ಶಿರಡಿ ದೇಗುಲಕ್ಕೆ 305 ಕೋಟಿ ರು ದೇಣಿಗೆ

ಈ 305.39 ಕೋಟಿಯಲ್ಲಿ ಕೇವಲ ದೇವಸ್ಥಾನದಲ್ಲಿರುವ ಕಾಣಿಕೆ ಡಬ್ಬಿಯಿಂದಲೇ 176 ಕೋಟಿ ಸಂಗ್ರಹವಾಗಿದೆ. ಇದಲ್ಲದೆ 22 ದೇಶಗಳ ಕರೆನ್ಸಿ ಮೂಲಕ 10 ಕೋಟಿಯಷ್ಟು ಕಾಣಿಕೆ ಬಂದಿದೆ. ಜತೆಗೆ, ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳ ಮೂಲಕ 15.54 ಕೋಟಿ ಮೊತ್ತದ ಕಾಣಿಕೆ ಹರಿದು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 50 ಕೋಟಿ ರು ಆಭರಣಗಳ ಮೂಲಕ ಬಂದಿತ್ತು.
ಮಿಕ್ಕಂತೆ ಉಳಿದ ಹಣ ಚೆಕ್,ಡಿಡಿ ಮನಿಯಾರ್ಡರ್ ಮತ್ತು ಕೌಂಟರ್‌ನಲ್ಲಿರುವ ಹಣದ ರಶೀದಿಗಳ ಮೂಲಕ ಹರಿದು ಬಂದಿದೆ ಎಂದು ಟ್ರಸ್ಟ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2012-13ರ ಆರ್ಥಿಕ ವರ್ಷದ ಅಂತ್ಯಕ್ಕೆ ಶಿರಡಿ ಸಾಯಿಬಾಬಾ ದೇಗುಲದ ಟ್ರಸ್ಟ್ ನ ನಿಶ್ಚಿತ ಠೇವಣಿ ಮೊತ್ತ 860 ಕೋಟಿ ಆಗಿದ್ದು, ಬ್ಯಾಂಕುಗಳಲ್ಲಿ 300 ಕೆಜಿ ಚಿನ್ನ ಹಾಗೂ 3,000 ಕೆಜಿ ಬೆಳ್ಳಿ ಇಡಲಾಗಿದೆ.
ಮಂದಿರದ ಸುಗಮ ಆಡಳಿತಕ್ಕಾಗಿ ಮಹಾರಾಷ್ಟ್ರ ಸರಕಾರವು 2004ರಲ್ಲಿ ಈ ಟ್ರಸ್ಟ್‌ನ್ನು ರಚಿಸಿತ್ತು. 2011-12ನೇ ಹಣಕಾಸು ವರ್ಷದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯ ನಿರಖು ಠೇವಣಿಗಳ ಮೊತ್ತದಲ್ಲಿ 1,38,06,28,921 ರೂ.ಗಳ ಏರಿಕೆಯಾಗಿತ್ತು.
ಶಿರಡಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 45 ಕೋ.ರೂ. ಮತ್ತು 24,69,239 ರೂ.ವೆಚ್ಚದಲ್ಲಿ ಲಂಡನ್ನಿನಲ್ಲಿ ಸಾಯಿ ಭಜನ್ ಸಂಧ್ಯಾ ಸೇರಿದಂತೆ ಒಟ್ಟು 76,74,26,961 ರೂ.ಗಳನ್ನು ಟ್ರಸ್ಟ್ ವಿವಿಧ ದತ್ತಿಕಾರ್ಯಗಳಿಗಾಗಿ ವ್ಯಯಿಸಿದೆ.
ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, ಕಳೆದ ಮೂರು ಆರ್ಥಿಕ ವರ್ಷದಲ್ಲಿ 20 ಕೋಟಿ ರು ಬಂದಿದೆ ಎಂದು ಟ್ರಸ್ಟಿ ಎಂ ಕಿಶೋರ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications