
ದಿನೇಶ್ ಗುಂಡೂರಾವ್ ವಿರುದ್ಧ ಜಾತಿ ನಿಂದನೆ ದೂರು
ಸುಭಾಷ್ ನಗರ ವಾರ್ಡ್ ಕಾಂಗ್ರೆಸ್ ಸದಸ್ಯ ಮಲ್ಲೇಶ್ ಸಚಿವ ದಿನೇಶ್ ಗುಂಡೂರಾವ್, ತನ್ನ ವಿರುದ್ಧ ವಾಗ್ದಾಳಿ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹಲಸೂರು ಗೇಟ್ ಠಾಣೆಯಲ್ಲಿ ಬುಧವಾರ ಸಂಜೆ ದೂರು ದಾಖಲಿಸಿದ್ದಾರೆ.
ಆಗಿದ್ದೇನು : ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯಿತು. ಪಾಲಿಕೆಯಲ್ಲಿ ವಿಪಕ್ಷ ನಾಯಕನ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಸಚಿವ ದಿನೇಶ್ ಗೂಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರ ಸಭೆಯ ನಡೆಯುತ್ತಿತ್ತು.
ಸಭೆಯಲ್ಲಿ ಹಾಜರಿದ್ದ ಸುಭಾಷ್ ನಗರ ವಾರ್ಡ್ ಸದಸ್ಯ ಮಲ್ಲೇಶ್, ಬಿಬಿಎಂಪಿ ವಿಪಕ್ಷ ನಾಯಕನ ಸ್ಥಾನವನ್ನು ದಲಿತರಿಗೆ ನೀಡಿ, ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದರು.
ಇದರಿಂದ ಕೆರಳಿದ ದಿನೇಶ್ ಗುಂಡೂರಾವ್, ದಲಿತರಿಗೆ ವಿರೋಧ ಪಕ್ಷ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ನಿನ್ನಂತಹವರಿಗೆ ಇಲ್ಲಿಗೆ ಬರಲಿ ಯೋಗ್ಯತೆ ಇಲ್ಲ ಎಂದು ನಿಂದಿಸಿದರು. ಸಚಿವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು ಎಂದು ಮಲ್ಲೇಶ್ ದೂರಿನಲ್ಲಿ ಹೇಳಿದ್ದಾರೆ.
ಸಚಿವರ ಬೆಂಬಲಿಗರಿಂದ ತಪ್ಪಿಸಿಕೊಂಡು ಬಂದು ದೂರು ನೀಡುತ್ತಿದ್ದೇನೆ. ನಾನು ದಲಿತ ಎಂಬ ಕಾರಣಕ್ಕಾಗಿ ಸಚಿವರು ನನ್ನ ಮೇಲೆ ಇಲ್ಲಸಲ್ಲದ ಆರೋಪವನ್ನು ಮೊದಲಿಂದಲೂ ಮಾಡುತ್ತಿದ್ದಾರೆ. ಜನಬಲ, ಹಣಬಲದಿಂದ ದರ್ಪ ಪ್ರದರ್ಶಿಸುತ್ತಿದ್ದಾರೆ. ನನಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಮಲ್ಲೇಶ್ ಮನವಿ ಮಾಡಿದ್ದಾರೆ.
ಸಚಿವರ ಪ್ರತಿಕ್ರಿಯೆ : ಮಲ್ಲೇಶ್ ಅವರ ಆರೋಪವನ್ನು ಸಚಿವ ದಿನೇಶ್ ಗುಂಡೂರಾವ್ ನಿರಾಕರಿಸಿದ್ದಾರೆ. ಮಲ್ಲೇಶ್ ವಿಧಾನಸಭಾ ಚುನಾವಣೆ ಸಮಯದಿಂದಲೂ ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ.
ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇಂತಹವರು, ವಿಪಕ್ಷ ನಾಯಕನ ಸ್ಥಾನದ ವಿಚಾರವಾಗಿ ಮಾತನಾಡಿದರು. ಆದ್ದರಿಂದ ಗಂಭೀರವಾಗಿ ಮತನಾಡುವಂತೆ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ.
ಯಾವುದೇ ಅವ್ಯಾಚ್ಯ ಶಬ್ದಗಳನ್ನೂ ಬಳಸಿ ನಾನು ಮಲ್ಲೇಶ್ ಅವರನ್ನು ನಿಂದಿಸಿಲ್ಲ. ನನ್ನ ಬೆಂಬಲಿಗರು ಯಾವುದೇ ಹಲ್ಲೆ ನಡೆಸಲು ಮುಂದಾಗಿಲ್ಲ. ರಾಜಕೀಯ ದ್ವೇಷದಿಂದಾಗಿ ಮಲ್ಲೇಶ್ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.