ಮೈಸೂರಿಗೆ ಬರುತ್ತೆ ಪಾಸ್ ಪೋರ್ಟ್ ಸೇವಾ ಕೇಂದ್ರ!

ಪ್ರಾದೇಶಿಕ ಪಾಸ್ ಪೋರ್ಟ್ ಕೇಂದ್ರದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಜಿಲ್ಲೆಯ ರಾಜಕಾರಣಿಗಳು, ಸಂಘಟನೆಗಳು, ನಾಗರೀಕರು ಒಟ್ಟಾಗಿ ಕೈ ಜೋಡಿಸಿದರೆ, ಆರು ತಿಂಗಳಲ್ಲಿ ನಗರದಲ್ಲಿ ಪಾಸ್ ಪೋರ್ಟ್ ಕೇಂದ್ರ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಪಾಸ್ ಪೋರ್ಟ್ ಕೇಂದ್ರದ ಅಧಿಕಾರಿ ಪಿ.ಎಸ್.ಕಾರ್ತಿಗೇಯನ್ ಹೇಳುವಂತೆ, ವಿದೇಶಾಂಗ ಇಲಾಖೆ ದೇಶದ 80 ನಗರಗಳಲ್ಲಿ ನೂತನವಾಗಿ ಪಾಸ್ ಪೋರ್ಟ್ ಸೇವಾಕೇದ್ರ ಆರಂಭಿಸುವ ಕುರಿತು ಚಿಂತನೆ ನಡೆಸಿದೆ.
ಇಲಾಖೆ ಸಿದ್ದಗೊಳಿಸಿರುವ ಪಟ್ಟಿಯಲ್ಲಿ ಮೈಸೂರು ನಗರದ ಹೆಸರು ಇದ್ದು, ಎಲ್ಲವೂ ಅಂದು ಕೊಂಡಂತೆ ನಡೆದರೆ, ಆರು ತಿಂಗಳವೊಳಗೆ ಈ ಯೋಜನೆಗೆ ಅನುಮತಿ ದೊರೆಯಲಿದೆ ಎಂದು ತಿಳಿಸಿದ್ದಾರೆ. (ಪಾಸ್‌ಪೋರ್ಟ್ ಪಡೆಯಲು ಹೊಸ ವ್ಯವಸ್ಥೆ)
ರಾಷ್ಟ್ರೀಯ ಇ-ಆಡಳಿತ ಸಂಸ್ಥೆ ಪಾಸ್ ಪೋರ್ಟ್ ಸೇವಾ ಕೇಂದ್ರ ಅಗತ್ಯವಿರುವ ನಗರಗಳ ಪಟ್ಟಿ ತಯಾರಿಸಿ, ವಿದೇಶಾಂಗ ಇಲಾಖೆಗೆ ನೀಡಿದೆ. ರಾಜ್ಯ ಸರ್ಕಾರಗಳ ಅನುಮತಿ ಪಡೆದು ಕೇಂದ್ರ ಆರಂಭಿಸುವ ಕುರಿತು ಇಲಾಖೆ ನಿರ್ಧರಿಸಲಿದೆ. ಆದ್ದರಿಂದ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದರೆ, ಕೇಂದ್ರ ಆರಂಭವಾಗುವುದು ಖಂಡಿತ.
ಸೆಪ್ಟೆಂಬರ್ ಅಥವ ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮತಿ ನೀಡಬಹುದು ಎಂದು ಕಾರ್ತಿಗೇಯನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವೂ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೆ, ಯೋಜನೆ ಶೀಘ್ರವೇ ಜಾರಿಗಲಿದೆಯಂತೆ.
ಯೋಜನೆ ಕೈ ತಪ್ಪಬಾರದು : ಮೈಸೂರಿನ ಜನಪ್ರತಿನಿಧಿಗಳು ಜಿಲ್ಲೆಗೆ ಪಾಸ್ ಪೋರ್ಟ್ ಕೇಂದ್ರದ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಬೇಕು. ಕೇಂದ್ರದಿಂದ ಯೋಜನೆಗೆ ಅನುಮತಿ ದೊರೆತರೆ ಒಂದು ತಿಂಗಳ ಅವಧಿಯಲ್ಲಿ ನಗರದಲ್ಲಿ ಕೇಂದ್ರ ಉದ್ಘಾಟನೆಯಾಗುವ ಸಾಧ್ಯತೆ ಇದೆ.
ಶೀಘ್ರವೇ ಪಾಸ್ ಪೋರ್ಟ್ ಮೇಳ : ಮೈಸೂರು ನಗರದಲ್ಲಿ ಪಾಸ್ ಪೋರ್ಟ್ ಮೇಳ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ನಗರದಲ್ಲಿ ಪಾಸ್ ಪೋರ್ಟ್ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. ಮೇಳದ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕಾರ್ತಿಗೇಯಯನ್ ಹೇಳಿದ್ದಾರೆ.











Click it and Unblock the Notifications