ದೊರೆಯುತ್ತಿದೆ ನಕಲಿ ಆಧಾರ್ ಕಾರ್ಡ್, ಎಚ್ಚರ

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಯುಐಡಿಎಐ ಕರ್ನಾಟಕ ವಿಭಾಗದ ನಿರ್ದೇಶಕ ಅಶೋಕ್ ದಿಲ್ವಾಯಿ, ಬೆಂಗಳೂರಿನಲ್ಲಿ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ನಕಲಿ ಗುರುತಿನ ಚೀಟಿ ನೀಡುತ್ತಿರುವ ಬಗ್ಗೆ ಸಂಸ್ಥೆಗೆ ದೂರುಗಳು ಬಂದಿವೆ ಎಂದರು. ನಕಲಿ ಕಾರ್ಡ್ ನೀಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಹಲವಾರು ದೂರುಗಳು ಸಂಸ್ಥೆ ಬಂದಿವೆ, ಅವುಗಳನ್ನು ಪರಿಶೀಲಿಸಲಾಗಿದೆ. ನಕಲಿ ಆಧಾರ್ ಕಾರ್ಡ್ ನೀಡುವ ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ನಿಗದಿತ ಕೇಂದ್ರದಲ್ಲಿ ಮಾತ್ರ ಆಧಾರ್ ನೋಂದಣಿ ಮಾಡಿಸಬೇಕು ಎಂದು ಅಶೋಕ್ ಸಲಹೆ ನೀಡಿದ್ದಾರೆ.
ಕಾರಣವೇನು : ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಇದರಿಂದಾಗಿ ಲಕ್ಷಾಂತರ ಜನರು ಆಧಾರ್ ಕಾರ್ಡ್ ಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನು ದುರುಪಯೋಗ ಪಡಿಸಿಕೊಂಡು, ನಕಲಿ ಆಧಾರ್ ಕಾರ್ಡ್ ವಿತರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಡುತ್ತೇವೆ ಎಂದು ಕೆಲವು ಸಂಸ್ಥೆಗಳು ಜನರಿಂದ ಹಣವನ್ನು ಪಡೆಯುತ್ತಿವೆ. ನಂತರ ನಕಲಿ ಕಾರ್ಡ್ ನೀಡುತ್ತಿವೆ. ಇಂತಹ ಪ್ರಕರಣಗಳು ನಗರದಲ್ಲಿ ಪತ್ತೆಯಾಗಿದ್ದು, ಈ ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಎಷ್ಟು ಕಾರ್ಡ್ ಹಂಚಿಕೆಯಾಗಿದೆ : ನಗರದಲ್ಲಿ ಒಟ್ಟು 45 ಲಕ್ಷ ಜನರು ಆಧಾರ್ ಕಾರ್ಡ್ ಪಡೆಯಲು ನೋಂದಣಿ ಮಾಡಿಸಿದ್ದಾರೆ. ಇವರಲ್ಲಿ 28 ಲಕ್ಷ ಜನರಿಗೆ ಕಾರ್ಡ್ ವಿತರಿಸಲಾಗಿದೆ. ನಕಲಿ ಕಾರ್ಡ್ ಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಯುಐಡಿಎಐ ಅಧಿಕಾರಿಗಳು ಹೇಳಿದ್ದಾರೆ.
ಜನರು ಏನು ಮಾಡಬೇಕು : ಆಧಾರ್ ಕಾರ್ಡ್ ಗಾಗಿ ನೋಂದಣಿ ಮಾಡಿಸಿ ಕಾರ್ಡ್ ದೊರೆಯದ ಸಾರ್ವಜನಿಕರು ಸಂಸ್ಥೆಯ http://uidai.gov.in/ ವೆಬ್ ಸೈಟ್ ಗೆ ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಈ ಆಧಾರ್ ಕಾರ್ಡ್ ಪಡೆಯಬಹುದು.
ತಮ್ಮ ಆಧಾರ್ ಕಾರ್ಡ್ ಗಳಲ್ಲಿ ತಪ್ಪುಗಳಿದ್ದರೆ, ಆನ್ ಲೈನ್ ಮೂಲಕ ಅವುಗಳನ್ನು ಸರಿಪಡಿಸಬಹುದಾಗಿದೆ. ನೀವು ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿದರೂ 48 ಗಂಟೆಗಳವೊಳಗೆ ತಪ್ಪುಗಳನ್ನು ಸರಿಮಾಡಿ, ಹೊಸ ಕಾರ್ಡ್ ನೀಡಲಾಗುತ್ತದೆ ಎಂದು ಅಶೋಕ್ ಹೇಳಿದ್ದಾರೆ. (ಆನ್ ಲೈನ್: ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಹೇಗೆ)












Click it and Unblock the Notifications