ಕಾರ್ಯಕರ್ತೆಯ ಮೇಲೆ ಬಿಜೆಪಿ ಮಾಜಿ ಶಾಸಕನ ರೇಪ್

ಮದುವೆಯಾಗುವುದಾಗಿ ಹೇಳಿ 20 ವರ್ಷಗಳಿಂದ ಮಧು ಚವಾಣ್ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ ಎಂದು 50 ವರ್ಷದ ಮಹಿಳೆಯೊಬ್ಬರು ಕಾಲಾ ಚೌಕಿ ಪೊಲೀಸ್ ಠಾಣೆಯಲ್ಲಿ ಮೊನ್ನೆ ಮಂಗಳವಾರ ರಾತ್ರಿ ದೂರು ನೀಡಿದ್ದಾರೆ.
'1993ರಲ್ಲಿ ಮಧು ಚವಾಣ್ ಅವರೊಂದಿಗೆ ನನ್ನ ಪರಿಚಯವಾಯ್ತು. ಅಲ್ಪಾವಧಿಯಲ್ಲಿ ನಮ್ಮ ನಡುವೆ ಲೈಂಗಿಕ ಸಂಬಂಧ ಏರ್ಪಟ್ಟಿತು. ತದನಂತರ ಆತ ನನಗೆ ಹಲವು ಭರವಸೆಗಳನ್ನು ನೀಡಿದ್ದರು' ಎಂದು ಬಿಜೆಪಿಯ ಮಾಜಿ ಕಾರ್ಯಕರ್ತೆಯೂ ಆದ ಬಾಧಿತ ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
'1993ರಿಂದಲೂ ಮಧು ಚವಾಣ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ. ಆತ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ನನ್ನನ್ನು ಮದುವೆಯಾಗುವುದಾಗಿಯೂ, ನನಗೆ ಫ್ಲಾಟ್ ಖರೀದಿಸುವುದಾಗಿಯೂ ಭರವಸೆ ನೀಡಿರುವುದಾಗಿ ಬಾಧಿತ ಮಹಿಳೆ ಅಲವತ್ತುಕೊಂಡಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.
2005ರಲ್ಲಿ ಚವಾಣ್ ತನ್ನನ್ನು ಮುಂಬೈನ ದೇವಸ್ಥಾನವೊಂದಕ್ಕೆ ಕರೆದೊಯ್ದ. ಅಲ್ಲಿ ಪರಸ್ಪರ ಉಂಗುರ ಮತ್ತು ಹಾರ ವಿನಿಮಯ ಮಾಡಿಕೊಂಡೆವು. ಆ ಬಳಿಕ ತಾವು ವಿವಾಹವಾಗಿದ್ದೇವೆ ಎಂದು ಚವಾಣ್ ಘೋಷಿಸಿದ ಎಂಬುದಾಗಿಯೂ ಮಹಿಳೆ ಆರೋಪಿಸಿದ್ದಾರೆ.
ಪೊಲೀಸರು ಚವಾಣ್ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 420 (ವಂಚನೆ) ಮತ್ತು 493 (ಮದುವೆಯ ನಂಬಿಕೆ ಹುಟ್ಟಿಸಿ ಸಹ ವಾಸ) ಪರಿಚ್ಛೇದಗಳನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂದಿನ ಕ್ರಮ ತೆಗೆದುಕೊಳ್ಳುವ ಮೊದಲು ಆರೋಪಗಳ ಕುರಿತು ಪರಿಶೀಲನೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದು, ಶೀಘ್ರವೇ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದೇವೆ ಎಂದಿದ್ದಾರೆ.












Click it and Unblock the Notifications