ಶಾರುಖ್ ಮೇಲೆ 100 ಕೋಟಿ ಕ್ರಿಮಿನಲ್ ಕೇಸ್
ಮುಂಬೈ, ಏ.3: ಇಂಡಿಯನ್ ಪ್ರಿಮಿಯರ್ ಲೀಗ್ 6ನೇ ಆವೃತ್ತಿ ಉದ್ಘಾಟನಾ ಸಮಾರಂಭದ ಉಸ್ತುವಾರಿ ವಹಿಸಿಕೊಂಡಿದ್ದ ಶಾರುಖ್ ಖಾನ್ ಸುಸ್ತಾಗಿ ಮನೆಗೆ ಮರಳುವಷ್ಟರಲ್ಲೇ ಆಘಾತಕಾರಿ ಸುದ್ದಿ ಸಿಕ್ಕಿದೆ. ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ರಿಂದ 100 ಕೋಟಿ ಡಿಮ್ಯಾಂಡ್ ಮಾಡಲಾಗಿದೆ.
ಹಿಂದಿ ಚಿತ್ರರಂಗದ ಹಿರಿಯ ನಟ ಮನೋಜ್ ಕುಮಾರ್ ಹಾಗೂ ಶಾರುಖ್ ಖಾನ್ ಅವರ ನಡುವಿನ ಕದನ ಇನ್ನೂ ಬಗೆಹರಿದಿಲ್ಲ. 2007ರಲ್ಲಿ ತೆರೆ ಕಂಡ ಓಂ ಶಾಂತಿ ಓಂ ಚಿತ್ರದಲ್ಲಿ ಮನೋಜ್ ಕುಮಾರ್ ಅವರನ್ನು ಅವಹೇಳನ ಮಾಡುವಂತೆ ಒಂದು ದೃಶ್ಯವಿತ್ತು. ಇದರ ವಿರುದ್ಧ ಕೂಡಲೇ ಮನೋಜ್ ಕುಮಾರ್ ಅವರು ಕಿಡಿಕಾರಿದ್ದರು.

ಆದರೆ, ಪ್ರಕರಣ ಇಷ್ಟಕ್ಕೆ ನಿಲ್ಲಲಿಲ್ಲ. ಏ.2 ರಂದು ಶಾರುಖ್ ಖಾನ್ ಹಾಗೂ ಎರೋಸ್ ಇಂಟರ್ ನ್ಯಾಷನಲ್ ಹಾಗೂ ಚಿತ್ರದ ನಿರ್ಮಾಪಕರನ್ನು ಮುಂಬೈ ಕೋರ್ಟಿಗೆ ಮನೋಜ್ ಎಳೆದಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್, ನೃತ್ಯ ನಿರ್ದೇಶಕಿ ಕಮ್ ನಿರ್ದೇಶಕಿ ಫರ್ಹಾ ಖಾನ್ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. 2007ರ ಚಿತ್ರದಿಂದ ನನಗೆ ಮಾನನಷ್ಟವಾಗಿದೆ 100 ಕೋಟಿ ರು ಪರಿಹಾರ ಕೋರುತ್ತಿದ್ದೇನೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಏ.6ಕ್ಕೆ ಮುಂದೂಡಲ್ಪಟ್ಟಿದೆ. 2007ರಲ್ಲಿ ಚಿತ್ರದ ಅವಹೇಳನಕಾರಿ ದೃಶ್ಯದ ವಿರುದ್ಧ ವಿರೋಧ ವ್ಯಕ್ತವಾದಾಗ ಆ ದೃಶ್ಯಗಳನ್ನು ಕತ್ತರಿಸುವ ಭರವಸೆ ನೀಡಲಾಗಿತ್ತು. ಆದರೆ, ಇತ್ತೀಚೆಗೆ ಜಪಾನ್ ನಲ್ಲಿ ಚಿತ್ರ ತೆರೆ ಕಂಡಿದ್ದು, ಯಾವುದೇ ದೃಶ್ಯಗಳನ್ನು ತೆಗೆದು ಹಾಕಿಲ್ಲ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.
2008ರಲ್ಲಿ ಮುಂಬೈ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಚಿತ್ರ ನಿರ್ಮಾಪಕರು ಹಾಗೂ ಶಾರುಖ್ ಖಾನ್ ಮೀರಿದ್ದಾರೆ. ಜಪಾನ್ ನಲ್ಲಿ ಚಿತ್ರ ಬಿಡುಗಡೆ ಮಾಡಿರುವುದರ ಹಿಂದೆ ಯಾವ ದುರುದ್ದೇಶ ಅಡಗಿದೆಯೋ ಗೊತ್ತಿಲ್ಲ. ಎರಡು ಬಾರಿ ನಾನು ಕ್ಷಮಿಸಿದ್ದೇನೆ. ಈ ಬಾರಿ ಸಾಧ್ಯವಿಲ್ಲ. ಎಲ್ಲಾ ಪ್ರಿಂಟ್ ಗಳಲ್ಲೂ ಅವಹೇಳನಕಾರಿ ದೃಶ್ಯಗಳನ್ನು ಡಿಲಿಟ್ ಮಾಡಲು ಕೋರ್ಟ್ ಸೂಚಿಸಿತ್ತು. ಆದರೆ, ನ್ಯಾಯಾಂಗ ಉಲ್ಲಂಘನೆ ಮಾಡಿದ್ದಾರೆ.
ಶಾರುಖ್ ಖಾನ್ ಹಾಗೂ ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ನನಗಾದ ನಷ್ಟಕ್ಕೆ 100 ಕೋಟಿ ರು ಪರಿಹಾರ ಕೋರುವುದು ಕಡಿಮೆಯಾಗಿದೆ ಎಂದು ಮನೋಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 2008ರಲ್ಲಿ ಪ್ರಕರಣ ಉಲ್ಬಣಗೊಂಡು ಕುತ್ತಿಗೆಗೆ ಬಂದಾಗ ಶಾರುಖ್ ಖಾನ್ ಅವರು ಬಹಿರಂಗವಾಗಿ 'ಉಪಕಾರ್' ಚಿತ್ರ ಖ್ಯಾತಿಯ ನಟ ಮನೋಜ್ ಅವರ ಕ್ಷಮೆಯಾಚಿಸಿದ್ದರು. ಮನೋಜ್ ಕುಮಾರ್ ಅವರನ್ನು ಅಣಕಿಸಿರುವ ದೃಶ್ಯಕ್ಕೆ ಕತ್ತರಿ ಹಾಕುವ ಭರವಸೆ ನೀಡಿದ್ದರು.












Click it and Unblock the Notifications