ಲೋಕಸಭೆ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸಿದ್ಧ
ಬೆಂಗಳೂರು, ಜು.25 : ಉಡುಪಿ-ಚಿಕ್ಕಮಗಳೂರು ಮರುಚುನಾವಣೆ ಮಾದರಿಯಲ್ಲೇ ಕಾರ್ಯತಂತ್ರ ರೂಪಿಸಿ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಉಪ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಬೇಕು ಎಂದು ಹಿರಿಯ ನಾಯಕರು ಒಕ್ಕೊರಲ ನಿರ್ಣಯ ಕೈಗೊಂಡಿದ್ದಾರೆ.
ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಸಂಭಾವ್ಯರ ಅಭ್ಯರ್ಥಿಗಳ ಆಯ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಯಿತು.
ಎರಡು ಅಥವ ಮೂರು ದಿನದಲ್ಲಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ನಾಯಕರ ಸಮಿತಿ ಅಂತಿಮಗೊಳಿಸಿ, ಹೈ ಕಮಾಂಡ್ ನಾಯಕರಿಗೆ ಕಳುಹಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಪರಿಶೀಲಿಸಿದ ಬಳಿಕ, ದೆಹಲಿಯಲ್ಲಿ ಘೋಷಿಸುವ ಸಾಧ್ಯತೆ ಇದೆ.(ಚುನಾವಣೆ ವೇಳಾಪಟ್ಟಿ)
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಆದ್ದರಿಂದ ಕಾಂಗ್ರೆಸ್ ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಆದ್ದರಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮರು ಚುನಾವಣೆಯ ಕಾರ್ಯತಂತ್ರ ಅನುಸರಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಕಾಂಗ್ರೆಸ್ ಸಭೆಯ ಪ್ರಮುಖ ಅಂಶಗಳು ಹೀಗಿವೆ.

ಎರಡು ಜಿಲ್ಲೆಗಳಿಗೆ ಪ್ರತ್ಯೇಕ ತಂಡ
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಥಳೀಯ ನಾಯಕರ ಎರಡು ತಂಡಗಳನ್ನು ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ತಂಡದ ನೇತೃತ್ವ ವಹಿಸಲಿದ್ದಾರೆ.

ಕೃಷ್ಣ ಮಂತ್ರ ಜಪಿಸಿದ ನಾಯಕರು
ಮಂಡ್ಯ ಜಿಲ್ಲೆಯಲ್ಲಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಚುನಾವಣೆ ಪ್ರಚಾರದ ವರೆಗೆ ಕೃಷ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಸಹ ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿದ್ದಾರೆ.

ಡಿ.ಕೆ.ಶಿವಕುಮಾರ್ ಸಾರಥ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾವಣೆಯನ್ನು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎದುರಿಸಲು ಪಕ್ಷ ನಿರ್ಧರಿಸಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಸಚಿವರಾದ ಟಿ.ಬಿ. ಜಯಚಂದ್ರ, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಶಾಸಕ ಡಿ.ಕೆ. ಶಿವಕುಮಾರ್ ಅವರ ಸಮಿತಿ ಮಾಡಲಿದೆ.

ಮೈತ್ರಿಕೂಟಕ್ಕೆ ಸೆಡ್ಡು
ಮಂಡ್ಯ ಹಾಗೂ ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ ಬಿಜೆಪಿ, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಜೊತೆ ಕೈಜೋಡಿಸಿ ಮೈತ್ರಿಕೂಟ ರಚಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಉಂಟುಮಾಡಬಹುದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಹಾಗೂ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲಾಗಿದೆ.

ಡಿಕೆಶಿಗೆ ಸಿದ್ದರಾಮಯ್ಯ ಸಲಹೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್‌ರನ್ನು ಕಣಕ್ಕಿಳಿಸುವ ಗೊಂದಲಗಳು ಬಗೆಹರಿದಿವೆ. ಅವರನ್ನು ಕಣಕ್ಕಿಳಿಸಲು ಸ್ವತಃ ಶಿವಕುಮಾರ್ ಆಸಕ್ತಿ ತೋರಿಲ್ಲ ಎಂದು ತಿಳಿದು ಬಂದಿದೆ. ನಿಮ್ಮ ರಾಜಕೀಯ ಅನುಭವ ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.

ಸೋನಿಯಾಗಾಂಧಿ ಭೇಟಿ ಮುಂದಕ್ಕೆ
ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಮುಂದೂಡಲಾಗಿದೆ. ಉಪ ಚುನಾವಣೆ ಮುಗಿದ ಬಳಿಕ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ, ಮತದಾರರಿಗೆ ಅಭಿನಂದನೆ ಸಲ್ಲಿಸಲು ಪಕ್ಷ ತೀರ್ಮಾನಿಸಿದೆ.












Click it and Unblock the Notifications