಲಿ ನಂಬಿಕೆ ಇಲ್ಲ ಅವರಿಗೆ ಆಯುರ್ವೇದ ವೈದ್ಯದ ಮೇಲೆ ಮಾತ್ರ ನಂಬಿಕೆ ಇದೆ ಎಂದು ಅಸಾರಾಮ್ ಬಾಪು ಮಗ ನಾರಾಯಣ ಪ್ರೇಮ್ ಸಾಯಿ ಹೇಳಿದ್ದಾರೆ.
ಇದಕ್ಕೂ ಮುನ್ನ ಗಂಗಾಜಲ, ಪೂಜೆ ಸಾಮಾಗ್ರಿಗಳು, ಗಿಡಮೂಲಿಕೆ ಹಾಗೂ ಪುಸ್ತಕಗಳನ್ನು ನೀಡುವಂತೆ ಬಾಪು ಕೋರಿಕೆ ಒಡ್ಡಿದ್ದರು.
ಶಿವನ ಬಳಿ ಸಾಕ್ಷ್ಯ: ಈಗಾಗಲೇ ಪೊಲೀಸರ ಬಂಧನದಲ್ಲಿರುವ ಅಸಾರಾಂ ಆಪ್ತ ಶಿವ ಮೊಬೈಲ್ ನಲ್ಲಿ ಕೆಲವು ಅಶ್ಲೀಲ ಚಿತ್ರಗಳಿರುವ ದೃಶ್ಯಗಳು ಪತ್ತೆಯಾಗಿವೆ. ಈ ಮೊಬೈಲ್ ನಲ್ಲಿ ಬಾಲಕಿಯೊಬ್ಬಳ ಜತೆ ಅಸಾರಾಂ ಬಾಪು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಜತೆಗೆ ನೂರಕ್ಕೂ ಹೆಚ್ಚು ಇಂತಹ ಅಶ್ಲೀಲ ಚಿತ್ರಗಳು ಇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧ್ಯಾನ ಹೇಳಿಕೊಡುವ ನೆಪದಲ್ಲಿ ಅಸಾರಾಂ ಬಾಪು ಬಾಲಕಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಪೊಲೀಸರ ಮುಂದೆ ಶಿವ ಬಾಯಿಬಿಟ್ಟಿದ್ದಾನೆ.
ಆಶ್ರಮದ ರಹಸ್ಯ ಕೊಠಡಿಯೊಂದರಲ್ಲಿ ಕಳೆದ ಹಲವು ವರ್ಷಗಳಿಂದ ಸ್ವಯಘೋಷಿತ ದೇವಮಾನವ ಇಂತಹ ಹೀನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಅಸಾರಾಂ ಬಾಪು ನಡೆಸಿರುವ ಇಂತಹ ಕಾಮಲೀಲೆಗಳ ಸಿಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವನ ಈ ಲೀಲಾಟಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಮತ್ತೊಂದೆಡೆ ಅಸಾರಾಂ ಬಾಪು ಜಿಲ್ಲಾ ನ್ಯಾಯಾಲಯದ ಅನುಮತಿ ಪಡೆಯದೆ ಆಶ್ರಮ ಕಟ್ಟಿರುವುದನ್ನು ತನಿಖೆ ನಡೆಸುವಂತೆ ಜೋಧ್ ರ್ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಅರಣ್ಯ ನಿಯಮ ಪಾಲನೆ ಮಾಡದೆ ಕಾನೂನು ಬಾಹಿರವಾಗಿ ಆಶ್ರಮ ಕಟ್ಟಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.












Click it and Unblock the Notifications