ಜುಲೈನಿಂದ ಕಡೂರು-ಚಿಕ್ಕಮಗಳೂರು ರೈಲು ಚುಕುಬುಕು

2012ರಲ್ಲಿ ಸಖರಾಯಪಟ್ಟಣದವರೆಗೂ ಹಾಗೂ 2013ರಲ್ಲಿ ಸಂಪೂರ್ಣ ಕಾಮಗಾರಿ ಮುಗಿಯಲಿದೆ ಎಂದು ಡಿವಿ ಸದಾನಂದ ಗೌಡರು ವಿಧಾನ ಪರಿಷತ್ ನಲ್ಲಿ 2011ರಲ್ಲಿ ಹೇಳಿದ್ದರು. ಅದರಂತೆ, ರೈಲು ಮಾರ್ಗ ಸಂಪೂರ್ಣ ಸಿದ್ಧವಾಗಿದ್ದು, ಚಿಕ್ಕಮಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಜಲ್ಲಿ ಸರಿಪಡಿಸುವ ಇಂಜಿನ್ ಓಡಾಟ ನಡೆಸಲಾಗಿದೆ.
ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯ ಮುಗಿಸಲು ಭಾರತೀಯ ರೈಲ್ವೆ ಸಿಬ್ಬಂದಿ ಯೋಜಿಸಿದ್ದಾರೆ. ಕಡೂರಿನಿಂದ ಚಿಕ್ಕಮಗಳೂರಿನವರೆಗೂ ರೈಲು ಮಾರ್ಗದಲ್ಲಿ ಜಲ್ಲಿ ಕಲ್ಲು ಸರಿಪಡಿಸುವ ಹಾಗೂ ಬಿಗಿಗೊಳಿಸುವ ಇಂಜಿನ್ ಯಶಸ್ವಿಯಾಗಿ ಓಡಾಟ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ ತಿಂಗಳ ಅಂತ್ಯದವರೆಗೂ ರೈಲ್ವೇ ಮಾರ್ಗ ಸದೃಢಗೊಳಿಸುವ ಕೆಲಸ ಸಾಗಲಿದೆ. ಜುಲೈ ತಿಂಗಳಲ್ಲಿ ಕಡೂರು -ಚಿಕ್ಕಮಗಳೂರು ಮಾರ್ಗದಲ್ಲಿ ನಿರಂತರವಾಗಿ ರೈಲು ಓಡಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಚಿಕ್ಕಮಗಳೂರಿಗೆ ಮೊದಲಿಗೆ ಗೂಡ್ಸ್ ಗಾಡಿಗಳನ್ನು ಮಾತ್ರ ಬಿಡಲಾಗುತ್ತೆ. ನಂತರದ ದಿನಗಳಲ್ಲಿ ಕಡೂರಿನಿಂದ ಪ್ಯಾಸೆಂಜರ್ ಟ್ರೈನ್ ಹೊರಡಲಿದೆ. ಚಿಕ್ಕಮಗಳೂರಿನಿಂದ ಮುಂದಕ್ಕೆ ಹಾಸನಕ್ಕೆ ಸಂಪರ್ಕ ಕಲ್ಪಿಸುವವರೆಗೂ ಕಡೂರಿನಿಂದ ದಿನಕ್ಕೆ ಯಾವುದಾದರೂ ಒಂದು ಟ್ರೈನ್ ಮಾತ್ರ ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇದರ ಜೊತೆಗೆ ಗೂಡ್ಸ್ ಗಾಡಿಗಳು ನಿರಂತರ ಸಂಚಾರ ಮುಂದುವರೆಸಲಿದೆ.ಈ ಮಾರ್ಗದಲ್ಲಿರುವ ರೈಲು ನಿಲ್ದಾಣ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಹಿರೇಮಗಳೂರು ಮಧ್ಯೆ ಸಾಗುವ ಮುಖ್ಯರಸ್ತೆಯಿಂದ ಸಂಪರ್ಕಿಸುವ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಚುಕುಬುಕು ಕಥೆ: ಮೊದಲ ಹಂತದಲ್ಲಿ ಕಣಿವೆ ಹಳ್ಳವರೆಗೂ 25 ಕಿ.ಮೀ ಮುಗಿಸಲಾಗಿದೆ. ನಂತರ ಉಳಿದ 21 ಕಿ.ಮೀ ಕಾಮಗಾರಿ ಸಂಪೂರ್ಣಗೊಳಿಸಲಾಗಿದೆ.
ಸುಮಾರು 456 ಕೋಟಿ ವೆಚ್ಚದ ಯೋಜನೆಗೆ 80 ಕೋಟಿ ರು ಹೆಚ್ಚಿಗೆ ಅನುದಾನ ಸಿಕ್ಕಿದೆ. 10.18 ಎಕರೆ ಪ್ರದೇಶದಲ್ಲಿ ಕಣಿವೆ ಹಳ್ಳಿ ರೈಲ್ವೇ ಸ್ಟೇಷನ್ ನಿರ್ಮಾಣಕ್ಕೆ 4.77 ಲಕ್ಷ ರೂ ಹೆಚ್ಚುವರಿಯಾಗಿ ಸಿಕ್ಕಿದೆ. ಹಿರೇಮಗಳೂರು ನಿಲ್ದಾಣ 35.20 ಎಕರೆ ವಿಸ್ತೀರ್ಣದಲ್ಲಿ 94.39 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ.
ರಾಮನಹಳ್ಳಿ, ಬಿಸಲೆಹಳ್ಳಿ, ಸಖರಾಯಪಟ್ಟಣದಲ್ಲಿ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಳಿತ ಅಗತ್ಯ ಭೂಮಿಯನ್ನು ಸರ್ಕಾರ ಒದಗಿಸಿದೆ [ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಪರಿಚಯ ಓದಿ]


Click it and Unblock the Notifications
