ಪೆಟ್ರೋಲ್ ಬೆಲೆ ಯಾವಾಗ ಏರಿಸಿದ್ರು, ಗೊತ್ತೇ ಆಗ್ಲಿಲ್ಲ

ಈ ರೀತಿ ಪ್ರಶ್ನೆಗಳ ಸುರಿಮಳೆಗಳನ್ನೇ ನಾಗರಭಾವಿ ಪೆಟ್ರೋಲ್ ಬಂಕಿನಲ್ಲಿ ಸುರಿಸಿದ್ದು ಓರ್ವ ಗ್ರಾಹಕ. ಆತನ ಮಾತುಗಳಲ್ಲಿ ಸಿಟ್ಟು, ದುಗುಡ, ಬೇಸರ, ಅಸಹಾಯಕತೆ ಎಲ್ಲ ಇಣುಕುತ್ತಿತ್ತು. ಆದರೆ, ಬೈಕಿಗೆ ಪೆಟ್ರೋಲ್ ತುಂಬಿಸಿಕೊಳ್ಳದೆ ಗತ್ಯಂತರವೇ ಇರಲಿಲ್ಲ. ಪೆಟ್ರೋಲ್ ಬಂಕ್ ಕೆಲಸಗಾರ, ಯಾಕ್ಸಾ ಪೇಪರಲ್ಲಿ ಬಂದಿದೆಯಲ್ಲ ಅಂತ ಆತ ಹೇಳಿದಷ್ಟು ಪೆಟ್ರೋಲ್ ತುಂಬಿಸಿದ.
ಇದು ಆ ಒಬ್ಬ ಗ್ರಾಹಕ ಅನುಭವಿಸಿದ ಸಂಕಟವಲ್ಲ. ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಜನರು, ಪೆಟ್ರೋಲ್ ಹಾಕಿಸುವುದೋ ಅಥವಾ ಬಸ್ಸಲ್ಲಿ ಸಂಚರಿಸುವುದೋ ಅಥವಾ ನಡೆದುಕೊಂಡೇ ಅಡ್ಡಾಡುವುದೋ ಎಂಬ ತೀರ್ಮಾನಕ್ಕೆ ಬರದೆ ಗೊಂದಲದಲ್ಲಿದ್ದಾರೆ. ಯಸ್, ಈ ಬಾರಿ ಪೆಟ್ರೋಲ್ ಮಾಲೀಕರು ಹೇಳದೆ ಕೇಳದೆ ಸದ್ದಿಲ್ಲದೆ ಗ್ರಾಹಕರಿಗೆ ಹೊಡೆತ ನೀಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಬರಸಿಡಿಲಿನಂತೆ ಬಂದೆರಗಿದೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರ ಮಧ್ಯರಾತ್ರಿ ಜಾರಿಗೆ ಬರುವಂತೆ ಪೆಟ್ರೋಲನ್ನು ಲೀಟರಿಗೆ 1.82 ರು.ನಷ್ಟು ಹೆಚ್ಚಿಸಿದ್ದಾರೆ. ಮೌಲ್ಯ ವರ್ಧಿತ ತೆರಿಗೆ ಮತ್ತು ಕರ್ನಾಟಕ ಹೇರುವ ಪ್ರವೇಶ ತೆರಿಗೆ ಸೇರಿದಂತೆ ಬೆಂಗಳೂರಿನಲ್ಲಿ ಲೀಟಲಿರೆ 2.45 ರು.ನಷ್ಟು ಬೆಲೆಯಲ್ಲಿ ಏರಿಕೆಯಾಗಿದೆ. ಗ್ರಾಹಕರು ಬಾಯಿಮುಚ್ಚಿಕೊಂಡು ಬೆಲೆಯನ್ನು ತೆತ್ತುತ್ತಿದ್ದಾರೆ.
ಅಂದ ಹಾಗೆ, ಇದು ಜೂನ್ ತಿಂಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಬೆಲೆಯನ್ನು ಏರಿಸಿರುವುದು. ಮುಂದಿನ ವಾರ ಮತ್ತೊಂದು ಶಾಕ್ ಗ್ರಾಹಕರಿಗೆ ಸಿಗಲಿದೆ. ಅದೇನೆಂದರೆ, ಡೀಸೆಲ್ ಕೂಡ ಲೀಟರಿಗೆ 40ರಿಂದ 50 ಪೈಸೆಯಷ್ಟು ಏರಿಕೆಯಾಗಲಿದೆ. ಗೋವಿಂದಾ ಗೋವಿಂದ! ಡೀಸೆಲ್ ಮೇಲೆ ಪ್ರತಿ ಲೀಟರಿಗೆ 8 ರು.ನಷ್ಟು ನಷ್ಟವಾಗುತ್ತಿದೆ ಎಂದು ತೈಲ ಕಂಪನಿಗಳು ಕಣ್ಣೀರುಗರೆದಿವೆ.
ಇದೆಲ್ಲಕ್ಕೆ ಕಾರಣ ಡಾಲರ್‌ಗೆ ಪ್ರತಿಯಾಗಿ ರುಪಾಯಿಯ ಮೌಲ್ಯ ಕುಸಿಯುತ್ತಿರುವುದು. ಚಿನ್ನದ ಬೆಲೆ ಒಂದು ಕಡೆ ಇಳಿಕೆಯಾಗಿ ಗ್ರಾಹಕರಿಗೆ ಸಂತಸ ತಂದಿದ್ದರೆ, ಪೆಟ್ರೋಲ್, ಡೀಸೆಲ್ ದರಗಳು ಏರುಮುಖವಾಗಿರುವುದು ದುಗುಡ ತಂದಿದೆ. ಏಕೆಂದರೆ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಲವು ಹತ್ತುಕಡೆಗಳಿಂದ ಹೊಡೆತ ನೀಡುತ್ತದೆ.
ಹಣ್ಣು, ತರಕಾರಿ, ದಿನಸಿ ಪದಾರ್ಥಗಳು, ಸಾಗಾಟ, ಪ್ರಯಾಣ ಮುಂತಾದ ಎಲ್ಲವುಗಳ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಪ್ರತಿ ತಿಂಗಳು ಹಾಕುತ್ತಿದ್ದ ಬಜೆಟ್ಟು ಲೆಕ್ಕಕ್ಕೇ ಸಿಗದಂತಾಗಿದೆ. ತಿಂಗಳ ಮೊದಲಿಗೆ ಹಾಕಿದ್ದೇ ಒಂದು, ತಿಂಗಳ ಕೊನೆಯಲ್ಲಿ ಆಗಿದ್ದೇ ಮತ್ತೊಂದು ಎಂಬಂತಾಗಿದೆ. [ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆ]


Click it and Unblock the Notifications
