ಪಾಸ್ ಪೋರ್ಟ್ ಮೇಳ, ಮಿಸ್ ಮಾಡ್ಕೋಬೇಡಿ

ಮೊದಲ ಪಾಸ್ ಪೋರ್ಟ್ ಮೇಳ ಜೂನ್ 8 ರಂದು ನಡೆಯಲಿದೆ. ಮುಂಚಿತವಾಗಿ ಬಂದು ಭೇಟಿ ಸಮಯ ಪಡೆದುಕೊಂಡ ಆಧಾರದ ಮೇಲೆ ಅಧಿಕಾರಿಗಳ ಭೇಟಿಗೆ ಅವಕಾಶ ನೀಡಲಾಗುತ್ತದೆ. ಈ ಮೇಳದಲ್ಲಿ ಭಾಗವಹಿಸಲು ಜೂನ್ 1 ರಿಂದ ಭೇಟಿ ಸಮಯ ನೀಡಲಾಗುತ್ತದೆ. ನಾಗರಿಕರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಗೆ ತೆರಳಿ ಭೇಟಿ ಸಮಯದ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು ಎಂದರು.
ಸಮಯ ವಿಸ್ತರಣೆ: ಭೇಟಿ ಸಮಯವನ್ನು ಈಗಿರುವ 6 ಗಂಟೆಯಿಂದ 6.30ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಮದನಕುಮಾರ್ ರೆಡ್ಡಿ ತಿಳಿಸಿದ್ದಾರೆ. ಕೋರಮಂಗಲ ಪ್ರಾದೇಶಿಕ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೆಡ್ಡಿ, ಪಾಸ್ ಪೋರ್ಟ್ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿಲೇವಾರಿಯಾಗದೆ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನ ಬಾಕಿ ಉಳಿದಿರುವ ಅರ್ಜಿ ಪ್ರಕರಣಗಳ ಪರಿಹರಿಸಲು ಮೇ 29 ರಂದು ಪಾಸ್ ಪೋರ್ಟ್ ಅದಾಲತ್ ಆಯೋಜಿಸಲಾಗಿದೆ. ಭಾರತೀಯ ಪಾಸ್ ಪೋರ್ಟ್ ಗಳ ಭದ್ರತೆಯನ್ನು ಹೆಚ್ಚಿಸಲು, ಮಾಹಿತಿಗಳು ಹಾಗೂ ಫೋಟೋಗಳ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಪಾಸ್ ಪೋರ್ಟ್ ಪುಸ್ತಕದಲ್ಲಿನ ಪುಟದಲ್ಲಿರುವ ಮಾಹಿತಿಗಳನ್ನು ಬದಲಿಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.
ತತ್ಕಾಲ್ ವ್ಯವಸ್ಥೆ: ತುರ್ತು ಪಾಸ್ ಪೋರ್ಟ್ ಪಡೆದುಕೊಳ್ಳಲು ಇರುವ ತತ್ಕಾಲ್ ವ್ಯವಸ್ಥೆಯ ಹೊರತಾಗಿ ಶಿಕ್ಷಣ, ವೈದ್ಯಕೀಯ, ವೀಸಾ ಸಂದರ್ಶನ, ಉದ್ಯೋಗ ಮುಂತಾದ ಕಾರಣಗಳಿಗಾಗಿ ಪಾಸ್ ಪೋರ್ಟ್ ತುರ್ತು ಅಗತ್ಯತೆ ಇದ್ದಲ್ಲಿ ಈ ಸಂಬಂಧ ದಾಖಲೆ ಪತ್ರಗಳಲ್ಲಿ ಹಾಜರುಪಡಿಸಿದಲ್ಲಿ ಅಂಥವರಿಗೆ ಬೇಗ ಪಾಸ್ ಪೋರ್ಟ್ ತಲುಪಿಸುವ ವ್ಯವಸ್ಥೆಮಾಡಲಾಗುತ್ತದೆ.
ತುರ್ತು ಅಗತ್ಯವಿದ್ದವರು ಕಚೇರಿ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಭೇಟಿ ಮಾಡಬಹುದು. ಮೇ 23ರಿಂದ ತತ್ಕಾಲ್ ಅರ್ಜಿಗಳನ್ನು ವಾಕ್-ಇನ್ ವರ್ಗದಲ್ಲಿ ಸೇರಿಸಲಾಗುತ್ತದೆ. ಅಂತವರು ಅರ್ಜಿ ಉಲ್ಲೇಖ ಸಂಖ್ಯೆಯೊಂದಿಗೆ ಬೆಳಿಗ್ಗೆ 9.30 ರಿಂದ ಬೆಳಿಗ್ಗೆ 11 ಗಂಟೆಯ ಒಳಗೆ ನೇರವಾಗಿ ಪಾಸ್ ಪೋರ್ಟ್ ಕಚೇರಿಗೆ ತೆರಳಬಹುದಾಗಿದೆ.
ಪ್ರತಿದಿನ 1660 ಸಂದರ್ಶನ ಮಾತ್ರ ನಿಗದಿ ಮಾಡಲಾಗಿದೆ. ಸೇವಾ ಕೇಂದ್ರಗಳಿಂದ ಮಾಸಿಕ ಅಂದಾಜು 60 ಸಾವಿರ ಸಂದರ್ಶನಗಳನ್ನು ನಿಗದಿ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಪಾಸ್ ಪೋರ್ಟ್ ಕಚೇರಿ ವೆಬ್ ತಾಣ ವೀಕ್ಷಿಸಿ ಆನ್ ಲೈನ್ ನಲ್ಲಿ 28,220 ಸಂದರ್ಶನಗಳು ಲಭ್ಯ ಎಂದು ರೆಡ್ಡಿ ವಿವರಿಸಿದರು.












Click it and Unblock the Notifications