ಉತ್ತರಾಖಂಡಕ್ಕೆ ಬೆಂಗಳೂರಿನ ಹ್ಯಾಮ್ ರೇಡಿಯೋ ತಂಡ

ಬೆಂಗಳೂರು, ಜು. 2 : ಉತ್ತರಾಖಂಡದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರ ದೊರಕಿಸಿಕೊಡುವ ಮತ್ತು ಕಾಣೆಯಾಗಿರುವ ಸಾವಿರಾರು ಜನರನ್ನು ಹುಡುಕುವ ಕೆಲಸದಲ್ಲಿ ಸಹಾಯ ನೀಡುವ ಉದ್ದೇಶದಿಂದ ಹ್ಯಾಮ್ ರೇಡಿಯೋದಲ್ಲಿ ವಿಶೇಷ ಪರಿಣತಿ ಪಡೆದಿರುವ ತಂಡ ಬೆಂಗಳೂರಿನಿಂದ ಉತ್ತರಾಖಂಡಕ್ಕೆ ಜು.2ರ ಸಂಜೆ ತೆರಳಲಿದೆ.

ಸಂಜೆ 8.20ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಹೊರಡಲಿರುವ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂವರು ಹ್ಯಾಮ್ ಆಪರೇಟರುಗಳಿರುವ ಎರಡನೇ ತಂಡ ಪಯಣ ಬೆಳೆಸಲಿದೆ. ತಂಡದಲ್ಲಿರುವವರು ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿರುವ ಗಿರೀಶ್ ದಾಸ್, ವಿಶ್ವಾಸ್ ಕೃಷ್ಣಮೂರ್ತಿ ಮತ್ತು ಸಿವಿಲ್ ಇಂಜಿನಿಯರ್ ರಾಹುಲ್ ರವಿಶಂಕರ್.

ಈ ಮೂವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಮ್ಸ್‌ನ ಸದಸ್ಯರಾಗಿದ್ದಾರೆ. ಈ ಸಂಸ್ಥೆ ಹೈದರಾಬಾದ್ ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಮೆಚೂರ್ ರೇಡಿಯೋದ ಅಧೀನ ಸಂಸ್ಥೆಯಾಗಿದೆ. ಇವರು ಕ್ಷಣಾರ್ಧದಲ್ಲಿ ಹ್ಯಾಮ್ ರೇಡಿಯೋ ಮುಖಾಂತರ ಇಡೀ ಜಗತ್ತಿನ ಸಂಪರ್ಕ ಸಾಧಿಸುವಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಅವರು ಗುಜರಾತ್ ಭೂಕಂಪ ಮತ್ತು ಸುನಾಮಿ ಸಮಯದಲ್ಲಿಯೂ ನೆರವಿನ ಹಸ್ತ ಚಾಚಿದ್ದರು.

ಡೆಹ್ರಾಡೂನ್ ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ನಿರ್ದೇಶನದಂತೆ ಸಂಪರ್ಕ ಸಾಧಿಸಿ ಹ್ಯಾಮ್ ರೇಡಿಯೋ ತಂಡ ಪರಿಹಾರ ಕಾರ್ಯದಲ್ಲಿ ತೊಡಗಲಿದೆ. ಪ್ರವಾಹಪೀಡಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಮೆಡಿಕಲ್ ಕ್ಯಾಂಪ್, ಸಂತ್ರಸ್ತರಿಗೆ ಆಹಾರ ಸಾಗಾಟ ಮತ್ತು ಇನ್ನಿತರ ಕೆಲಸಗಳಲ್ಲಿ ಹ್ಯಾಮ್ ರೇಡಿಯೋ ತಂಡ ಸಹಕಾರ ನೀಡಲಿದೆ.

ಈ ಸ್ಥಳಗಳಲ್ಲಿ ಮೊಬೈಲ್ ಮತ್ತು ಸ್ಯಾಟಲೈಟ್ ಫೋನ್ ಗಳು ಕಾರ್ಯನಿರ್ವಹಿಸುತ್ತಿದ್ದರೂ, ಸೆಕೆಂಡ್ ಲೈನ್ ಸಂಪರ್ಕ ಸಾಧಕ ಎಂದು ಕರೆಯಲಾಗುವ ಹ್ಯಾಮ್ ರೇಡಿಯೋ ಹೆಚ್ಚುವರಿ ನೆರವನ್ನೂ ನೀಡಲಿವೆ ಮತ್ತು ಮಹತ್ವದ, ತ್ವರಿತ ಮಾಹಿತಿ ರವಾನಿಸುವಲ್ಲಿ ಸಹಕಾರಿಯಾಗಲಿವೆ. ಕೆಲ ಬಾರಿ ಮೊಬೈಲ್ ಟವರ್ ಹೆಚ್ಚಿಗೆ ಲೋಡ ತೆಗೆದುಕೊಂಡು ನಿಷ್ಕ್ರಿಯವಾದಾಗ ಮತ್ತು ಸಂತ್ರಸ್ತರನ್ನು ಸಂಪರ್ಕಿಸಲು ಸ್ಯಾಟಲೈಟ್ ಫೋನ್ ವಿಫಲವಾದಾಗ ಹ್ಯಾಮ್ ರೇಡಿಯೋ ಸಂಪರ್ಕ ಸಾಧಿಸಲು ಸಶಕ್ತವಾಗಿರುತ್ತವೆ.

ಈಗಾಗಲೆ ರಕ್ಷಣಾಕಾರ್ಯ ಮುಕ್ತಾಯವಾಗಿ ಸಂತ್ರಸ್ತರನ್ನು ರಕ್ಷಿಸಲಾಗಿದ್ದರೂ ಇನ್ನೂ ಸಾವಿರಾರು ಪ್ರವಾಸಿಗರು ಕಾಣೆಯಾಗಿದ್ದಾರೆ. ಕರ್ನಾಟಕದ ಮಂಡ್ಯ ಮತ್ತು ಮದ್ದೂರಿನ 16 ಪ್ರವಾಸಿಗ ಪತ್ತೆ ಇನ್ನೂ ಸಿಕ್ಕಿಲ್ಲ. ಅವರನ್ನು ಪತ್ತೆ ಹಚ್ಚುವಲ್ಲಿ ಹ್ಯಾಮ್ ರೇಡಿಯೋ ನೆರವಾಗಲಿದೆ. ಸ್ವಯಂಸೇವಕರಾಗಿ ಉತ್ತರಾಖಂಡಕ್ಕೆ ತೆರಳುತ್ತಿರುವ ಹ್ಯಾಮ್ ರೇಡಿಯೋ ತಂಡಕ್ಕೆ ಶುಭಕೋರೋಣ.

ಹ್ಯಾಮ್ ಕಚೇರಿ ಬೆಂಗಳೂರಿನ ವಿಳಾಸ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಹ್ಯಾಮ್ಸ್, 2ನೇ ಮಹಡಿ, ಗೇಟ್ ನಂ.2, ಶ್ರೀ ಕಂಠೀರವ ಹೊರಾಂಗಣ ಸ್ಟೇಡಿಯಂ, ಕಸ್ತೂರಬಾ ರಸ್ತೆ, ಬೆಂಗಳೂರು - 560 001. ಈಮೇಲ್ ವಿಳಾಸ : [email protected]. ವೆಬ್ ಸೈಟ್ ವಿಳಾಸ : www.indianhams.com. ದೂರವಾಣಿ ಸಂಖ್ಯೆ : 080- 26664501.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+