ಮಂಗಳಗ್ರಹಕ್ಕೆ ಆಡಂ-ಈವ್ ಕಳುಹಿಸಲು ಭರದ ಸಿದ್ಧತೆ
ವಾಷಿಂಗ್ಟನ್, ಅಗಸ್ಟ್ 12: ಮಂಗಳನ ಅಂಗಳದಲ್ಲಿ ಸ್ವಚ್ಚಂದವಾಗಿ ಬದುಕು ರೂಪಿಸಿಕೊಳ್ಳಲು ತನ್ಮೂಲಕ ಭೂಮಿಯನ್ನು ಬಿಟ್ಟು ಬೇರೆ ಕಡೆಯೂ ಮನುಷ್ಯ ವಾಸಿಸಬಲ್ಲ ಎಂಬುದನ್ನು ನಿರೂಪಿಸಲು ಸದ್ದಿಲ್ಲದೆ ಭರದ ಸಿದ್ಧತೆ ನಡೆದಿದೆ.
ಕುತೂಹಲದ ಸಂಗತಿಯೆಂದರೆ ಈಗಾಗಲೇ ಕೆಂಪು ಗ್ರಹಕ್ಕೆ ತೆರಳಲು ಲಕ್ಷಾಂತರ ಮಂದಿ ಅರ್ಜಿ ಗುಜರಾಯಿಸಿ, ತುದಿಗಾಲಲ್ಲಿ ನಿಂತಿದ್ದಾರೆ. ಇವರ ಪೈಕಿ ಅದೃಷ್ಟಶಾಲಿ ನಾಲ್ಕೇ ಮಂದಿ (ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಮಾತ್ರ ) 2022ರ ಸೆಪ್ಟೆಂಬರ್‌ನಲ್ಲಿ ಭೂಮಿಗೆ ಗುಡ್ ಬೈ ಹೇಳಿ 7ರಿಂದ 8 ತಿಂಗಳ ಪ್ರಯಾಣದ ಬಳಿಕ 2023ರ ಏಪ್ರಿಲ್‌ನಲ್ಲಿ ಮಂಗಳನ ಅಂಗಳಕ್ಕೆ ಕಾಲಿಡಲಿದ್ದಾರೆ.

ಆದರೆ ಗಮನಿಸಿ ಇದು ಏಕಮುಖ ಸಂಚಾರ. ಮಂಗಳನ ಅಂಗಳಕ್ಕೆ ನೆಗೆಯಲು ಇಚ್ಛಿಸುವವರು ಮರಳಿ ಈ ಭೂಮಿಗೆ ವಾಪಸಾಗುವ ಮಾತೇ ಇಲ್ಲ! ಆದರೂ ಈಗಾಗಲೇ 30 ಸಾವಿರ ಮಂದಿ ಅಮೆರಿಕನ್ನರು ಅರ್ಜಿ ಹಾಕಿಕೊಂಡಿದ್ದಾರೆ. ಅಂದಹಾಗೆ, Bas Lansdorp ಮಾಲೀಕತ್ವದ ಡಚ್ ಕಂಪನಿ ಈ ಯಾತ್ರೆ ಕೈಗೊಂಡಿದೆ.
ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣ ಇದೆಯೇ? ಎಂಬ ಬಗ್ಗೆ ವಿಜ್ಞಾನಿಗಳೂ ಇನ್ನೂ ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದರೆ ಜನ ಅದಾಗಲೇ ಮಾರ್ಸ್ಒನ್ ಯೋಜನೆಯಡಿ ಮಂಗಳ ಗ್ರಹಕ್ಕೆ ವಲಸೆ ಹೋಗಿ ಅಲ್ಲಿ ಶಾಶ್ವತವಾಗಿ ನೆಲೆಸುವ ಹೆಬ್ಬಯಕೆ ಹೊಂದಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಮಂಗಳನಲ್ಲಿ ವಾಸ್ತವ್ಯ ಹೂಡ ಬಯಸುವವರು ತಮ್ಮ ಸಂಪೂರ್ಣ ವಿವರಗಳನ್ನು ಆಯಾಯ ದೇಶಗಳಿಗೆ ನಿಗದಿಪಡಿಸಲಾದ ಅರ್ಜಿ ಶುಲ್ಕವನ್ನು ಪಾವತಿಸಿ, ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಅಮೆರಿಕದ ನಾಗರಿಕರಿಗೆ ಅರ್ಜಿ ಶುಲ್ಕ 38 ಡಾಲರ್‌ಗಳಾಗಿದೆ ಎಂದು CNN ವರದಿ ಮಾಡಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications