ಮೋದಿಯೇ ಪ್ರಧಾನಿ ಅಭ್ಯರ್ಥಿ, ವೀಸಾ ಕೊಡೀ: ಬಿಜೆಪಿ
ನ್ಯೂಯಾರ್ಕ್, ಜುಲೈ22: ಮುಂದಿನ ಲೋಕಸಭೇ ಚುನಾವಣೆಗೆ ಗುಜರಾತಿನ ಹಾಲಿ ಮುಖ್ಯಮಂತ್ರಿ ನರೆಂದ್ರ ಮೋದಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ- ಇದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸ್ಪಷ್ಟೋಕ್ತಿ.
'ಮೋದಿ ಕೇವಲ ಗುಜರಾತಿನಲ್ಲಷ್ಟೇ ಪ್ರಸಿದ್ಧರಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ ಅಲ್ಲದೆ, ಉತ್ತರದಿಂದ ದಕ್ಷಿಣ- ಪೂರ್ವದಿಂದ ಪಶ್ಚಿಮದ ವರೆಗೆ ಅವರು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರ ಈ ಖ್ಯಾತಿಯೇ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಲಾಭ ತಂದುಕೊಡಲಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಲ್ಲಿ 5 ದಿನಗಳ ಪ್ರವಾಸಕ್ಕಾಗಿ ತೆರಳಿರುವ ರಾಜನಾಥ್, ಸುದ್ದಿಗೋಷ್ಠಿಯಲ್ಲಿ ಹೀಗೆ ಹೇಳಿದ್ದಾರೆ. ಸಿಂಗ್ ಜೊತೆ ಸಂಸದ ಅನಂತ್ ಕುಮಾರ್, ವಿಜಯ್ ಜೋಲಿ ಮತ್ತು ಸುಧಾಂಶು ತ್ರಿವೇದಿ ಇದ್ದಾರೆ.

ಈ ಸಂದರ್ಭದಲ್ಲಿ ನೀವು ಪ್ರಧಾನಿ ಹುದ್ದೆ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸುತ್ತಾ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದರು.
ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ವೀಸಾ ಕೊಡುವಂತೆ ತಮ್ಮ ಹಾಲಿ ಪ್ರವಾಸ ವೇಳೆ ಅಮೆರಿಕ ಸರ್ಕಾರಕ್ಕೆ ಮನವಿ ಮಾಡುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಾಷಿಂಗ್ಟನಿನಲ್ಲಿ ಅಮೆರಿಕ ಸರ್ಕಾರದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅಮೆರಿಕವು 2002ರ ಗೋಧ್ರೋತ್ತರ ಗಲಭೆ ನಂತರ ಮೋದಿಗೆ ವೀಸಾ ನಿರಾಕರಿಸಿದೆ.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುತ್ತಾರೆ. ಸದ್ಯ ದೇಶದ ಎಲ್ಲಾ ಜನರು ಒಪ್ಪುವಂಥ ಏಕೈಕ ನಾಯಕನೆಂದರೆ ಅದು ನರೇಂದ್ರ ಮೋದಿ. ಅವರಿಗಿರುವ ವರ್ಚಸ್ಸು, ಪ್ರಸಿದ್ಧಿ ಮತ್ತು ಪಕ್ಷದ ಮೇಲಿರುವ ಅವರು ಬದ್ಧತೆಯಿಂದಾಗಿಯೇ ತಾವು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಿದ್ದು. ಇದರಲ್ಲಿ ತಪ್ಪೇನೂ ಇಲ್ಲವಲ್ಲ ಎಂದರು.












Click it and Unblock the Notifications