ಕೆಆರ್ಎಸ್ ಗೆ ಎಷ್ಟು ನೀರು ಬಂತು ಗೊತ್ತಾ?

ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್ಎಸ್ ಜಲಾಶಯಕ್ಕೆ ನಿಧಾನವಾಗಿ ನೀರು ಹರಿದು ಬರುತ್ತಿದೆ. ಕಳೆದ ಮೂರು ದಿನಗಳಿಂದ ಕೆಆರ್ಎಸ್ ಜಲಾಶಯಕ್ಕೆ 5000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು ಕೇವಲ 917 ಕ್ಯೂಸೆಕ್ ಆಗಿದೆ.
ದಾಖಲೆಯ ಕುಸಿತ ಕಂಡಿದ್ದ ಕೆಆರ್ಎಸ್ ಜಲಾಶಯವ ಭಾನುವಾರದ ನೀರಿನ ಮಟ್ಟ 66.85 ಅಡಿಗಳಾಗಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂನಲ್ಲಿ 72.32 ಅಡಿ ನೀರು ಸಂಗ್ರಹವಾಗಿತ್ತು. ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ( KRS ದಾಖಲೆ: ಪಾತಾಳ ಕಚ್ಚಿದ ಕಾವೇರಿ ನೀರು )
ಹೇಮಾವತಿ ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಕೊಡಗು, ಮೂಡುಬಿದಿರೆ, ಪಶ್ಚಿಮಘಟ್ಟ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತಿದ್ದು, ಭಾನುವಾರ ಹೇಮಾವತಿ ಜಲಾಶಯದ ಒಳ ಹರಿವು 5 ಸಾವಿರ ಕ್ಯುಸೆಕ್ ತಲುಪಿದೆ. ಒಂದೇ ದಿನದಲ್ಲಿ ಹೇಮಾವತಿ ಜಲಾಶಯದ ನೀರಿನ ಮಟ್ಟ ಎರಡು ಅಡಿಗಳಷ್ಟು ಏರಿಕೆಯಾಗಿದೆ.
ಕೇರಳ ರಾಜ್ಯಗಳಲ್ಲೂ ಹೆಚ್ಚಿನ ಮಳೆ ಸುರಿಯುತ್ತಿದ್ದು, ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಒಂದು ದಿನದಲ್ಲಿ 5 ಅಡಿ ಏರಿಕೆ ಆಗಿದೆ. 11,000 ಕ್ಯುಸೆಕ್ ಒಳಹರಿವು ಹರಿದು ಬರುತ್ತಿದೆ.
ಮಡಿಕೇರಿ, ಭಾಗಮಂಡಲ, ನಾಪೊಕ್ಲು ಮುಂತಾದ ಸ್ಥಳಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಭಾನುವಾರ ಜಿಲ್ಲೆಯಲ್ಲಿ 63.87 ಮಿ.ಮೀ ಮಳೆಯಾಗಿದ್ದು, ಹಾರಂಗಿ ಜಲಾಶಯದಲ್ಲಿ 2,589 ಅಡಿ ನೀರು ಸಂಗ್ರಹಣೆಯಾಗಿದೆ. ಜಲಾಶಯದಲ್ಲಿ 2813.76 ಅಡಿ ನೀರು ಸಂಗ್ರಹಿಸಬಹುದಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ, ತಮಿಳುನಾಡಿಗೆ ಕಾವೇರಿ ನೀರು ಹರಿಸಿ, ಬೆಂಗಳೂರು, ಮೈಸೂರು ಸೇರಿದಂತೆ ಕಾವೇರಿ ನೀರು ಅವಲಂಬಿಸಿರುವ ಜಿಲ್ಲೆಗಳು ನೀರಿನ ಕೊರತೆ ಎದುರಿಸುತ್ತಿದ್ದವು. ಸದ್ಯ ಉತ್ತಮ ಮಳೆಯಾಗುತ್ತಿದ್ದು, ಬೇಗ ಡ್ಯಾಂಗಳು ತುಂಬಿ ನೀರಿನ ಕೊರತೆ ಕಾಡದಿರಲಿ ಎಂದು ಮನವಿ ಮಾಡೋಣ.












Click it and Unblock the Notifications