ಬೆಂಗಳೂರು : ಎಟಿಎಂ ದರೋಡೆಗೆ ವಿಫಲ ಯತ್ನ

ಬುಧವಾರ ಮುಂಜಾನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಎಟಿಎಂ ದೋಚಲು ಕಳ್ಳರು ಪ್ರಯತ್ನಿಸಿದ್ದಾರೆ. ಎಟಿಎಂ ಯಂತ್ರವನ್ನು ಜಖಂಗೊಳಿಸಿರುವ ಕಳ್ಳರು, ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದಾಗಿ ಪರಾರಿಯಾಗಿದ್ದಾರೆ.
ಮೂವರು ವ್ಯಕ್ತಿಗಳು ಯೂನಿಯನ್ ಬ್ಯಾಂಕ್ ಎಟಿಎಂ ದೋಚಲು ಆಗಮಿಸಿದ್ದರು. ಇಬ್ಬರು ಎಟಿಎಂವೊಳಗೆ ಬಂದು ಯಂತ್ರವನ್ನು ಜಖಂಗೊಳಿಸಿದ್ದಾರೆ. ತಕ್ಷಣ ಎದ್ದ ಭದ್ರತಾ ಸಿಬ್ಬಂದಿ ಜೋರಾಗಿ ಕೂಗಿಕೊಂಡಿದ್ದಾನೆ. ಇದರಿಂದ ಕಳ್ಳರು ಸ್ಥಳದಿಂದ ಓಡಿಹೋಗಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು ಮೂವರು ಎಟಿಎಂ ದೋಚಲು ಆಗಮಿಸಿದ್ದರು ಎಂದು ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಎಟಿಎಂ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿರುವ ಪೊಲೀಸರು ಕಳ್ಳರನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಿದ್ದಾರೆ. ಭದ್ರತಾ ಸಿಬ್ಬಂದಿ ಇದ್ದಿದ್ದರಿಂದ ಯಂತ್ರದಲ್ಲಿದ್ದ ಸುಮಾರು 2 ಲಕ್ಷ ರೂ. ಹಣ ಕಳ್ಳರ ಪಾಲಾಗುವುದು ತಪ್ಪಿದೆ.
ಎಟಿಎಂ ಗಳೇ ಟಾರ್ಗೆಟ್ : ನಗರದ ಹೊರವಲಯದ ಎಟಿಎಂಗಳು ಕಳ್ಳರ ಟಾರ್ಗೆಟ್ ಆಗಿವೆ. ಕಳೆದ ವಾರವೂ ದಾಸರಹಳ್ಳಿ ಬಳಿ ಎಟಿಎಂ ದೋಚಲು ಕಳ್ಳರು ಪ್ರಯತ್ನಿಸಿ ಹಣ ದೊರೆಯಲಿಲ್ಲ ಎಂದು ಎಟಿಎಂ ಯಂತ್ರವನ್ನು ಸಂಪೂರ್ಣವಾಗಿ ಜಖಂಗೊಳಿಸಿ ಪರಾರಿಯಾಗಿದ್ದರು.
ಎಲ್ಲಾ ಎಟಿಎಂಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು ಎಂಬ ಪೊಲೀಸರ ಮನವಿಗೆ ಎಲ್ಲಾ ಬ್ಯಾಂಕ್ ಗಳು ಸರಿಯಾಗಿ ಸ್ಪಂದಿಸಿಲ್ಲ. ಆದ್ದರಿಂದ ಎಟಿಎಂ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ.












Click it and Unblock the Notifications