ಕುವೈತ್: ವಿದೇಶಿಯರಿಗೆ ಬೆಳಗ್ಗೆ 'ನೋ' ಚಿಕಿತ್ಸೆ

ಬೆಳಗ್ಗಿನ ಹೊತ್ತು ವಿದೇಶೀಯರು ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಕುವೈತ್ ನಿಷೇಧಿಸಿದೆ. ನೂತನ ನಿಯಮವನ್ನು ಕುವೈತ್ ಸರಕಾರ ಕುವೈತ್ ನಗರದ ಪಶ್ಚಿಮದ ಜಹ್ರಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರವಿವಾರದಿಂದ ಆರು ತಿಂಗಳ ಕಾಲ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿದೆ. ಆದರೆ, ಇದನ್ನು ಸಾಮಾಜಿಕ ಕಾರ್ಯಕರ್ತರು 'ಜನಾಂಗೀಯವಾದಿ ಕ್ರಮ' ಎಂದು ವಿರೋಧಿಸಿದ್ದಾರೆ.
ಇದು ಯಶಸ್ವಿಯಾದರೆ ಈ ನಿಯಮವನ್ನು ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜಾರಿಗೆ ತರಲಾಗುವುದು. ಇದಕ್ಕೆ ಸಂಬಂಧಿಸಿದ ಯೋಜನೆಯನ್ನು ಆರೋಗ್ಯ ಸಚಿವ ಮುಹಮ್ಮದ್ ಅಲ್-ಹೈಫಿ ಕಳೆದ ತಿಂಗಳು ಪ್ರಕಟಿಸಿದ್ದರು. ಈ ಯೋಜನೆಯ ಪ್ರಕಾರ, ವಿದೇಶೀಯರು ಸರ್ಕಾರಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಸಂಜೆಯ ಹೊತ್ತು ಮಾತ್ರ ಚಿಕಿತ್ಸೆ ಪಡೆಯಬಹುದಾಗಿದೆ.
ಜನಜಂಗುಳಿ ತಪ್ಪಿಸಲು ಈ ಕ್ರಮ: ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಜಂಗುಳಿಯನ್ನು ತಪ್ಪಿಸಲು ರೂಪಿಸಲಾದ ಕ್ರಮವಾಗಿದೆ ಎಂಬುದಾಗಿ ಕುವೈತ್ ಆರೋಗ್ಯ ಸಚಿವಾಲಯ ಸಮರ್ಥನೆ ನೀಡಿದೆ. 'ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಜನಜಂಗುಳಿಯನ್ನು ನಿವಾರಿಸುವ ಉದ್ದೇಶದಿಂದ ನೂತನ ನಿಯಮಗಳನ್ನು ಜಾರಿಗೆ ತರಲಾಗಿದೆ' ಎಂದು ಹೇಳಿಕೆ ನೀಡಿದೆ.
ಆರೋಗ್ಯ ಸಚಿವಾಲಯವು ತನ್ನ ಪ್ರಜೆಗಳು ಹಾಗೂ ವಿದೇಶೀಯರಿಗೆ ಉನ್ನತ ಆರೋಗ್ಯ ಸೇವೆ ನೀಡುವುದನ್ನು ಮುಂದುವರಿಸಲಿದೆ ಎಂದು ಆರೋಗ್ಯ ಸಚಿವರನ್ನು ಉಲ್ಲೇಖಿಸಿ ಹೇಳಿಕೆ ತಿಳಿಸಿದೆ. ಇತರ ಎಲ್ಲ ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಿಕಿತ್ಸೆಗಳನ್ನು ಎಲ್ಲ ನಾಗರಿಕರು ಮತ್ತು ನಿವಾಸಿಗಳಿಗೆ ಎಲ್ಲ ಸಮಯದಲ್ಲಿ ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಜನಜಂಗುಳಿ ಸಮಸ್ಯೆಯನ್ನು ನಿವಾರಿಸಲು 1,100 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆಯ ನಿರ್ಮಾಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂಬುದಾಗಿಯೂ ಆರೋಗ್ಯ ಸಚಿವರು ಹೇಳಿದ್ದಾರೆ.
ಕುವೈತಿನಲ್ಲಿ ಸುಮಾರು 2.6 ಮಿಲಿಯನ್ ವಿದೇಶಿಯರಿದ್ದಾರೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಫೈನ್ಸ್, ಈಜಿಪ್ಟ್ ಹಾಗೂ ಸಿರಿಯಾ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಲ ನಿವಾಸಿಗಳ ಸಂಖ್ಯೆ 1.2 ಮಿಲಿಯನ್ ನಷ್ಟಿದೆ.
ಕುವೈತಿನಲ್ಲಿ ಎಲ್ಲರಿಗೂ ಆರೊಗ್ಯ ಸೇವೆ ಲಭ್ಯವಿದರೂ ವಿದೇಶಿಯರು ವಾರ್ಷಿಕವಾಗಿ 175 ಯುಎಸ್ ಡಾಲರ್ ಕಡ್ಡಾಯವಾಗಿ ಪಾವತಿಸಬೇಕು. ಜೊತೆಗೆ ಎಕ್ಸ್ ರೇ ಇನ್ನಿತರ ಲ್ಯಾಬ್ ಸಂಬಂಧಿತ ಚಿಕಿತ್ಸೆಗಳಿಗೆ ಪ್ರತ್ಯೇಕ ವೆಚ್ಚ ನೀಡಬೇಕಾಗುತ್ತದೆ.
ಇದೇ ರೀತಿ ನಿಯಮಗಳು ಟ್ರಾಫಿಕ್ ಇಲಾಖೆ ಸೇರಿದಂತೆ ಹಲವು ಕಡೆ ಅನುಸರಿಸಲಾಗುತ್ತದೆ. ವಿದೇಶಿಯರನ್ನು ಎರಡನೇ ದರ್ಜೆ ನಾಗರೀಕರಂತೆ ಪರಿಗಣಿಸಲಾಗಿದ್ದು, ಯಾವುದೇ ಇಲಾಖೆಯಲ್ಲೂ ಮೊದಲ ಆದ್ಯತೆ ಸಿಗುತ್ತಿಲ್ಲ. ನಿಯಮ ಮೀರಿ ವೀಸಾ ಅವಧಿಯಲ್ಲಿರುವ ವಿದೇಶಿಯರನ್ನು ಜೈಲಿಗೆ ತಳ್ಳಲಾಗಿದೆ. ಭಾರತ ಅಥವಾ ಅವರ ದೇಶಕ್ಕೆ ಮರಳಲು ಕೂಡಾ ಅವಕಾಶ ನೀಡುತ್ತಿಲ್ಲ ಎಂಬ ಕೂಗೆದ್ದಿದೆ.












Click it and Unblock the Notifications