ಯಶಸ್ವಿಯಾಗಿ ಕಕ್ಷೆ ಸೇರಿದ ಇನ್ಸಾಟ್ 3ಡಿ
ಬೆಂಗಳೂರು, ಜು.26 : ಹವಾಮಾನದ ಬಗ್ಗೆ ಮಾಹಿತಿ ನೀಡಬಲ್ಲ ಭಾರತದ ಸುಧಾರಿತ ಇನ್ಸಾಟ್ 3ಡಿ ಉಪಗ್ರಹವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು, ನಿಯಂತ್ರಣ ಕೇಂದ್ರಕ್ಕೆ ಸಂಕೇತಗಳನ್ನು ಕಳುಹಿಸಲು ಪ್ರಾರಂಭಿಸಿದೆ.
ಫ್ರೆಂಚ್ ಗಯಾನಾದ ಕೌರೋದಲ್ಲಿ ಯೂರೋಪ್ ರಾಕೆಟ್ ಮೂಲಕ ಯಶಸ್ವಿಯಾಗಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಯಿತು. ಶುಕ್ರವಾರ ಭಾರತೀಯ ಕಾಲಮಾನ 1.23ಕ್ಕೆ ಉಪಗ್ರಹ ಉಡಾಯಿಸಿದ್ದು, 33 ನಿಮಿಷಗಳಲ್ಲಿ ಅದು ಕಕ್ಷೆಗೆ ತಲುಪಿದೆ.
ಯೂರೋಪ್‌ನ ಬಾಹ್ಯಾಕಾಶ ಒಕ್ಕೂಟವಾದ ಏರಿಯೇನ್ ಸ್ಪೇಸ್‌ನ ಏರಿಯೇನ್-5 ರಾಕೆಟ್ ಇನ್ಸಾಟ್ -3ಡಿ ಹಾಗೂ ಅಲ್ಫಾಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತು. ಇನ್ಸಾಟ್ 3ಡಿ ಉಪಗ್ರಹ ಹವಾಮಾನ ಮುನ್ಸೂಚನೆ ಮತ್ತು ಪ್ರಕೃತಿ ವಿಕೋಪ ಕುರಿತು, ಎಚ್ಚರಿಕೆ ನೀಡಬಹುದಾದ ಸೇವೆಗಳಿಗೆ ಉತ್ತೇಜನ ನೀಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

"ಕರ್ನಾಟಕದ ಹಾಸನದಲ್ಲಿರುವ ನಿಯಂತ್ರಣ ಕೇಂದ್ರವು ಈಗಾಗಲೇ ಇನ್ಸಾಟ್ 3ಡಿಯಿಂದ ಸಂಕೇತಗಳನ್ನು ಪಡೆಯಲು ಆರಂಭಿಸಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ" ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ರಾಧಾಕೃಷ್ಣನ್ ಘೋಷಿಸಿದ್ದಾರೆ.
ಇಸ್ರೋ ವಿಜ್ಞಾನಿಗಳ ಪ್ರಕಾರ, ಇನ್ಸಾಟ್ 3ಡಿ, ಹವಾಮಾನ ಪರಿಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ನಿರ್ದಿಷ್ಟ ಪ್ರದೇಶದಲ್ಲಿ ತಾಪಮಾನ, ಆರ್ದ್ರತೆ ಮತ್ತು ಓಝೋನ್ ಮುಂತಾದವುಗಳ ಕುರಿತು ಇನ್ಸಾಟ್ 3ಡಿ ಉಪಗ್ರಹವು ಮಾಹಿತಿ ನೀಡಲಿದೆ ಎಂದು ಹೇಳಿದ್ದಾರೆ.












Click it and Unblock the Notifications