11 ಕಾಮುಕರಿಂದ ಹುಬ್ಬಳ್ಳಿಯಲ್ಲಿ ಮಹಿಳೆ ಅತ್ಯಾಚಾರ

ಶುಕ್ರವಾರ ಮುಂಜಾನೆ 2 ರಿಂದ 3 ಗಂಟೆಯ ವೇಳೆಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು 46 ವರ್ಷದ ಮಹಿಳೆಯ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬೆಳಗ್ಗೆ ಸ್ಥಳೀಯರಿಂದಾಗಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಹಿಳೆಯನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
11 ಜನರ ಗುಂಪು ಅತ್ಯಾಚಾರದ ನಂತರ ಮನೆಯಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚಿದೆ. ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ವಿಚಾರ ತಿಳಿಸಿದರೆ, ಅದನ್ನು ಇಂಟರ್ ನೆಟ್ ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅಳಿಯನ ಕೃತ್ಯ : ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಅಳಿಯನೇ ತನ್ನ ಸ್ನೇಹಿತರೊಂದಿಗೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾತ್ರಿ ಅಳಿಯ ಬಂದಿದ್ದರಿಂದಲೇ ಮಹಿಳೆ ಬಾಗಿಲು ತೆರೆದಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಯಲ್ಲಿ ಯಾರು ಇರಲಿಲ್ಲ : ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಒಬ್ಬರು ದೆಹಲಿಯಲ್ಲಿದ್ದರೆ, ಮತ್ತೊಬ್ಬ ಮಗಳು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಆಕೆಯ ಪತಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಮುಂಜಾನೆ ಮಹಿಳೆಯ ಮನೆಗೆ ಆಗಮಿಸಿದ ಆತ ಮತ್ತು ಸ್ನೇಹಿತರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಿಂದಾಗಿ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಕೆಗೆ ಇನ್ನೆರಡು ಗಂಟೆಯಲ್ಲಿ ಪ್ರಜ್ಞೆ ಮರಳಬಹುದು. ನಂತರ ಘಟನೆಯ ಕುರಿತು ಸಂಪೂರ್ಣ ಮಾಹಿತಿ ದೊರೆಯುವ ಸಾಧ್ಯತೆ ಇದೆ ಎಂದು ರೈಲ್ವೆ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.












Click it and Unblock the Notifications