ಮೇಲ್ಮನೆಯಲ್ಲಿ ಬಿಜೆಪಿ ಪ್ರಾಬಲ್ಯ, ಸರ್ಕಾರಕ್ಕೆ ಇಕ್ಕಟ್ಟು

ವಿಧಾನ ಪರಿಷತ್ ಸದಸ್ಯರ ಒಟ್ಟು ಸಂಖ್ಯೆ 75. ಇವರಲ್ಲಿ ಬಿಜೆಪಿಯ 39 ಸದಸ್ಯರಿದ್ದಾರೆ. ಜೆಡಿಎಸ್ 12 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ ಕೇವಲ 17 ಸದಸ್ಯ ಬಲ ಹೊಂದಿದೆ. ಆದ್ದರಿಂದ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಮಸೂದೆಗಳಿಗೆ ಅಂಗೀಕಾರ ಪಡೆಯಲು ಬಿಜೆಪಿ ಮೇಲೆ ಅವಲಂಬಿಸುವುದು ಅನಿವಾರ್ಯ.
ಆಡಳಿತ ಪಕ್ಷ ಮಂಡಿಸಿದ ಮಸೂದೆಗಳನ್ನು ವಿರೋಧ ಪಕ್ಷಗಳು ಯಾವುದೇ ತಕರಾರು ಇಲ್ಲದೆ ಅನುಮೋದನೆಗೊಳಿಸಿದರೆ ಸರಿ. ವಿವಾದಾತ್ಮಕ ನಿರ್ಧಾರಗಳು, ಕಾನೂನು ತಿದ್ದುಪಡಿ ನಿಯಮಗಳಿಗೆ ವಿಧಾನ ಪರಿಷತ್ ನಲ್ಲಿ ವಿರೋಧ ಎದುರಾರೆ, ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಉಂಟಾಗಲಿದೆ. (ಜುಲೈನಲ್ಲಿ ಬಜೆಟ್ ಅಧಿವೇಶನ ಸಾಧ್ಯತೆ: ಸಿದ್ದರಾಮಯ್ಯ)
ಸದ್ಯ ವಿಧಾನ ಪರಿಷತ್ತಿನ ಐದು ಸ್ಥಾನಗಳು ಖಾಲಿ ಉಳಿದಿವೆ. ಚುನಾವಣೆ ನಡೆದು ಕಾಂಗ್ರೆಸ್ ಐದು ಸ್ಥಾನಗಳಲ್ಲೂ ಜಯಗಳಿಸಿದರೂ, ಬಿಜೆಪಿಗಿಂತ ಹೆಚ್ಚಿನ ಸದಸ್ಯ ಬಲ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಮೇಲ್ಮನೆಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವುದು ಖಚಿತ.
ಕಾನೂನು ತಿದ್ದುಪಡಿಯ ವಿಧೇಯಕ ಮತ್ತು ಹಣಕಾಸು ಮಸೂದೆಗಳು ವಿಧಾನಪರಿಷತ್ತಿನಲ್ಲಿ ಕಡ್ಡಾಯವಾಗಿ ಅನುಮೋದನೆ ಆಗಬೇಕು. ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರು ಹೆಚ್ಚಾಗಿರುವುದರಿಂದ ಮಸೂದೆಗಳಿಗೆ ಅಂಗೀಕಾರ ಪಡೆಯಲು ಬಿಜೆಪಿಯ ಕೃಪಾಕಟಾಕ್ಷ ಆಡಳಿತ ಪಕ್ಷಕ್ಕೆ ಅನಿವಾರ್ಯ.
ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಷತ್ತಿನಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಬಿಜೆಪಿ ಮಂಡಿಸಿದ್ದ ಹಲವು ವಿಧೇಯಕಗಳಿಗೆ ಅನುಮೋದನೆ ನೀಡದೆ, ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಸದ್ಯ ಇದೇ ಪರಿಸ್ಥಿತಿ ಉಂಟಾಗಬಹುದು.
ಸದಾನಂದಗೌಡರು ನಾಯಕ : ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕಾರ್ಯ ನಿರ್ವಹಿಸುತ್ತಾರೆ ಎಂದು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೂ ಡಿ.ವಿ.ಸದಾನಂದಗೌಡರನ್ನು ಪರಿಷತ್ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.
ವಿಧಾನ ಪರಿಷತ್ ಬಲಾಬಲ
ಬಿಜೆಪಿ - 39
ಕಾಂಗ್ರೆಸ್ - 17
ಜೆಡಿಎಸ್ - 12
ಪಕ್ಷೇತರ - 1
ಖಾಲಿ - 5
ಸಭಾಪತಿ - 1
ಒಟ್ಟು - 75












Click it and Unblock the Notifications