ಬಿಬಿಎಂಪಿ ಮೇಯರ್ ಚುನಾವಣೆ ವೇಳಾಪಟ್ಟಿ ಘೋಷಣೆ
ಬೆಂಗಳೂರು, ಆ.22 : ಸರ್ಕಾರ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣೆ ಘೋಷಣೆಯಾಗಿದೆ. ಸೆ.4ರಂದು ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ.
ಗುರುವಾರ ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತಾ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಅದರಂತೆ ಸೆ.4ರ ಬುಧವಾರ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಮಂಗಳವಾರ ನಗರಾಭಿವೃದ್ಧಿ ಇಲಾಖೆ, ಹೈಕೋರ್ಟ್ ಆದೇಶದಂತೆ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನವನ್ನು ಎಸ್.ಟಿ.ವರ್ಗದ ಮಹಿಳೆಗೆ ಮೀಸಲಾಗಿಟ್ಟು ಆದೇಶ ಹೊರಡಿಸಿತ್ತು. ಇದರಿಂದ ಚುನಾವಣೆಯ ಹಾದಿ ಸುಗಮವಾಗಿತ್ತು.
ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಆದ್ದರಿಂದ ಬಿಜೆಪಿಗೆ ಮೇಯರ್ ಸ್ಥಾನ ದೊರೆಯಲಿದೆ. ಈಗಾಗಲೇ ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಹುಡುಕಾಟ ನಡೆಸಿದೆ. (ಹೊಸ ಮೇಯರ್ ಹುಡುಕಾಟದಲ್ಲಿ ಬಿಜೆಪಿ ಬ್ಯುಸಿ)
ಉಪ ಮೇಯರ್ ಸ್ಥಾನವನ್ನು ಎಸ್.ಟಿ.ವರ್ಗದ ಮಹಿಳೆಗೆ ಮೀಸಲಾಗಿಡಲಾಗಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಎಸ್.ಟಿ.ವರ್ಗದ ಮಹಿಳಾ ಅಭ್ಯರ್ಥಿಗಳು ಇಲ್ಲ. ಆದ್ದರಿಂದ ಉಪ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ.
ಏಪ್ರಿಲ್ ತಿಂಗಳಿನಲ್ಲಿ ಮೇಯರ್ ಡಿ.ವೆಂಕಟೇಶ್‌ಮೂರ್ತಿ ಮತ್ತು ಉಪ ಮೇಯರ್ ಎಲ್. ಶ್ರೀನಿವಾಸ್ ಅವರ ಅಧಿಕಾರಾವಧಿ ಮುಗಿದಿತ್ತು. ಏ.27ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ, ಮೀಸಲಾತಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಚುನಾವಣೆ ಮುಂದೂಡಲಾಗಿತ್ತು. (ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆ)
ಮೇಯರ್ ಡಿ.ವೆಂಕಟೇಶ್‌ಮೂರ್ತಿ ಮತ್ತು ಉಪ ಮೇಯರ್ ಎಲ್. ಶ್ರೀನಿವಾಸ್ ಚುನಾವಣೆ ನಡೆಯುವರೆಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸದ್ಯ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಸೆ.5ರಿಂದ ನೂತನ ಮೇಯರ್ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications