ಸದ್ದಿಲ್ಲದೇ 50 ಪೈಸೆ ಏರಿತು ಡೀಸೆಲ್ ದರ!

ರೂಪಾಯಿ ಅಪಮೌಲ್ಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಹೆಚ್ಚಾಗಿದ್ದರಿಂದ ತೈಲ ಕಂಪನಿಗಳು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಿವೆ. ನೂತನ ದರದಂತೆ ಲೀಟರ್ ಡೀಸೆಲ್ ಬೆಲೆ 50 ಪೈಸೆ ಹೆಚ್ಚಾಗಿದೆ.
ಇದರಿಂದಾಗಿ ಈ ವರ್ಷದಲ್ಲಿ ಡೀಸೆಲ್ ಬೆಲೆ ಆರನೇ ಬಾರಿ ಹೆಚ್ಚಳವಾದಂತಾಗಿದೆ. ಶನಿವಾರ ಪೆಟ್ರೋಲ್ ಬೆಲೆಯನ್ನು 1.82 ರೂ. ಹೆಚ್ಚಳ ಮಾಡಲಾಗಿತ್ತು. ಆಗಲೇ ಡೀಸೆಲ್ ದರ ಹೆಚ್ಚಾಗುವ ಸುಳಿವು ಸಿಕ್ಕಿತ್ತು. ಸೋಮವಾರ ಐವತ್ತು ಪೈಸೆ ದರ ಹೆಚ್ಚಳವಾಗಿದೆ.
ನೂತನ ದರದ ಅನ್ವಯ ದೆಹಲಿಯಲ್ಲಿ ಡೀಸೆಲ್ ದರ 50.84 ರೂ., ಕೋಲ್ಕತ್ತಾದಲ್ಲಿ 55.16 ರೂ., ಮುಂಬೈನಲ್ಲಿ 57.16ರೂ., ಚೆನ್ನೈನಲ್ಲಿ 54.15ರೂ. ನಿಗದಿ ಪಡಿಸಲಾಗಿದೆ. ಕಳೆದ ಜನವರಿಯಲ್ಲಿ ಡೀಸೆಲ್ ಬೆಲೆಯನ್ನು ಪ್ರತಿ ತಿಂಗಳು 50 ಪೈಸೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಅವಕಾಶ ನೀಡಿತ್ತು.
ಪ್ರಯಾಣದರ ಏರಿಕೆ ಇಲ್ಲ : ಡೀಸೆಲ್ ದರ ಹೆಚ್ಚಾದರೂ ರೈಲ್ವೆ ಪ್ರಯಾಣದರವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಡೀಸೆಲ್ ದರ ಹೆಚ್ಚಳದ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ವರ್ಗಾಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. (ಪೆಟ್ರೋಲ್ ಬೆಲೆ ಯಾವಾಗ ಏರಿಸಿದ್ರು, ಗೊತ್ತೇ ಆಗ್ಲಿಲ್ಲ)












Click it and Unblock the Notifications