ಬಿಎಸ್‌ವೈರಿಂದ ಪ್ರಸ್ತಾಪ ಬಂದ್ರೆ ಮಾತ್ರ ಪರಿಶೀಲನೆ!

Proposal has to come from Yeddyurappa : Thawar Chand Gelhot
ಬೆಂಗಳೂರು, ಜೂ. 28 : "ಬಿಜೆಪಿಯಿಂದ ಸಿಡಿದುಹೋಗಿ ಹೊಸ ಪಕ್ಷ ಕಟ್ಟಿರುವ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಸೇರಿಕೊಳ್ಳುವ ಬಗ್ಗೆ ಅವರಿಂದ ಯಾವುದೇ ಪ್ರಸ್ತಾಪ ಬಂದಿಲ್ಲ. ಅವರಿಂದಲೇ ಪ್ರಸ್ತಾಪ ಬಂದರೆ ಮಾತ್ರ ಪರಿಗಣಿಸುವುದೋ ಬೇಡವೋ ಎಂಬುದನ್ನು ತೀರ್ಮಾನಿಸಲಾಗುವುದು" ಎಂದು ಕರ್ನಾಟಕ ಬಿಜೆಪಿಯ ಉಸ್ತುವಾರಿ ವಹಿಸಿರುವ ತಾವರಚಂದ್ ಗೆಹ್ಲೋಟ್ ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ತಾವರಚಂದ್ ಗೆಹ್ಲೋಟ್ ಅವರು ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ ನಂತರ ಮೇಲಿನಂತೆ ಹೇಳಿಕೆ ನೀಡಿದ್ದಾರೆ. "ಯಡಿಯೂರಪ್ಪ ಅವರು ತಾವೇ ಸ್ವತಃ ಬಿಜೆಪಿ ಬಿಟ್ಟಿದ್ದರು. ಈಗ ಅವರಿಂದಲೇ ಪಕ್ಷಕ್ಕೆ ಮರಳುವ ಬಗ್ಗೆ ಪ್ರಸ್ತಾವನೆ ಬರಬೇಕು. ಅದು ಬಂದನಂತರವಷ್ಟೇ ಬಿಜೆಪಿ ಸಂದದೀಯ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ" ಎಂದು ಅವರು ಸಭೆಯ ನಂತರ ಪತ್ರಕರ್ತರಿಗೆ ತಿಳಿಸಿದರು.

"ಯಡಿಯೂರಪ್ಪನವರನ್ನು ಬಿಜೆಪಿ ಮರಳಿ ತರುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ಅವರನ್ನು ಮರಳಿ ಕರೆಯಿಸಿಕೊಳ್ಳುವ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿಯೂ ಚರ್ಚೆಯಾಯಿತು. ಆದರೆ, ಅವರೇ ಪಕ್ಷ ಬಿಟ್ಟು ಹೋದವರು, ಅವರೇ ಮರಳಿ ಬರುವ ಬಗ್ಗೆ ಪ್ರಸ್ತಾಪ ಮಾಡಲಿ" ಎಂದು ಹೇಳಿ ಚೆಂಡನ್ನು ಈಗ ಯಡಿಯೂರಪ್ಪ ಅಂಗಳದಲ್ಲಿ ಚೆಲ್ಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್ ಅಶೋಕ್, ಕೆ.ಎಸ್. ಈಶ್ವರಪ್ಪ ಮುಂತಾದ ಹಿರಿಯ ನಾಯಕರು ಭಾಗವಹಿಸಿದ್ದರು.

ಹಾವೂ ಸಾಯಬಾರದು, ಕೋಲೂ ಮುರಿಯಬಾರದು : ಮಾಜಿ ಮುಖ್ಯಮಂತ್ರಿ, ಕರ್ನಾಟಕ ಜನತಾ ಪಕ್ಷದ ಅಧಿನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವ ವಿಷಯ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. ಬಿಜೆಪಿ ಮತ್ತು ಕೆಜೆಪಿ ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಡಿಯೂರಪ್ಪನವರಿಂದಲೇ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಡಿ.ವಿ. ಸದಾನಂದ ಗೌಡರಂಥವರೇ ಯಡಿಯೂರಪ್ಪನವರನ್ನು ವಾಪಸ್ ಕರೆಯಿಸುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಜೊತೆಗೆ, ಡಿ.ಬಿ. ಚಂದ್ರೇಗೌಡ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮುಂತಾದವರು ಕೂಡ ಆಸಕ್ತಿ ತೋರುತ್ತಿದ್ದಾರೆ. ಆದರೆ, ಈ ಕುರಿತು ಯಡಿಯೂರಪ್ಪ ಪ್ರಸ್ತಾಪ ಮಾಡುವುದೂ ಇಲ್ಲ, ಹೀಗೇ ಕಠಿಣ ನಿಲುವು ತಳೆದರೆ ಬಿಎಸ್ ವೈ ಮರಳಿ ಬರುವುದೂ ಇಲ್ಲ ಎಂಬುದು ಹಲವರಿಗೆ ಮನವರಿಕೆಯಾಗಿದೆ.

ಪ್ರತಿಷ್ಠೆಯ ಪ್ರಶ್ನೆ : ಇದು ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದು ಮಾತ್ರವಲ್ಲ, ಯಡಿಯೂರಪ್ಪನವರಿಗೆ ಕೂಡ ಸಂದಿಗ್ಧತೆಗೆ ತಳ್ಳಿದೆ. ಪಕ್ಷ ಬಿಟ್ಟುಬಂದ ನಂತರ ಕೆಜೆಪಿ ಕಟ್ಟಿದ ನಂತರ ಬಿಜೆಪಿಯನ್ನು ಅವರು ಬಹಿರಂಗವಾಗಿ ಸಾಕಷ್ಟು ಟೀಕಿಸಿದ್ದಾರೆ, ಅಲ್ಲಿನ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೆ ಮರಳಿ ಹೋಗುವುದು ಹೇಗೆ? ಹೋದರೆ ಎಲ್ಲರೂ ಸ್ವೀಕರಿಸುವರೆ ಎಂಬ ಪ್ರಶ್ನೆಗಳು ಅವರಿಗೂ ಎದುರಾಗಿವೆ.

ತಾವು ಬಿಜೆಪಿಗೆ ವಾಪಸ್ ಹೋಗುವ ಮಾತೇ ಇಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಅದು ಕನಸಿನ ಮಾತು. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಿಜೆಪಿಗೆ ಹೋಗುವುದೂ ಇಲ್ಲ, ಹೊಂದಾಣಿಕೆ ಮಾಡಿಕೊಳ್ಳುವುದೂ ಇಲ್ಲ ಎಂದು ಕಡ್ಡಿಮುರಿದಂತೆ ಶುಕ್ರವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಮತ್ತು ಕೆಜೆಪಿ ಸೇರ್ಪಡೆಯಾಗಲಿವೆ ಎಂದು ಧನಂಜಯ್ ಕುಮಾರ್ ಅವರು ಹೇಳಿ ಈ ತಾಕಲಾಟಕ್ಕೆ ಕಿಡಿ ಹಚ್ಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+